ಆಲೂರು-ಸಿದ್ದಾಪುರ, ಅ. 2: ಆಲೂರು-ಸಿದ್ದಾಪುರ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷೆ ವೀಣಾ ರಮೇಶ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಮೂದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ಜಿ.ಪಂ. ಅಭಿಯಂತರ ವೀರೇಂದ್ರ ಕಳೆದ ಮತ್ತು ಈ ವರ್ಷದ ವಿಕೋಪದಿಂದ ಲೋಕೋಪಯೋಗಿ ಇಲಾಖೆ ಹಾಗೂ ಜಿ.ಪಂ. ಗ್ರಾಮೀಣ ರಸ್ತೆಗಳು ಸೇರಿದಂತೆ ಒಟ್ಟು 1300 ಕಿ.ಮೀ. ನಷ್ಟು ಹಾನಿಗೊಳಗಾಗಿದ್ದು, 87 ಕಿ.ಮೀ. ನಷ್ಟು ಜಿ.ಪಂ. ಗ್ರಾಮೀಣ ರಸ್ತೆ ಹಾನಿಗೊಳಗಾಗಿದೆ ಎಂದರು. ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ 27 ಕಿ.ಮೀ. ಗ್ರಾಮೀಣ ರಸ್ತೆ ಹಾನಿಗೊಳಗಾಗಿರುವ ಹಿನ್ನೆಲೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಳೆ ಹಾನಿ ಯೋಜನೆಯಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತದೆ ಹಾಗೂ ಕೆಲವು ಗ್ರಾಮೀಣ ರಸ್ತೆಗಳ ಕಾಮಗಾರಿ ಕಾರ್ಯ ಸಧ್ಯದಲ್ಲಿ ಪ್ರಾರಂಭಿಸಲಾಗುವದೆಂದು ಮಾಹಿತಿ ನೀಡಿದರು.

ಗ್ರಾ.ಪಂ. ವ್ಯಾಪ್ತಿಯ ಮಾಲಂಬಿ, ಕಣಿವೆ, ಬಸವನಹಳ್ಳಿ ರಸ್ತೆ ಹಾಳಾಗುತ್ತಿದ್ದರೂ ಇತ್ತ ತಲೆ ಹಾಕುತ್ತಿಲ್ಲ. ಇದರ ಜೊತೆಯಲ್ಲಿ ಮಾಲಂಬಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕ್ ಬೀಳುವ ಸ್ಥಿತಿಗೆ ಬಂದಿದೆ ಹೀಗಿದ್ದರೂ ಸಂಬಂಧಪಟ್ಟವರು ಇಲ್ಲಿಗೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರಾದ ದಿನೇಶ್, ರಾಮಕುಟ್ಟಿ ತರಾಟೆಗೆ ತೆಗೆದುಕೊಂಡರು.

ಆಲೂರು-ಸಿದ್ದಾಪುರದಲ್ಲಿ ರಾಜ್ಯ ಹೆದ್ದಾರಿ ಅಗಲೀಕರಣ ಕಾಮಗಾರಿ ಸಂದರ್ಭ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ ತಡೆಗೋಡೆಗೆ ಹಾನಿಯಾಗಿದ್ದು, ಆಸ್ಪತ್ರೆ ಗೇಟ್‍ಗೆ ಚರಂಡಿ ಕಾಮಗಾರಿಯನ್ನು ಸ್ಥಗಿತಗೊಳಿಸಿರುವದರಿಂದ ತೊಂದರೆ ಆಗುತ್ತಿರುವ ಕುರಿತು ವೈದ್ಯಾಧಿಕಾರಿ ಡಾ. ಸುಪರ್ಣ ಸಭೆಯ ಗಮನಕ್ಕೆ ತಂದರು. ಮಾಜಿ ತಾ.ಪಂ. ಸದಸ್ಯ ಸಿ.ಕೆ. ಚಂದ್ರಶೇಖರ್ ಸಭೆಯಲ್ಲಿ ಮಾತನಾಡಿ, ಗ್ರಾ.ಪಂ. ಮೂಲಕ ಸರಕಾರಕ್ಕೆ ಒತ್ತಡ ಹೇರುವಂತೆ ಆಗ್ರಹಿಸಿದರು.

ಶಿಕ್ಷಣ ಇಲಾಖೆ ಅಧಿಕಾರಿ ಚಿಣ್ಣಪ್ಪ ಮಾಹಿತಿ ಮಧ್ಯೆ ಪ್ರವೇಶಿಸಿದ ಗ್ರಾಮಸ್ಥರು ಹಾಜರಾತಿ ಪ್ರಮಾಣ ಗಣನೀಯವಾಗಿ ಇಳಿಮುಖ ವಾಗುತ್ತಿದೆ ಎಂದು ಆರೋಪಿಸಿದರು. ರೈತರು ಸಂಕಷ್ಟ ಪಡುತ್ತಿರುವ ನಿಟ್ಟಿನಲ್ಲಿ ರೈತರಿಗೆ ಪರಿಹಾರ ನೀಡಬೇಕೆಂದು ಗ್ರಾಮಸ್ಥ ಪ್ರೇಮ್‍ನಾಥ್ ಆಗ್ರಹಿಸಿದರು. ಸಭೆಯಲ್ಲಿ ಕಸ ವಿಲೇವಾರಿ ಸಮಸ್ಯೆ, ಕೆರೆ ದುರಸ್ತಿ, ಗ್ರಾಮೀಣ ರಸ್ತೆಯನ್ನು ಕಾಮಗಾರಿ ಅಭಿವೃದ್ಧಿಗೆ ಸೇರಿಸದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಜಿ.ಪಂ. ಸದಸ್ಯೆ ಸರೋಜಮ್ಮ, ನೋಡಲ್ ಅಧಿಕಾರಿ ಶೈಲಜಾ ಗ್ರಾ.ಪಂ. ಅಧ್ಯಕ್ಷೆ ವೀಣಾ ರಮೇಶ್ ಮಾತನಾಡಿದರು. ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ತಾ.ಪಂ. ಸದಸ್ಯೆ ಲೀಲಾವತಿ, ಗ್ರಾ.ಪಂ. ಪಿಡಿಓ ಪೂರ್ಣಮಾ, ಕಾರ್ಯದರ್ಶಿ ಚಂದ್ರೇಗೌಡ, ಗ್ರಾ.ಪಂ. ಉಪಾಧ್ಯಕ್ಷೆ ಸತ್ಯ ಹಾಗೂ ಗ್ರಾ.ಪಂ. ಸದಸ್ಯರು ಹಾಜರಿದ್ದರು.