ಗೋಣಿಕೊಪ್ಪಲು, ಅ. 5: ಗೋಣಿಕೊಪ್ಪದ ಪ್ರಮುಖ ಸ್ಪೋಟ್ರ್ಸ್ ಕ್ಲಬ್ ಸಂಸ್ಥೆಗಳಲ್ಲಿ ಒಂದಾದ ಸೌತ್ ಕೂರ್ಗ್ ಕ್ಲಬ್ ಫಾರ್ಮರ್ ಅಸೋಸಿ ಯೇಷನ್ ವತಿಯಿಂದ ಕ್ರೀಡೆಗೆ ಒತ್ತು ನೀಡುವ ಸದುದ್ದೇಶದಿಂದ ಶ್ರೀ ಕಾವೇರಿ ದಸರಾ ಸಮಿತಿಯ ಸಹಯೋಗದಲ್ಲಿ ರೋಮಾಂಚನಕಾರಿ ಅಟೋ ಕ್ರಾಸ್ ನಡೆಸುವ ಮೂಲಕ ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡುವಲ್ಲಿ ಯಶಸ್ವಿಯಾಯಿತು.

ಆಟೋಕ್ರಾಸ್ ವೀಕ್ಷಿಸಲು ವಿವಿಧ ಭಾಗದಿಂದ ಗೋಣಿಕೊಪ್ಪದತ್ತ ಜನಸಾಗರವೇ ಹರಿದುಬಂದಿತ್ತು. ಮೈದಾನದಲ್ಲಿ ಬೈಕುಗಳದ್ದೇ ಸದ್ದು ಜೋರಾಗಿತ್ತು. ಈ ವಿಶೇಷ ಸಾಹಸ ಕ್ರೀಡೆ ನೋಡಲು ಕೊಡಗು ಸೇರಿದಂತೆ ಹೊರಜಿಲ್ಲೆ, ಹೊರ ರಾಜ್ಯಗಳಿಂದ ಜನರು ಆಗಮಿಸಿದ್ದರು. ನಗರದ ಹರಿಶ್ಚಂದ್ರಪುರದ ಡರ್ಟ್ ಟ್ರ್ಯಾಕ್ ಮನೆಯಪಂಡ ಯಾರ್ಡ್‍ನಲ್ಲಿ ಬೆಳಗ್ಗಿನಿಂದಲೇ ಕ್ರೀಡಾಪ್ರಿಯರು ತಂಡೋಪತಂಡವಾಗಿ ಆಗಮಿಸಿ ದ್ವಿಚಕ್ರ ಹಾಗೂ ಚತುಷ್ಚಕ್ರ ರ್ಯಾಲಿಯನ್ನು ಕಣ್ತುಂಬಾ ವೀಕ್ಷಿಸಿ ರೋಮಾಂಚಕಾರಿ ಕ್ಷಣಗಳನ್ನು ಅನುಭವಿಸಿದರು. ಬಿಸಿಲಿನ ತಾಪ ತಡೆದುಕೊಳ್ಳಲು ಮೈದಾನದ ಅಕ್ಕಪಕ್ಕದಲ್ಲಿರುವ ಮರಗಳ ನೆರಳನ್ನು ಕ್ರೀಡಾಭಿಮಾನಿಗಳು ಆಶ್ರಯಿಸಿದ್ದರು. ಬೈಕ್‍ನ ವೇಗಕ್ಕೆ ಒಂದೇ ಸಮನೆ ಧೂಳು ಏಳುತ್ತಿದ್ದವು. ಆದರೂ ವೀಕ್ಷಕರು ಕುತೂಹಲದಿಂದ ಬೈಕ್ ರ್ಯಾಲಿಯನ್ನು ನೋಡಿ ಚಪ್ಪಾಳೆ ತಟ್ಟುತ್ತಿದ್ದರು. ಮೊಬೈಲ್ ಮೂಲಕ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದರು.

ಕೊಡಗು, ಚಿಕ್ಕಮಗಳೂರು, ಹಾಸನ, ತಿರುವೆಂಡ್ರಂ, ವೈನಾಡು, ಮೈಸೂರಿನ ಭಾಗದಿಂದ ರಾಷ್ಟ್ರೀಯ ರ್ಯಾಲಿ ಪಟುಗಳು ತಮ್ಮ ಅಮೋಘ ಸಾಹಸ ಪ್ರದರ್ಶನ ನೀಡಿ ನೋಡುಗರ ಮೈನವಿರೇಳಿಸುವಲ್ಲಿ ಯಶಸ್ವಿಯಾದರು. ಗೋಣಿಕೊಪ್ಪಲು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ರ್ಯಾಲಿಯನ್ನು ಬಾವುಟ ಬೀಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ನಾಲ್ಕು ಚಕ್ರದ ಪೈಪೋಟಿಯಲ್ಲಿ ಅನೇಕ ಕ್ರೀಡಾಪಟುಗಳು ವಿವಿಧ ಭಾಗಗಳಲ್ಲಿ ಭಾಗವಹಿಸಿದ್ದರು.

ಸೌತ್ ಕೂರ್ಗ್ ಕ್ಲಬ್ ಹಾಗೂ ಶ್ರೀ ಕಾವೇರಿ ದಸರಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಜರುಗಿದ ಡರ್ಟ್ ಟ್ರ್ಯಾಕ್ ರ್ಯಾಲಿ ಕಾರ್ಯಕ್ರಮದಲ್ಲಿ ಈ ಬಾರಿ 6 ವಿಭಾಗದಲ್ಲಿ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಪ್ರಕೃತಿ ವಿಕೋಪದಿಂದ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಕ್ರೀಡೆ ಆಯೋಜಿಸಿದ್ದೇವೆ. ಉತ್ತಮ ಕ್ರೀಡಾಪಟುಗಳು ಭಾಗವಹಿಸಿದ್ದು ಸ್ಥಳೀಯ ಪ್ರತಿಭೆಗಳಿಗೆ ಅನುಕೂಲ ಕಲ್ಪಿಸಲು ಕಾರ್ಯಕ್ರಮ ನಡೆಸಿದ್ದೇವೆ.

ಗುಮ್ಮಟ್ಟಿರ ಕಿಲನ್ ಗಣಪತಿ, ನಿರ್ದೇಶಕರು, ಸೌತ್ ಕೂರ್ಗ್ ಕ್ಲಬ್

ಕಾವೇರಿ ದಸರಾ ಸಮಿತಿಯ ಸಹಯೋಗ ಪಡೆದು ಸೌತ್ ಕೂರ್ಗ್ ಕ್ಲಬ್ ಫಾರ್ಮರ್ ಆಸೋಸಿಯೇಷನ್ ವತಿಯಿಂದ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ನಗದು ಬಹುಮಾನ ಸೇರಿದಂತೆ ಟ್ರೋಫಿ ನೀಡಲಾಗುವದು ಅನೇಕ ಸಂಘ ಸಂಸ್ಥೆಗಳು ರ್ಯಾಲಿಗೆ ಸಹಕಾರ ನೀಡಿವೆ. ನಿರೀಕ್ಷೆಗೂ ಮೀರಿ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.

-ಸಿ.ಕೆ. ಬೋಪಣ್ಣ, ಜಿ.ಪಂ. ಸದಸ್ಯರು

ಕಳೆದ 20 ವರ್ಷಗಳಿಂದ ಮೈಸೂರಿನಿಂದ ತಪ್ಪದೆ ಆಗಮಿಸಿ ಸೌತ್ ಕೂರ್ಗ್ ಕ್ಲಬ್ ಫಾರ್ಮರ್ ಆಸೋಸಿಯೇಷನ್ ವತಿಯಿಂದ ನಡೆಯುವ ಬೈಕ್ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದೇನೆ. ಹಲವಾರು ಬಹುಮಾನಗಳು ಲಭಿಸಿವೆ. ರ್ಯಾಲಿಗೆ ಹೇಳಿ ಮಾಡಿಸಿದ ಮೈದಾನ ಇದಾಗಿದೆ.

-ಮಹಮ್ಮದ್ ಅಸ್ಗರ್, ರ್ಯಾಲಿಪಟು , ಮೈಸೂರುಕಾವೇರಿ ದಸರಾ ಸಮಿತಿಯ ಅಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ಜಪ್ಪು ಸುಬ್ಬಯ್ಯ, ಠಾಣಾಧಿಕಾರಿ ಸುರೇಶ್ ಬೋಪಣ್ಣ, ವೃತ್ತ ನಿರೀಕ್ಷಕ ದಿವಾಕರ್, ಕ್ಲಬ್‍ನ ಅಧ್ಯಕ್ಷ ಚೆಪ್ಪುಡಿರ ಮಾಚಯ್ಯ, ಕಾರ್ಯದರ್ಶಿ ಪೆಮ್ಮಂಡ ನಿತೀನ್, ಖಜಾಂಜಿ ಕುಲ್ಲಚಂಡ ಚಂಗಪ್ಪ, ಉಪಾಧ್ಯಕ್ಷ ವಾಟೇರಿರ ವಿನಿಲ್, ಪ್ರಮುಖರಾದ ಮನೆಯಪಂಡ ಸುನೀಲ್, ಮುಕ್ಕಾಟಿರ ಪೂವಯ್ಯ, ಗುಮ್ಮಟ್ಟಿರ ಕಿಲನ್‍ಗಣಪತಿ, ಗುಮ್ಮಟ್ಟಿರ ದರ್ಶನ್, ಧ್ಯಾನ್ ಸುಬ್ಬಯ್ಯ ಮುಂತಾದವರು ಉಪಸ್ಥಿತರಿದ್ದರು.

ಚಿತ್ರ, ವರದಿ: ಹೆಚ್.ಕೆ. ಜಗದೀಶ್