ಮಡಿಕೇರಿ, ಅ. 5 : ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿ ವತಿಯಿಂದ ದಸರಾ ಜನೋತ್ಸವದ ಅಂಗವಾಗಿ ವಿವಿಧ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಸಿ.ಕೆ. ನಂದೀಶ್‍ಕುಮಾರ್ ತಿಳಿಸಿದ್ದಾರೆ.

ತಾ.7 ರಂದು ಆಯುಧಪೂಜೆ ಅಂಗವಾಗಿ ಗಾಂಧಿ ಮೈದಾನದಲ್ಲಿ ವಾಹನ ಅಲಂಕಾರ ಸ್ಪರ್ಧೆ ನಡೆಯಲಿದೆÉ. ದೊಡ್ಡ ಲಾರಿ, ಸಣ್ಣ ಲಾರಿ, ಬಸ್, ಮಿನಿ ಬಸ್ಸು, ಕಾರ್, ಸೈಕಲ್, ಬೈಕ್, ಆಟೋ, ಟಾಟಾ ಏಸ್, ಜೀಪ್, ಪಿಕ್ ಅಪ್, ಜೆಸಿಬಿಗಳಿಗೆ ಅಲಂಕಾರ ಸ್ಪರ್ಧೆ ಜರುಗಲಿದೆ. ಈ ಎಲ್ಲಾ ಸ್ಪರ್ಧೆಗಳನ್ನು ಅಂದು ಸಂಜೆ 7 ಗಂಟೆಯಿಂದ ರಾತ್ರಿ 8.30 ರವರೆಗೆ ಆಯೋಜಿಸಲಾಗಿದೆ.

ಕಟ್ಟಡ ಅಲಂಕಾರ

ತಾ.8 ರಂದು ವಿಜಯದಶಮಿ ಪ್ರಯುಕ್ತ ಮಡಿಕೇರಿ ನಗರಾಲಂಕಾರ ಸ್ಪರ್ಧೆಯಡಿ ವಿವಿಧ ಕಟ್ಟಡಗಳ ಅಲಂಕಾರ ಸ್ಪರ್ಧೆ ನಡೆಯಲಿದೆ.

ರಾತ್ರಿ 7 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಸ್ಪರ್ಧೆಗಳು ಆಯೋಜಿತವಾಗಿದೆ. ದಸರಾದ ದಶದೇವಾಲಯಗಳು, ಸರ್ಕಾರಿ, ಅರೆಸರ್ಕಾರಿ ಕಚೇರಿಗಳು, ವಿವಿಧ ಕಟ್ಟಡಗಳು, ಚಿನ್ನದಂಗಡಿ, ಬಟ್ಟೆಯಂಗಡಿ, ಬೇಕರಿ, ಹೊಟೇಲ್, ಬ್ಯಾಂಕ್, ಅಲಂಕಾರ ಮಳಿಗೆಗಳು, ಎಲೆಕ್ಟ್ರಾನಿಕ್ಸ್ ಮಳಿಗೆಗಳು, ಔಷಧಿ ಅಂಗಡಿಗಳು, ಚಿತ್ರಮಂದಿರ, ಟೈಲರ್ ಶಾಪ್, ಪಾನಿಪೂರಿ ಅಂಗಡಿಗಳು, ಡ್ಯಾನ್ಸ್ ಕ್ಲಾಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಟ್ಟಡ ಅಲಂಕಾರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಅಂಗಡಿ ಮಾಲೀಕರು, ಸಣ್ಣ ಮತ್ತು ದೊಡ್ಡ ಕಟ್ಟಡಗಳ ಮಾಲೀಕರು, ಸರಕಾರಿ ಅಧಿಕಾರಿಗಳು ತಮ್ಮ ತಮ್ಮ ಕಚೇರಿ, ಅಂಗಡಿ ಮಳಿಗೆ ಹಾಗೂ ಕಟ್ಟಡಗಳನ್ನು ಅಲಂಕರಿಸುವ ಮೂಲಕ ಜನೋತ್ಸವವನ್ನು ಮತ್ತಷ್ಟು ಆಕರ್ಷಕಗೊಳಿಸುವಂತೆ ನಂದೀಶ್ ಕುಮಾರ್ ಮನವಿ ಮಾಡಿದ್ದಾರೆ. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ : 9449140988, 9480325167, 9448585470 ಯನ್ನು ಸಂಪರ್ಕಿಸಬಹುದಾಗಿದೆ.