ಶನಿವಾರಸಂತೆ, ಅ. 2: ಕೊಡ್ಲಿಪೇಟೆಯ ವೀರಶೈವ ಸಮಾಜವು ಇಂದು ಕೊಡ್ಲಿಪೇಟೆಯಲ್ಲಿ ನಮ್ಮೂರ ಹೆಣ್ಣುಮಕ್ಕಳ ಹಬ್ಬವನ್ನು ಮಾಡಿ, ನಮ್ಮಿಂದ ದೂರ ಹೋಗಿರುವ ಎಲ್ಲಾ ಹೆಣ್ಣು ಮಕ್ಕಳನ್ನು ಒಂದೆ ಸೂರಿನಡಿಯಲ್ಲಿ ಬಾಗಿನ ನೀಡಿ ಗೌರವಿಸುವ ‘ಬನ್ನಿ ತವರಿಗೆ ತನ್ನಿ ಹರುಷವ’ ಎಂಬ ಕಾರ್ಯಕ್ರಮವನ್ನು ಕೊಡ್ಲಿಪೇಟೆಯ ಶ್ರೀಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇಂದು ಬೆಳಿಗ್ಗೆ 6.30ಕ್ಕೆ ಕೊಡ್ಲಿಪೇಟೆಯ ನಂದಿಪುರ ಕೆರೆಯಲ್ಲಿ ಗಂಗಾ ಪೂಜೆಯೊಂದಿಗೆ ಊರಿನ ಹೆಣ್ಣುಮಕ್ಕಳು ಕಳಶ ಹೊತ್ತು ಕಾಶಿ, ಗಂಗಾನದಿ, ಯಮುನಾ ನದಿ ಮತ್ತು ಕಾವೇರಿ ನದಿಗಳಿಂದ ಪವಿತ್ರ ತೀರ್ಥ ತಂದು ಶ್ರೀ ಬಸವೇಶ್ವರ ಸ್ವಾಮಿಗೆ ಅಭಿಷೇಕ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಊರಿನ ಮಹಿಳೆಯರು ಹಾಗೂ ಈ ಊರಿನಿಂದ ಮದುವೆ ಮಾಡಿಕೊಟ್ಟ ಮಹಿಳೆಯರು ಭಾಗವಹಿಸಿದ್ದರು.

ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 11.30 ಗಂಟೆಗೆ ನಡೆದ ಬಾಗಿನ ಸಮರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಕೀಲ ಹೆಚ್.ಎಸ್. ಚಂದ್ರಮೌಳಿ ಅವರು ಮಾತನಾಡುತ್ತಾ, ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳಿಂದ ಸಂಬಂಧಗಳು, ಸಂಪ್ರದಾಯಗಳು ಅಳಿಸಿಹೋಗಿದ್ದು, ಅದನ್ನೆಲ್ಲಾ ಉಳಿಸಿ ಬೆಳೆಸಿಕೊಳ್ಳಬೇಕು. ಎಷ್ಟೇ ಹಣ, ಆಸ್ತಿ ಇದ್ದರೂ ತವರಿನಲ್ಲಿ ಬಾಗಿನ ಸಮರ್ಪಣೆ ಮಾಡುವದು ತುಂಬಾ ಸಂತೋಷದ ವಿಷಯ ಎಂದರು. ಈ ರೀತಿಯ ಬಾಗಿನ ಸಮರ್ಪಣೆ ಕೊಡಗಿನ ಇತಿಹಾಸದಲ್ಲಿ ಪ್ರಥಮ ಕಾರ್ಯಕ್ರಮ ಎಂದರು.

ತೆಂಕಲಗೋಡು ಮಠದ ಮಠಾಧೀಶ ಚನ್ನಮಲ್ಲಿಕಾರ್ಜುನ ಸ್ವಾಮಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ತವರಿನಿಂದ ಮಹಿಳೆಯರು ಬಾಗಿನದೊಂದಿಗೆ ಒಳ್ಳೆಯ ನಡೆ- ನುಡಿಗಳನ್ನು ತೆಗೆದುಕೊಂಡು ಹೋಗಿ ಎಂದರು.

ಹಾಸನದ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಅವರು ಮಾತನಾಡುತ್ತಾ, ಇಲ್ಲಿನ ಹೆಣ್ಣುಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋಗಿದ್ದು, ಇಂದು ತವರುವಿನಲ್ಲಿ ಬಾಗಿನ ಕಾರ್ಯಕ್ರಮದಲ್ಲಿ ಎಲ್ಲರು ಒಟ್ಟಿಗೆ ಸೇರಿರುವದು ತುಂಬಾ ಸಂತೋಷ ಎಂದರು. ಮದುವೆಯಾದ ಮೇಲೆ ತವರನ್ನು ಮರೆಯಬಾರದು. ಹೆಣ್ಣು ಒಂದು ಶಕ್ತಿ, ತುಂಬಾ ಜವಾಬ್ದಾರಿಗಳಿರುತ್ತದೆ ಎಂದು ಹೇಳಿದರು.

ಕೊಡ್ಲಿಪೇಟೆ ವೀರಶೈವ ಸಮಾಜದ ಅಧ್ಯಕ್ಷ ಬಿ.ಕೆ. ಯತೀಶ ಪ್ರಾಸ್ತಾವಿಕ ಭಾಷಣ ಮಾಡಿದರು. ಸಮಾರಂಭದಲ್ಲಿ ಊರುಮಠದ ಶ್ರೀ ಸಿದ್ಧಲಿಂಗ ಸ್ವಾಮಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮಿ, ರಾಜ್ಯ ವೀರಶೈವ ಮಂಡಳಿ ಕಾರ್ಯದರ್ಶಿ ರಾಜೇಶ್ವರಿ ಉಪಸ್ಥಿತರಿದ್ದರು.

ಬೆಂಗಳೂರು ಖ್ಯಾತ ಗಾಯಕ ಕೆ. ಮುನಿರಾಜು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗಂಗಾ ವೀರಶೈವ ಮಹಿಳಾ ಸಮಾಜದ ಪ್ರತಿನಿಧಿಗಳಿಂದ ಪ್ರಾರ್ಥನೆ, ಗಂಗಾ ವೀರಶೈವ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ಸುರೇಶ್ ಸ್ವಾಗತಿಸಿ, ಶಿಕ್ಷಕ ಕಿರಣ್ ಕುಮಾರ್ ವಂದಿಸಿದರು.