ಭಾಗಮಂಡಲ, ಆ. 5: ಜೀವನದಿ ಕಾವೇರಿ ಕ್ಷೇತ್ರ ಭಾಗಮಂಡಲ ಹಾಗೂ ತಲಕಾವೇರಿ ದೇವಾಲಯ ವ್ಯಾಪ್ತಿಯಲ್ಲಿ ಕಾವೇರಿ ಕೊಳದಲ್ಲಿ ಪ್ಲಾಸ್ಟಿಕ್ ಬಿಂದಿಗೆ ಹಾಗೂ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ ತಾಮ್ರ, ಹಿತ್ತಾಳೆ, ಸ್ಟೀಲ್ ಬಿಂದಿಗೆಗಳ ಬಳಕೆಗೆ ಅವಕಾಶ ನೀಡಲು ಇಂದು ಇಲ್ಲಿ ನಡೆದ ಕಾವೇರಿ ತೀರ್ಥೋದ್ಭವ ಭಾಗಮಂಡಲ, ಆ. 5: ಜೀವನದಿ ಕಾವೇರಿ ಕ್ಷೇತ್ರ ಭಾಗಮಂಡಲ ಹಾಗೂ ತಲಕಾವೇರಿ ದೇವಾಲಯ ವ್ಯಾಪ್ತಿಯಲ್ಲಿ ಕಾವೇರಿ ಕೊಳದಲ್ಲಿ ಪ್ಲಾಸ್ಟಿಕ್ ಬಿಂದಿಗೆ ಹಾಗೂ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ ತಾಮ್ರ, ಹಿತ್ತಾಳೆ, ಸ್ಟೀಲ್ ಬಿಂದಿಗೆಗಳ ಬಳಕೆಗೆ ಅವಕಾಶ ನೀಡಲು ಇಂದು ಇಲ್ಲಿ ನಡೆದ ಕಾವೇರಿ ತೀರ್ಥೋದ್ಭವ ಭಾಗಮಂಡಲ ದೇವಾಲಯದ ದ್ವಾರದಿಂದ ತಲಕಾವೇರಿ ದೇವಾಲಯದವರೆಗೆ ಯಾವದೇ ರೀತಿಯ ಕಸ ಪ್ಲಾಸ್ಟಿಕ್ ಬಳಕೆಗೆ ಅವಕಾಶ ನೀಡಬಾರದು ಎಂದು ಶಾಸಕ ಬೋಪಯ್ಯ ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳೀಯರಾದ ಸೋಮಶೇಖರ್ ನಾಯಕ್ ಎರಡೂವರೆ ಏಕರೆ ಜಾಗವನ್ನು ಉದಾರವಾಗಿ ದೇವಾಲಯಕ್ಕೆ ನೀಡಲು ಮುಂದೆ ಬಂದಿದ್ದು ಕಾನೂನು ರೀತಿಯಲ್ಲಿ ಅದನ್ನು ಪಡೆದುಕೊಳ್ಳಿ ಎಂದರಲ್ಲದೆ ಜಾತ್ರೆಯ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಈ ಬಾರಿ ಕಾವೇರಿ ಜಾತ್ರೆಗೆ 500 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಡಿವೈಎಸ್ಪಿ ದಿನೇಶ್ ಕುಮಾರ್ ಮಾಹಿತಿ ನೀಡಿದರು. ಬ್ರಹ್ಮಗಿರಿ ಹಾಗೂ ತಲಕಾವೇರಿ ಭಾಗಗಳಿಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವದು. ಯಾವದೇ ಅಸಭ್ಯ ವರ್ತನೆಗಳಿಗೆ ಅವಕಾಶವಿಲ್ಲ ಎಂದರು. ಸ್ಥಳೀಯರಾದ ಪದ್ಮಯ್ಯ ಮಾತನಾಡಿ ಬಂದೋಬಸ್ತ್ಗೆ ಅನುಭವಿ
(ಮೊದಲ ಪುಟದಿಂದ) ಹಾಗೂ ಸ್ಥಳೀಯ ಪೊಲೀಸರನ್ನು ನಿಯೋಜಿಸುವಂತೆ ಕೋರಿದರು.
ಸ್ಥಳೀಯರು ಮಾತನಾಡಿ ಭಕ್ತರು ಮದ್ಯಸೇವನೆ ಮಾಡಿ ಜಾತ್ರೆಗೆ ಬರುತ್ತಿರುವದು ಕಂಡುಬರುತ್ತಿದೆ. 17ರಿಂದ ಮೂರು ದಿನಗಳ ಕಾಲ ಪೊಲೀಸರು ಇದ್ದರೆ ಸಾಲದು. ಒಂದು ತಿಂಗಳ ಕಾಲ ನಿಯೋಜನೆ ಮಾಡಬೇಕಿದೆ. ವಿಐಪಿಗಳು ಒಂದು ಗಂಟೆ ಮುಂಚಿತವಾಗಿ ಸ್ಥಳಕ್ಕೆ ತಲಪಿದರೆ ಭಕ್ತರ ನೂಕುನುಗ್ಗಲು ಘರ್ಷಣೆಗಳಿಗೆ ಅವಕಾಶವಿಲ್ಲದಂತಾಗುತ್ತದೆ ಎಂದರು. ತಕ್ಕರಾದ ಕೋಡಿ ಮೋಟಯ್ಯ ಮಾತನಾಡಿ ಅರ್ಚಕರು ಮಂತ್ರಪಠಣ ಮಾಡುತ್ತಿರುವಾಗ ಭಕ್ತರಿಂದ ನೂಕುನುಗ್ಗಲು ಉಂಟಾಗಿ ತೀರ್ಥಕುಂಡಿಕೆ ಬಳಿ ತುಂಬಾ ತೊಂದರೆಯಾಗುತ್ತಿದೆ. ತೀರ್ಥೋದ್ಭವಕ್ಕೆ 5 ಗಂಟೆ ಮುಂಚಿತವಾಗಿ ಕುಂಡಿಕೆಯ ಬಳಿಗೆ ಪ್ರವೇಶಿಸುವದನ್ನು ತಡೆಯಬೇಕಿದೆ. ಮಂಗಳಾರತಿಯ ಬಳಿಕ ಭಕ್ತರಿಗೆ ಕುಂಡಿಕೆ ಬಳಿಗೆ ತೆರಳಲು ಅವಕಾಶ ಕಲ್ಪಿಸುವದು ಒಳ್ಳೆಯದು ಎಂದರು. ಭಾಗಮಂಡಲ ಒಳಚರಂಡಿ ವ್ಯವಸ್ಥೆಯಿಂದಾಗಿ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ. ಸಂಗಮಕ್ಕೆ ಕೊಳಚೆ ನೀರು ಹರಿದು ಬರುತ್ತಿದ್ದು ಪವಿತ್ರ ಸ್ನಾನಕ್ಕೆ ಬಂದ ಭಕ್ತರಿಗೆ ಕಿರಿಕಿರಿಯಾಗುತ್ತಿದೆ. ವೈಜ್ಞಾನಿಕ ರೀತಿಯಲ್ಲಿ ನೀರು ಹರಿದುಹೋಗುವಂತೆ ಮಾಡುವದು ಒಳಿತು ಎಂದರು.
ಕುಶಾಲಪ್ಪ ಮಾತನಾಡಿ ಮಹಿಳೆಯರು ಬಟ್ಟೆ ಬದಲಿಸುವ ಸ್ಥಳದಲ್ಲಿ ಮೇಲ್ಭಾಗದಲ್ಲಿ ತೆರೆದುಕೊಂಡಿದ್ದು ಇದನ್ನು ಸರಿಪಡಿಸಬೇಕು ಎಂದರು. ಅಧ್ಯಕ್ಷರು ಹಾಗೂ ಶಾಸಕರು ಸಮಸ್ಯೆಯನ್ನು ಸರಿಪಡಿಸಲು ಕೂಡಲೇ ಕ್ರಮಕೈಗೊಳ್ಳಲಾಗುವದು ಎಂದರು.
ಕೊಕ್ಕಲೆರ ಶಾಮ್ತಿಮ್ಮಯ್ಯ ಮಾತನಾಡಿ ಪ್ರವಾಸಿಗರು ಮದ್ಯ ಹಾಗೂ ಮಾಂಸದೊಂದಿಗೆ ವಾಹನಗಳಲ್ಲಿ ಆಗಮಿಸುವದರಿಂದ ವಾಹನಗಳ ತಪಾಸಣೆ ಅಗತ್ಯ ಎಂದರು. ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕಾವೇರಿ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ತಪ್ಪು ಮಾಡುವವರ ವಿರುದ್ಧ ಪೊಲೀಸರು ಈ ಬಾರಿ ಯಾವದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕೆಂದರು.
ತಣ್ಣಿಮಾನಿಯಲ್ಲಿ ಸರ್ವೆ ನಂ 10/2ರಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಗ್ರಾಮಪಂಚಾಯಿತಿ ಮುಂದಾದರೂ ಅರಣ್ಯ ಇಲಾಖೆ ಏಕೆ ತಡೆಒಡ್ಡುತ್ತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕೆಜಿಬಿ ತರಾಟೆಗೆ ತೆಗೆದುಕೊಂಡರು. ಅಗತ್ಯ ಜಾಗವನ್ನು ತಾ. 17ರ ಒಳಗೆ ಅರಣ್ಯ ಇಲಾಖೆ ಗುರುತಿಸಿ ಕೊಡಬೇಕಿದೆ. ಇಲ್ಲವಾದರೆ ನಿಮ್ಮ ಕಚೇರಿಯ ಮುಂದೆ ಕಸವನ್ನು ರಾಶಿ ಹಾಕಬೇಕಾಗುತ್ತದೆ ಎಂದರಲ್ಲದೆ, ಈ ಹಿಂದೆ ಗುರುತಿಸಿದ ಜಾಗದಲ್ಲೇ ಕಸ ವಿಲೇವಾರಿ ಘಟಕ ನಿರ್ಮಿಸುವಂತೆ ಪಿಡಿಓಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಪಿಡಬ್ಲ್ಯುಡಿ ಇಲಾಖೆಯ ಶಿವರಾಂ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಪ್ರಸಂಗ ಎದುರಾಯಿತು. ಭಾಗಮಂಡಲ - ಮಡಿಕೇರಿ ಕರಿಕೆ ರಸ್ತೆ ನಾಪೋಕ್ಲು - ಭಾಗಮಂಡಲ ರಸ್ತೆಗಳಲ್ಲಿ ಒಂದು ವಾರದ ಒಳಗೆ ಚರಂಡಿ, ರಸ್ತೆ ಬದಿಯ ಮಣ್ಣು ತೆಗೆದು ಸರಿಪಡಿಸಿಕೊಡುವಂತೆ ಒತ್ತಾಯಿಸಿದರು. ಜಾತ್ರಾ ವಿಶೇಷವಾಗಿ 30 ಸರ್ಕಾರಿ ವಿಶೇಷ ಬಸ್ಗಳು ಕೆಎಸ್ಆರ್ಟಿಸಿ ವತಿಯಿಂದ ಸಂಚರಿಸಲಿದ್ದು, ಒಂದು ತಿಂಗಳ ಕಾಲ ವಿಶೇಷ ಬಸ್ಗಳ ಸಂಚಾರ ಮುಂದುವರೆಸಬೇಕು ಎಂದು ನಾರಾಯಣಾಚಾರ್ ಹೇಳಿದರು. ಪೊಲೀಸ್ ವಸತಿ ವ್ಯವಸ್ಥೆಗಾಗಿ ಸರ್ಕಾರಿ ಶಾಲೆಗಳಲ್ಲಿ ಅವಕಾಶ ಕಲ್ಪಿಸಬೇಕಿದೆ ಎಂದರು.
ಎಲ್ಇಡಿ-ಅನ್ನದಾನ ಕುರಿತು ಅಧ್ಯಕ್ಷ ತಮ್ಮಯ್ಯ ಮಾಹಿತಿ
ಭಾಗಮಂಡಲ ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮಾತನಾಡಿ, ತಲಕಾವೇರಿ ತೀರ್ಥೋದ್ಭವ ವೀಕ್ಷಣೆಗೆ ಎರಡು ಎಲ್ಇಡಿ ಟಿವಿ ವ್ಯವಸ್ಥೆ ಮಾಡಲಾಗಿದೆ. ವಾಟರ್ ಪ್ರೂಫ್ ಶಾಮಿಯಾನ ಅಳವಡಿಸಲಾಗುವದು. ತಲಕಾವೇರಿ ಭಾಗದಲ್ಲಿ ಧ್ವನಿವರ್ಧಕ ಮೂಲಕ ನಾಲ್ಕು ಭಾಷೆಗಳಲ್ಲಿ ಮಾಹಿತಿ ನೀಡಲಾಗುವದು. ಅಗತ್ಯವಿದ್ದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವದು. ಏಕೀಕರಣ ರಂಗದಿಂದ ಅನ್ನದಾನ ನಡೆಯಲಿದೆ. ಮಂಡ್ಯದ ಭಕ್ತರು ಅನ್ನ ಸಂತರ್ಪಣೆ ಮಾಡಲಿದ್ದಾರೆ. ಭಾಗಮಂಡಲ ಐಬಿಯಿಂದ ತಲಕಾವೇರಿ ವರೆಗೆ ರಸ್ತೆ ಬದಿ ಲೈಟ್ ವ್ಯವಸ್ಥೆ ಅಳವಡಿಸಲಾಗಿದೆ.
ತಾ. 17 ರಂದು ಮೂರು ಗಂಟೆವರೆಗೆ ಮುಡಿ ತೆಗೆಯುವದು, ನಾಲ್ಕುಗಂಟೆಯವರೆಗೆ ಪಿಂಡಪ್ರದಾನ, ತಾ. 18 ರಂದು ಬೆಳಿಗ್ಗೆ 6ಗಂಟೆಯಿಂದ 3ಗಂಟೆಯವರೆಗೆ ಪಿಂಡಪ್ರದಾನ ನಡೆಯಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾಮೋಹನ್, ಜಿ.ಪಂ. ಸದಸ್ಯೆ ಕವಿತಾಪ್ರಭಾಕರ್, ಉಪವಿಭಾಗಾಧಿಕಾರಿ ಜವರೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ, ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಸಮಿತಿ ಸದಸ್ಯರು, ಇಲಾಖಾ ಅಧಿಕಾರಿಗಳು ಇದ್ದರು. -ಕುಯ್ಯಮುಡಿ ಸುನಿಲ್