ಶ್ರೀಮಂಗಲ, ಅ. 4: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಇರ್ಪು ರಸ್ತೆಯಲ್ಲಿರುವ ಕಾಯಿಮಾನಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಗಾಯಗೊಂಡಿದ್ದು, ಆಸ್ಪತೆಗೆ ದಾಖಲಿಸಲಾಗಿದೆ. ಕಾಯಿಮಾನಿ ಗ್ರಾಮದ ಪೈಸಾರಿ ನಿವಾಸಿ ಬಾಲ ಎಂಬವರ ಪತ್ನಿ ಜಯ (47) ಅವರ ಮೇಲೆ ಶುಕ್ರವಾರ ಬೆಳಿಗ್ಗೆ 7-45 ರ ಹೊತ್ತಿಗೆ ಮನೆ ಸಮೀಪದ ರಸ್ತೆಯಲ್ಲಿ ಕಾಡಾನೆ ದಿಢೀರಾಗಿ ದಾಳಿ ನಡೆಸಿದ್ದು, ಈ ಸಂದರ್ಭ ಜಯ ಅವರಿಗೆ ತೀವ್ರ ತರಹದ ಗಾಯವಾಗಿದ್ದು, ಕಾಲು ಮುರಿತವಾಗಿದೆ.
ಗಾಯಾಳುವಿಗೆ ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕೇರಳದ ಮಾನಂದವಾಡಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಸ್ಥಳಕ್ಕೆ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ್ ಭೇಟಿ ನೀಡಿ ಚಿಕಿತ್ಸೆಗೆ ರೂ 5 ಸಾವಿರ ತಕ್ಷಣದ ಪರಿಹಾರವಾಗಿ ನೀಡಿದ್ದು, ಅರಣ್ಯ ಇಲಾಖೆಯ ವಾಹನದಲ್ಲಿಯೇ ಮಾನಂದವಾಡಿ ಆಸ್ಪತ್ರೆಗೆ ಗಾಯಾಳುವನ್ನು ಸಾಗಿಸಲಾಯಿತು.ಹಂಚಿತಿಟ್ಟಿನಲ್ಲೂ ದಾಳಿ
(ಮೊದಲ ಪುಟದಿಂದ) ಸಿದ್ದಾಪುರ : ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕನೋರ್ವ ಗಂಭೀರ ಗಾಯಗೊಂಡು ರಾತ್ರಿ ಪೂರ್ತಿ ಕಾಡಿನಲ್ಲಿಯೇ ಕಾಲ ಕಳೆದ ಘಟನೆ ಹಂಚಿತಿಟ್ಟು ಹಾಡಿಯಲ್ಲಿ ನಡೆದಿದೆ.
ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಹಂಚಿತಿಟ್ಟು ಹಾಡಿಯ ನಿವಾಸಿ ಪಂಜರಿಯರವರ ರಾಮು (40) ಎಂಬಾತ ಕೆಲಸಕ್ಕೆ ತೆರಳಿ ಮನೆಗೆ ಹಿಂತಿರುಗುವ ವೇಳೆ ಕಾಡಾನೆಯೊಂದು ಹಠಾತ್ತನೆ ದಾಳಿ ನಡೆಸಿದೆ. ಇದರಿಂದಾಗಿ ರಾಮು ಅವರ ಕಾಲು ಹಾಗೂ ಸೊಂಟಕ್ಕೆ ಗಂಭೀರ ಗಾಯವಾಗಿದೆ. ಸೊಂಟಕ್ಕೆ ಗಂಭೀರ ಗಾಯವಾದ ಪರಿಣಾಮ ಎದ್ದೇಳಲು ಸಾಧ್ಯವಾಗದೆ ಮನೆಗೆ ತೆರಳುವ ರಸ್ತೆ ಬದಿಯಲ್ಲೇ ಮಲಗಿದ್ದಾರೆ. ಬೆಳಗ್ಗಿನ ಜಾವ ಹಾಡಿಯ ನಿವಾಸಿಗಳು ಕೆಲಸಕ್ಕೆ ತೆರಳುವ ಸಂದರ್ಭ ರಾಮುರನ್ನು ನೋಡಿದ್ದು, ಕಾಡಾನೆ ದಾಳಿ ನಡೆಸಿರುವದು ತಿಳಿದುಬಂದಿದೆ. ಕೂಡಲೇ ರಾಮುರನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ಗೂಳಿ ಹಾಗೂ ಅರಣ್ಯ ಸಿಬ್ಬಂದಿ ಮಣಿಕಂಠ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.