ವೀರಾಜಪೇಟೆ, ಅ. 5 : ವಿವಾಹವಾದ ಪತ್ನಿಯೊಂದಿಗೆ ಒಂದು ವರ್ಷ ಅನ್ಯೋನ್ಯತೆಯಿಂದ ಇದ್ದು ನಂತರ ತವರು ಮನೆಯಿಂದ ಇನ್ನು ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಪತ್ನಿ ಪದ್ಮಿನಿಯ ಸಾವಿಗೆ ಕಾರಣರಾದ ಪತಿ ಕರ್ತಂಗಡ ಶಮಿ (35) ಎಂಬಾತನಿಗೆ 15ವರ್ಷ ಸಜೆ ರೂ 50,000 ದಂಡ, ಇದರ ಜೊತೆಯಲ್ಲಿ ಮೊದಲನೇ ಆರೋಪಿ ಶಮಿ, ಅತ್ತೆ ಪಾರ್ವತಿ ಹಾಗೂ ನಾದಿನಿ ಹಾಗೂ ಅಮ್ಮತ್ತಿಯ ಡಾ:ಚಂದ್ರು ಅವರ ಪತ್ನಿ ಕರ್ತಂಗಡ ಶುಭಾ ಇವರುಗಳಿಗೆ ತಲಾ ಮೂರು ವರ್ಷ ಸಜೆ ರೂ 10,000 ದಂಡ ವಿಧಿಸಿ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ತೀರ್ಪು ನೀಡಿದ್ದಾರೆ.
ಕಳೆದ ತಾ:10-12-2009ರಂದು ಬೆಕ್ಕೆಸೊಡ್ಲೂರು ಗ್ರಾಮದ ಕರ್ತಂಗಡ ಮಾದಮಯ್ಯ ಅವರ ಮಗ ಶಮಿ ಹಾಗೂ ಟಿ.ಶೆಟ್ಟಿಗೇರಿ ಗ್ರಾಮದ ಚೊಟ್ಟೆಕೋರಿಯಂಡ ಶಾಂತಿ ಅಲಿಯಾಸ್ ವಿಶಾಲಾಕ್ಷಿ ಅವರ ಪುತ್ರಿ ಪದ್ಮಿನಿಯ ವಿವಾಹವು ಇಲ್ಲಿನ ಸೆರಿನಿಟಿ ಹಾಲ್‍ನಲ್ಲಿ ನಡೆದಿತ್ತು. ಮದುವೆಯ ಸಮಯದಲ್ಲಿ ಪದ್ಮಿನಿಯ ತಾಯಿ ವರ ಶಮಿಗೆ ರೂ ಎರಡು ಲಕ್ಷ ನಗದು ಹಣ ಹಾಗೂ ಚಿನ್ನಾಭರಣಗಳು ಇತರ ಸಾಂಪ್ರದಾಯಿಕ ಸಾಮಗ್ರಿಗಳನ್ನು ನೀಡಿದ್ದರು. ದಂಪತಿಗಳು ಒಂದು ವರ್ಷದ ತನಕ ಅನ್ಯೋನ್ಯವಾಗಿ ಜೀವನ ನಡೆಸಿದ್ದು ನಂತರ ಪತಿ, ಅತ್ತೆ ನಾದಿನಿ ಸೇರಿ ಇನ್ನು ಹೆಚ್ಚಿನ ವರದಕ್ಷಿಣೆ ಹಾಗೂ ತಾಯಿ ಮನೆಯ ಆಸ್ತಿಯನ್ನು ದಾಖಲೆ ಮಾಡಿ ಕೊಡುವಂತೆ ಪದ್ಮಿನಿಗೆ ನಿರಂತರ ಕಿರುಕುಳ ನೀಡುತ್ತಿದ್ದರು. ಇದನ್ನು ಸಹಿಸದ ಪದ್ಮಿನಿ ತಾ:3-03-2012 ರಂದು ಪತಿಯ ಮನೆಯ ಬೆಡ್‍ರೂಮಿನಲ್ಲಿ ಇಲಿಗೆ ಹಾಕುವ ವಿಷದ ಔóಷಧವನ್ನು ಸೇವಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದಾಕೆಯನ್ನು ಮೈಸೂರಿನ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಸಾವನ್ನಪ್ಪಿದ್ದಳೆಂದು ಪೊಲೀಸರು ಆರೋಪಿಸಿದ್ದಾರೆ.
ವರದಕ್ಷಿಣೆ ನಿಷೇಧ ಕಾಯಿದೆಯಡಿ ಪ್ರಕರಣವನ್ನು ದಾಖಲಿಸಿದ ಪೊನ್ನಂಪೇಟೆ ಪೊಲೀಸರು ಮೂರು ಮಂದಿಯ ವಿರುದ್ಧ ಕಲಂ 304(ಬಿ), 302, 498(ಎ) ಜೊತೆಗೆ ಭಾ.ದಂ.ಸಂ ಮತ್ತು ಕಲಂ 3,4, ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ ಅಡಿಯಲ್ಲಿ ತನಿಖಾಧಿಕಾರಿಯಾದ ವೃತ್ತ ನಿರೀಕ್ಷಕ ಕೆ.ಅಣ್ಣಪ್ಪ ನಾಯಕ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಮೊದಲನೇ ಆರೋಪಿ ಶಮಿ ರೂ 50,000 ದಂಡ ತೆರಲು ತಪ್ಪಿದರೆ ಒಂದು ವರ್ಷ ಸಜೆ, ಮೂರು ಆರೋಪಿಗಳು ರೂ 10,000 ದಂಡ ಪಾವತಿಸಲು ತಪ್ಪಿದರೆ ಮೂರು ತಿಂಗಳ ಸಜೆ, ಮೊದಲನೇ ಆರೋಪಿ ಕೆ.ಶಮಿಗೆ ಕಲಂ 4 ವರದಕ್ಷಿಣೆ ನಿಷೇಧ ಕಾಯ್ದೆ ಅಡಿಯಲ್ಲಿ ಆರು ತಿಂಗಳ ಸಜೆ ರೂ 5000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಮೃತಳ ಪೋಷಕರಿಗೆ ಒಟ್ಟು ದಂಡದ ಹಣದಲ್ಲಿ ರೂ 20,000 ನಗದನ್ನು ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ.
ಸರಕಾರದ ಪರವಾಗಿ ಅಭಿಯೋಜಕರಾದ ಡಿ.ನಾರಾಯಣ ವಾದಿಸಿದರು.