ಸೋಮವಾರಪೇಟೆ, ಅ.5: ಪಟ್ಟಣ ಪಂಚಾಯಿತಿ ವತಿಯಿಂದ ಅರ್ಥಪೂರ್ಣವಾಗಿ ಪೌರ ಕಾರ್ಮಿಕರ ದಿನವನ್ನು ಆಚರಿಸಲಾಯಿತು. ದಿನದ ಅಂಗವಾಗಿ ಪೌರಕಾರ್ಮಿಕರಿಗೆ ಸನ್ಮಾನ, ವಿವಿಧ ಕ್ರೀಡಾಕೂಟ ಸೇರಿದಂತೆ ಆರೋಗ್ಯ ತಪಾಸಣೆ ನಡೆಯಿತು.

ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಕೀಡಾಕೂಟದಲ್ಲಿ ಪೌರ ಕಾರ್ಮಿಕರು ಭಾಗವಹಿಸಿ ಸಂಭ್ರಮಿಸಿದರು. ಸರ್ಕಾರಿ ಆಸ್ಪತ್ರೆಯ ಸಹಕಾರದೊಂದಿಗೆ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು.

ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯಾಧಿಕಾರಿ ನಟರಾಜ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಗರ, ಪಟ್ಟಣಗಳನ್ನು ಸ್ವಚ್ಚವಾಗಿಡಲು ಶ್ರಮಪಡುವ ಪೌರಕಾರ್ಮಿಕರನ್ನು ಸಮಾಜದ ಮುಖ್ಯವಾಹಿನಿಗೆ ತರುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರ ಬದುಕನ್ನು ಹಸನುಗೊಳಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ಕಾರ್ಮಿಕರು ದುಶ್ಚಟಗಳಿಗೆ ಬಲಿಯಾಗಬಾರದು. ಮಕ್ಕಳ ಉನ್ನತ ಶಿಕ್ಷಣಕ್ಕೆ ಸರ್ಕಾರ ವಿದ್ಯಾರ್ಥಿವೇತನ ನೀಡುತ್ತದೆ. ಖಾಯಂ ನೌಕರರಿಗೆ ಮನೆ ನಿರ್ಮಿಸಲು ಗೃಹಭಾಗ್ಯ ಯೋಜನೆಯಲ್ಲಿ ಒಟ್ಟು 7.50 ಲಕ್ಷ ರೂ. ಹಣವನ್ನು ಸಹಾಯಧನವಾಗಿ ನೀಡುತ್ತದೆ. ವಿಶೇಷ ಸೌಲಭ್ಯಯುಳ್ಳ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಸರ್ಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಚೆಲುವ, ಪಟ್ಟಣ ಪಂಚಾಯಿತಿ ಸದಸ್ಯರಾದ ನಳಿನಿ ಗಣೇಶ್, ಶೀಲಾ ಡಿಸೋಜ, ಜಯಂತಿ ಶಿವಕುಮಾರ್, ಉದಯಶಂಕರ್, ಪಿ.ಕೆ.ಚಂದ್ರು, ಬಿ.ಆರ್. ಮಹೇಶ್, ಜೀವನ್, ಶುಭಕರ್, ಸಿಬ್ಬಂದಿಗಳಾದ ಪಿಯೂಸ್ ಡಿಸೋಜ, ಆರೋಗ್ಯಾಧಿಕಾರಿ ಉದಯ ಕುಮಾರ್ ಮತ್ತಿತರರು ಇದ್ದರು.