*ಸಿದ್ಧಾಪುರ, ಅ. 4: ವಾಲ್ನೂರು ಗ್ರಾಮದಲ್ಲಿ ಕಾಡಾನೆ ತೋಟಕ್ಕೆ ಲಗ್ಗೆಯಿಟ್ಟ ಪರಿಣಾಮ ಬೆಳೆಗಾರರು ನೆಟ್ಟು ಬೆಳಸಿದ ಹಣ್ಣಿನ ಗಿಡಗಳು, ಕಾಫಿ ಗಿಡಗಳು ನಾಶವಾಗಿವೆ. ವಾಲ್ನೂರು ಗ್ರಾಮದ ಬೆಳೆಗಾರ ಭುವನೇಂದ್ರ ಅವರು ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸಿದ್ದು, ಕಾಡಾನೆ ತೋಟಕ್ಕೆ ನುಗ್ಗಿ ಗಿಡಗಳನ್ನು ಕಿತ್ತು ತಿಂದು ಹಾಕಿವೆ. ತೋಟಕ್ಕೆ ನುಗ್ಗಿ ಕಾಫಿ ಗಿಡಗಳನ್ನು ಕಾಡಾನೆಗಳು ನಾಶಪಡಿಸಿವೆ. ಅರಣ್ಯ ಇಲಾಖೆ ವನಪಾಲಕ ಸುಬ್ರಾಯ ಅವರು ಸ್ಥಳ ಪರಿಶೀಲಿಸಿದ್ದಾರೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕೆಲಸವನ್ನು ಅರಣ್ಯ ಇಲಾಖೆಯವರು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.