ಶ್ರೀಮಂಗಲ, ಅ. 5: ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿಯು (ಎಸ್.ಎಲ್.ಬಿ.ಸಿ) ಮುಂದಿನ 8 ತಿಂಗಳವರೆಗೆ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಿದ್ದು, ಇದರಿಂದ ಸತತ 2 ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಬೆಳೆನಷ್ಟದಿಂದ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಯಾವದೇ ಪ್ರಯೋಜನವಾಗುವದಿಲ್ಲ. ಎಸ್.ಎಲ್.ಬಿ.ಸಿ ಯ ಈ ಸುತ್ತೋಲೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೊಡಗು ಬೆಳೆಗಾರರ ಒಕ್ಕೂಟ, ಬೆಳೆಗಾರರ ಸಂಪೂರ್ಣ ಸಾಲಮನ್ನಾ ಮಾಡುವ ಮನವಿಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದೆ.

ಗೋಣಿಕೊಪ್ಪ ಸಿಲ್ವರ್‍ಸ್ಕೈ ಹೊಟೇಲ್ ಸಭಾಂಗಣದಲ್ಲಿ ಕೊಡಗು ಬೆಳೆಗಾರರ ಒಕ್ಕೂಟದ ಆಶ್ರ್ರಯದಲ್ಲಿ ನಡೆದ ಬೆಳೆಗಾರರ ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆಯಿತು. ಸೆಪ್ಟೆÉ್ಟಂಬರ್ 30ರಂದು ಮಡಿಕೇರಿಯಲ್ಲಿ ಜಿಲ್ಲಾಮಟ್ಟದ ಬ್ಯಾಂಕರ್ಸ್ ಸಮಿತಿ ಸಭೆ ನಡೆದಿದೆ. ಈ ಸಭೆಗೆ ಮುನ್ನ ಬೆಳೆಗಾರರ ಸಮಸ್ಯೆ ಬಗ್ಗೆ ಡಿ.ಎಲ್.ಬಿ.ಸಿ ಯ ಆಧ್ಯಕ್ಷೆ ಜಿ.ಪಂ. ಸಿ.ಇ.ಒ ಲಕ್ಷ್ಮಿಪ್ರಿಯ ಮತ್ತು ಶಾಸಕರು ಮತ್ತು ಸಂಸದರಿಗೆ ಮನವಿ ಸಲ್ಲಿಸಲಾಗಿದೆ. ಇವರೆಲ್ಲರ ಉಪಸ್ಥಿತಿಯಲ್ಲಿ ಡಿ.ಎಲ್.ಬಿ.ಸಿ.ಯ ಸಭೆ ನಡೆದಿದ್ದು, ಡಿ.ಎಲ್.ಬಿ.ಸಿಯ ಸಭೆಯ ಶಿಫಾರಸ್ಸಿನಂತೆ ಎಸ್.ಎಲ್.ಬಿ.ಸಿ ಆದೇಶ ಮಾಡುತ್ತದೆ. ಆದರೆ ಜಿಲ್ಲೆಯ ಬೆಳೆಗಾರರ ಸಂಕಷ್ಟ ಅರಿಯದೆ ಕೇವಲ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಿರುವದು ಯಾವದೇ ಪ್ರಯೋಜನಕ್ಕೆ ಬರುವದಿಲ್ಲ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.

ಪುನರ್‍ವಸತಿಗೆ ವಿರೋಧ: ಸಿದ್ದಾಪುರದಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಕೆಲವು ಕಾರ್ಮಿಕ ಮುಖಂಡರು ಬೆಳೆಗಾರರು ಮತ್ತು ಕಾರ್ಮಿಕರ ನಡುವಿನ ಸಾಮರಸ್ಯವನ್ನು ತಮ್ಮ ಸ್ವಾರ್ಥಕ್ಕಾಗಿ ಕದಡುವ ಮತ್ತು ಪ್ರಚೋದಿಸುವ ಮಾತನಾಡಿರುವದನ್ನು ಸಭೆಯಲ್ಲಿ ಖಂಡಿಸಲಾಯಿತು.

ಕೊಡಗಿನಲ್ಲಿ ನದಿದಡ ಒತ್ತುವರಿ ಮಾಡಿಕೊಂಡು ನೆರೆಗೆ ಸಿಲುಕಿದ್ದು ಇವರು ತಮ್ಮ ಸ್ವಯಂಕೃತ ಅಪರಾಧದಿಂದ ಅನಧಿಕೃತ ಸಂತ್ರಸ್ತರಾಗಿದ್ದಾರೆ. ಇಂತಹವರಿಗೆ ಪುನರ್‍ವಸತಿ ಕಲ್ಪಿಸಲು ಬೆಳೆಗಾರರ ಸ್ವಾಧೀನದ ಜಾಗ ಮತ್ತು ಕಾಫಿತೋಟಗಳನ್ನು ಸರ್ಕಾರ ತೆರವುಗೊಳಿಸುವದಕ್ಕೆ ಒಕ್ಕೂಟ ವಿರೋಧ ವ್ಯಕ್ತಪಡಿಸುತ್ತದೆ. ಅನಧಿಕೃತ ಸಂತ್ರಸ್ತರಿಗೆ ಒಂದುವೇಳೆ ಸರ್ಕಾರ ಪುನರ್‍ವಸತಿ ಕಲ್ಪಿಸಲು ಪ್ರಯತ್ನಿಸಿದರೆ ಜಿಲ್ಲೆಯಲ್ಲಿ ಮತ್ತಷ್ಟು ಅನಧಿಕೃತ ಒತ್ತುವರಿ ಮತ್ತು ನದಿದಡಗಳ ಒತ್ತುವರಿ ಹೆಚ್ಚಾಗಲಿದ್ದು, ಕಾನೂನು ಉಲ್ಲಂಘಿಸುವವರಿಗೆ ಸರ್ಕಾರವೇ ರತ್ನಗಂಬಳಿ ಹಾಸಿ ಸೌಲಭ್ಯ ನೀಡಲು ಮುಂದಾದರೆ ಈ ಬಗ್ಗೆ ಒಕ್ಕೂಟದಿಂದ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಲಾಯಿತು.

ಓಟ್ ಬ್ಯಾಂಕ್‍ಗಾಗಿ ರಾಜಕಾರಣಿಗಳು ಅನಧಿಕೃತ ನೆರೆ ಸಂತ್ರಸ್ತರಿಗೆ ಪುನರ್‍ವಸತಿ ಕಲ್ಪಿಸಲು ಬೆಂಬಲ ನೀಡುತ್ತಿದ್ದು, ಇದರಿಂದ ನೈಜ ಸಂತ್ರಸ್ತರ ಸಮಸ್ಯೆಗೆ ಪರಿಹಾರ ದೊರೆಯದೆ ನೆನೆಗುದಿಗೆ ಬೀಳುವಂತಾಗಿದೆ.

ಕೊಡಗಿನಲ್ಲಿರುವ ಸಾಂಪ್ರದಾಯಿಕ ಕಾಫಿ ಬೆಳೆ ಪ್ರದೇಶ ಹಾಗೂ ಕೃಷಿಭೂಮಿಯನ್ನು ಪುನರ್‍ವಸತಿ ಕಲ್ಪಿಸಲು ಸರ್ಕಾರ ಮುಂದಾಗ ಬಾರದು. ಜಿಲ್ಲೆಯಲ್ಲಿನ ಮಾಜಿ ಸೈನಿಕರು, ಕ್ರೀಡಾಪಟುಗಳು, ಪೊಲೀಸ್, ಅರೆಸೇನೆಯಲ್ಲಿ ಸೇವೆಸಲ್ಲಿಸುತ್ತಿರುವವರಿಗೆ ಸೂಕ್ತ ಜಾಗವನ್ನು ಸರ್ಕಾರ ಮಂಜೂರು ಮಾಡಲು ಆದ್ಯತೆ ನೀಡಬೇಕು. ಜಿಲ್ಲೆಯ ಮೂಲನಿವಾಸಿಗಳು ಪ್ರಾಕೃತಿಕ ವಿಕೋಪದ ಭೂಕುಸಿತದಿಂದ ಅಸುರಕ್ಷಿತ ಜಾಗದಲ್ಲಿದ್ದು, ಇವರಿಗೆ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತ ಪ್ರಥಮ ಆದ್ಯತೆ ನೀಡಬೇಕೆಂದು ಒಕ್ಕೂಟ ಒತ್ತಾಯಿಸಿದೆ.

ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ವಹಿಸಿದ್ದರು. ಸಭೆಯಲ್ಲಿ ಜಂಟಿ ಕಾರ್ಯದರ್ಶಿ ಮಾಚಂಗಡ ದಾದಾದೇವಯ್ಯ, ಕಾರ್ಯದರ್ಶಿ ಅಣ್ಣೀರ ಹರೀಶ್‍ಮಾದಪ್ಪ, ಖಜಾಂಚಿ ಮಾಣೀರ ವಿಜಯ್‍ನಂಜಪ್ಪ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿಸುಬ್ಬಯ್ಯ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್‍ಮಾದಪ್ಪ, ಒಕ್ಕೂಟದ ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ಪ್ರಮುಖರಾದ ಬೊಳ್ಳೇರ ಕೆ.ಪೊನ್ನಪ್ಪ, ಕೆ.ಎನ್. ಸುನಂದ, ಎ.ಪಿ.ಗಿರೀಶ್, ಚೇಂದೀರ ಸುಮಿ ಸುಬ್ಬಯ್ಯ, ಮೀದೇರಿರ ಕವಿತ, ಎ.ಬಿ. ಮುತ್ತಣ್ಣ, ಎ.ಬಿ. ಅಪ್ಪಣ್ಣ, ಯಮುನಾಚಂಗಪ್ಪ, ತೀತೀರ ಊರ್ಮಿಳಾ, ಕೊಕ್ಕಂಡ ರೂಪಾ, ನಿವೃತ್ತ ಸೇನಾಧಿಕಾರಿ ಚೇಂದೀರ ಅಪ್ಪಣ್ಣ ಮತ್ತಿತರರು ಮಾತನಾಡಿದರು.