ಮಡಿಕೇರಿ, ಅ. 4 : ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಮಾಡುವ ಬದಲು ವಿವಿಧ ಕಾರಣಗಳನ್ನು ನೀಡಿ ಈಗಾಗಲೇ ಮಂಜೂರು ಮಾಡಿರುವ ಭೂಮಿಯನ್ನೂ ಕಸಿದುಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ, ಮಾಜಿ ಸೈನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ಕಿರುಕುಳ ನೀಡುವದನ್ನು ಮುಂದುವರೆಸಿದರೆ ಕೊಡಗು ಬಂದ್, ಪ್ರತಿಭಟನೆಗೆ ಕರೆ ನೀಡುವದಾಗಿ ಎಚ್ಚರಿಕೆ ನೀಡಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ ಅವರು ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ಧೋರಣೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯಲ್ಲಿ ಸುಮಾರು 15 ಸಾವಿರ ಮಂದಿ ಮಾಜಿ ಸೈನಿಕರು, ವಿಧವೆಯರು, ಸೈನಿಕರ ಅವಲಂಬಿತರು ವಾಸವಾಗಿದ್ದಾರೆ. ಇವರಲ್ಲಿ ಬಹುತೇಕ ಮಾಜಿ ಸೈನಿಕರು ಕನಿಷ್ಟ 15-40 ವರ್ಷಗಳಷ್ಟು ಕಾಲ ಸೇವೆ ಸಲ್ಲಿಸಿ ಬಂದವರಾಗಿದ್ದಾರೆ. ಮಾಜಿ ಸೈನಿಕರ ಕುಂದುಕೊರತೆಗಳನ್ನು ನಿವಾರಿಸುವ ಸಮಿತಿಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿದ್ದರೂ, ಒಂದಿಬ್ಬರು ಜಿಲ್ಲಾಧಿಕಾರಿಗಳನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು. ಜಾಗ ಮಂಜೂರಾತಿಗಾಗಿ ಮಾಜಿ ಸೈನಿಕರು 10 ವರ್ಷಗಳ ಹಿಂದೆ ಸಲ್ಲಿಸಿದ ಸುಮಾರು 300ಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಕಳೆದ 10-15 ವರ್ಷ ಗಳಿಂದ ಸರಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ಕೃಷಿ ಮಾಡಿ ಕೊಂಡು ಜೀವನ ಸಾಗಿಸುತ್ತಿರುವ ಮಾಜಿ ಸೈನಿಕರ ಜಾಗವನ್ನು ತೆರವು ಮಾಡುವಂತೆ ಕಂದಾಯ ಇಲಾಖೆ ನೋಟೀಸ್ ನೀಡುವದರೊಂದಿಗೆ ಜಾಗ ತೆರವು ಕಾರ್ಯಾಚರಣೆಗೂ ಮುಂದಾಗಿದೆ. ಆದರೆ ಅದೇ ಜಿಲ್ಲಾಡಳಿತ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಕೊಡಗಿಗೆ ಆಗಮಿಸುವ ವಲಸಿಗರಿಗೆ ನೂರಾರು ಎಕರೆ ಸರಕಾರಿ ಜಾಗ ಅತಿಕ್ರಮಣ ಮಾಡಲು ಅವಕಾಶ ನೀಡುವದ ರೊಂದಿಗೆ ಅದನ್ನು ಸಕ್ರಮ ಗೊಳಿಸುವಲ್ಲೂ ಮುತುವರ್ಜಿ ವಹಿಸುತ್ತಿದೆ ಎಂದು ಟೀಕಿಸಿದರು.
ಮಾಜಿ ಸೈನಿಕರ ಜಮೀನನ್ನು ಕಿತ್ತುಕೊಳ್ಳಲು ಜಿಲ್ಲಾಡಳಿತ ಮುಂದಾದಲ್ಲಿ ಸಂಘದ ಪದಾಧಿಕಾರಿಗಳಿಗೆ ಮಾಹಿತಿ ನೀಡಿ ಪ್ರತಿಭಟಿಸುವಂತೆ ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಜಾಗ ನೀಡುವದಕ್ಕಾಗಿ ತಾಲೂಕು ತಹಶೀಲ್ದಾರರುಗಳು ಮಾಜಿ ಸೈನಿಕರಿಗೆ ನೀಡಿದ ಹಕ್ಕುಪತ್ರಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸುತ್ತಿರುವದು ಸಂಘದ ಗಮನಕ್ಕೆ ಬಂದಿದ್ದು, ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ವಿಚಾರಣೆ ಮಾಡಬೇಕು ಎಂದು ಕಾರ್ಯಪ್ಪ ಒತ್ತಾಯಿಸಿದರು. ಹೊರ ರಾಜ್ಯಗಳಿಂದ ಬಂದು ಅಕ್ರಮವಾಗಿ ನದಿ ದಂಡೆಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಪ್ರತೀವರ್ಷ ಸರಕಾರದಿಂದ ಪರಿಹಾರ ಪಡೆಯುವದರೊಂದಿಗೆ ಪ್ರಸಕ್ತ ಸಂತ್ರಸ್ತರ ಹೆಸರಿನಲ್ಲಿ ಜಾಗ ಪಡೆಯಲು ಮುಂದಾಗುವ ವ್ಯಕ್ತಿಗಳ ಬಗ್ಗೆ ಜಿಲ್ಲಾಡಳಿತ ಎಚ್ಚರವಹಿಸಬೇಕು ಎಂದೂ ಅವರು ಹೇಳಿದರು.
ಮಾಜಿ ಸೈನಿಕರಿಗಾಗಿ ಸರಕಾರದಿಂದ ವೈದ್ಯಕೀಯ ಸೌಲಭ್ಯ ನೀಡುವದಕ್ಕಾಗಿ
(ಮೊದಲ ಪುಟದಿಂದ) ಇಸಿಹೆಚ್ಎಸ್ ಆಸ್ಪತ್ರೆಗಳನ್ನು ಆರಂಭಿಸಿದ್ದರೂ, ಕಳೆದ 20 ವರ್ಷಗಳಿಂದ ಈ ಆಸ್ಪತ್ರೆಗೆ ಕನಿಷ್ಟ 20 ಸೆಂಟ್ ಜಾಗವನ್ನು ಮಂಜೂರು ಮಾಡಲು ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮಾಜಿ ಸೈನಿಕರಿಗೆ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಕನಿಷ್ಟ ವಿಶ್ರಾಂತಿ ಪಡೆಯುವದಕ್ಕೆ ಮತ್ತು ಅವರ ಅಹವಾಲುಗಳನ್ನು ಸ್ವೀಕರಿಸಲು ಮಾಜಿ ಸೈನಿಕರ ಸಂಘದ ಭವನ ನಿರ್ಮಾಣಕ್ಕೆ ಜಾಗ ನೀಡಬೇಕೆಂದು ಒತ್ತಾಯಿಸಿದರು.
ಪಟ್ಟಣ ಪ್ರದೇಶಗಳಲ್ಲಿರುವಂತೆ ಮಾಜಿ ಸೈನಿಕರಿಗೆ ಮನೆ ಕಂದಾಯದಲ್ಲಿ ಶೇ.50ರಷ್ಟು ವಿನಾಯಿತಿ ನೀಡುವಂತೆ ಜಿಲ್ಲಾಡಳಿತ ಎಲ್ಲಾ ಪಂಚಾಯಿಗಳಿಗೆ ಸುತ್ತೋಲೆ ಕಳುಹಿಸಿಕೊಟ್ಟಿದ್ದರೂ, ಈ ಬಗ್ಗೆ ಪಂಚಾಯಿತಿಗಳು ಯಾವದೇ ರಿಯಾಯಿತಿ ನೀಡುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವೀರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕರ ಕ್ಯಾಂಟೀನ್ನಲ್ಲಿ ಮಾಜಿ ಸೈನಿಕರಿಗೆ ಮದ್ಯ ಸಿಗದೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಬಕಾರಿ ಇಲಾಖೆ ಆದಷ್ಟು ಶೀಘ್ರ ಲೈಸೆನ್ಸ್ ನೀಡುವಂತಾಗಬೇಕು, ಮಡಿಕೇರಿಯಲ್ಲಿ ಮಾಜಿ ಸೈನಿಕರ ಸಂಘಕ್ಕೆ 7ಸೆಂಟ್ ಜಾಗ ಮಂಜೂರಾಗಿದ್ದು, ಅದನ್ನು ಆದಷ್ಟು ಶೀಘ್ರ ಸಂಘಕ್ಕೆ ಹಸ್ತಾಂತರ ಮಾಡುವಂತಾಗಬೇಕು, ನಿವೇಶನ ಇಲ್ಲದ ಮಾಜಿ ಸೈನಿಕರು ಪೈಸಾರಿ ಜಾಗ ಒತ್ತುವರಿ ಮಾಡಿ ಮನೆಕಟ್ಟಿಕೊಂಡು ವಾಸವಿದ್ದು, ಅವರಿಗೆ ಹಕ್ಕುಪತ್ರ ನೀಡಬೇಕು ಮತ್ತು ಸರಕಾರದಿಂದ ಜಾಗ ಮಂಜೂರಾತಿ ಆಗಿರುವ ಮಾಜಿ ಸೈನಿಕರಿಗೆ ಅವರ ಜಾಗಕ್ಕೆ ಹೋಗುವ ದಾರಿಗೆ ಸ್ಥಳೀಯರು ಅಡ್ಡಿಪಡಿಸುತ್ತಿದ್ದು, ಅಂತಹ ಮಾಜಿ ಸೈನಿಕರಿಗೆ ಅಗತ್ಯ ನೆರವು ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಭ್ರಷ್ಟಾಚಾರ ನಿಗ್ರಹಕ್ಕಾಗಿ ಸರಕಾರ ಲೋಕಾಯುಕ್ತರನ್ನು ನೇಮಕ ಮಾಡಿ ಅದಕ್ಕೆ ಅಗತ್ಯವಿರುವ ಸವಲತ್ತುಗಳನ್ನು ನೀಡಿದ್ದರೂ, ಪ್ರಸಕ್ತ ಲೋಕಾಯುಕ್ತ ಕೂಡ ಹಲ್ಲಿಲ್ಲದ ಹಾವಿನಂತಾಗಿದೆ ಎಂದು ಬಿ.ಎ.ಕಾರ್ಯಪ್ಪ ಕಿಡಿಕಾರಿದರು. ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆಯುತ್ತಿದ್ದರೂ ಲೋಕಾಯುಕ್ತ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಬಿ.ಎ.ಕಾರ್ಯಪ್ಪ ಆರೋಪಿಸಿದರು.
ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್ ಓ.ಎಸ್.ಚಿಂಗಪ್ಪ ಅವರು ಮಾತನಾಡಿ, ಸೇನೆಯಲ್ಲಿ ಸಲ್ಲಿಸಿದ ಸೇವೆಗಾಗಿ ಗ್ಯಾಲಂಟರಿ ಅವಾರ್ಡ್ ಪಡೆದ ಮತ್ತು ಯುದ್ಧದಲ್ಲಿ ವೀರಮರಣವನ್ನಪ್ಪಿದವರ ಕುಟುಂಬಕ್ಕೆ ದೇಶದ ಇತರ ರಾಜ್ಯಗಳಲ್ಲಿ ಸಾಕಷ್ಟು ಸವಲತ್ತುಗಳನ್ನು ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಅಂತಹ ಯೋಧರ ತ್ಯಾಗಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪರಮವೀರ ಚಕ್ರ ಪಡೆದ ಯೋಧರಿಗೆ ಹರ್ಯಾಣ ಸರಕಾರ ರೂ. 2 ಕೋಟಿ ನೀಡುತ್ತಿದ್ದರೆ, ಕರ್ನಾಟಕ ಸರಕಾರ ಕೇವಲ ರೂ. 10 ಲಕ್ಷ ನೀಡುತ್ತಿದೆ. ಶೌರ್ಯಚಕ್ರ ಪಡೆದವರಿಗೆ ರಾಜ್ಯ ಸರಕಾರ ರೂ. 3 ಲಕ್ಷ ನೀಡುತ್ತಿದ್ದರೆ ಹರ್ಯಾಣ ಸರಕಾರ ರೂ. 31 ಲಕ್ಷ ನೀಡುತ್ತಿದೆ ಎಂದು ತಿಳಿಸಿದ ಅವರು, ಕರ್ನಾಟಕ ಸರಕಾರ ಮಾಜಿ ಸೈನಿಕರಿಗೆ ನೀಡುತ್ತಿರುವ ಸವಲತ್ತುಗಳನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕರ್ನಲ್ ಚಿಣ್ಣಪ್ಪ, ಮಡಿಕೇರಿ ತಾಲೂಕು ಅಧ್ಯಕ್ಷ ಕೆ.ಎ.ಆನಂದ, ಚೇರಂಬಾಣೆ ಸಂಘದ ಅಧ್ಯಕ್ಷ ಸುಬೇದಾರ್ ಮಾದಪ್ಪ ಹಾಗೂ ನಾಪೋಕ್ಲು ಸಂಘದ ಶಂಭು ಉಪಸ್ಥಿತರಿದ್ದರು.