ಸೋಮವಾರಪೇಟೆ, ಅ. 2: ಕೊಡವ ಜನಾಂಗದ ಜನರು ಕೋವಿಯನ್ನು ಹೊಂದುವ ಹಕ್ಕನ್ನು ಯಾವದೇ ಅಡೆತಡೆ ಇಲ್ಲದೆ, ಶಾಶ್ವತವಾಗಿ ಮತ್ತು ಎಂದೆಂದಿಗೂ ಮುಂದುವರೆಸಬೇಕು. ಅದೊಂದು ಸಾಂಪ್ರದಾಯಿಕ ಕಾನೂನು ಮತ್ತು ಜನ್ಮಸಿದ್ಧ ಹಕ್ಕು ಎಂದು ಪರಿಗಣಿಸಬೇಕೆಂದು ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ. ನಾಣಯ್ಯ ಹೇಳಿದರು. ಇಲ್ಲಿನ ಕೊಡವ ಸಮಾಜದ ಆಶ್ರಯದಲ್ಲಿ, ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೈಲ್‍ಪೊಳ್ದ್ ಸಂತೋಷ ಕೂಟ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಜನಪದೀಯ ಚರಿತ್ರೆಯ ಪ್ರಕಾರ ಕೊಡವ ಬುಡಕಟ್ಟು ಕುಲವು ವಿಶೇಷ ಸಾಂಸ್ಕøತಿಕ ಒಳಕೋಶಗಳನ್ನು ಮತ್ತು ಸೂಕ್ಷ್ಮ ಸಂವೇದನೆಗಳನ್ನು ಹೊಂದಿದೆ ಎಂದ ಕಾರ್ಯಪ್ಪ ಅವರು, ಪ್ರತಿಯೊಂದು ಸಮುದಾಯದವರು ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಿದರೆ ಸಾಲದು. ಅವರನ್ನು ಸಮಾಜದಲ್ಲಿ ಯಾವ ರೀತಿ ಬೆಳೆಸುತ್ತಿದ್ದೇವೆ ಎಂಬ ಚಿಂತನೆಯನ್ನು ಮೊದಲು ಮನಗಾಣಬೇಕು ಎಂದು ಕಿವಿಮಾತು ಹೇಳಿದರು.

ಕೊಡವರು ಜನಸಂಖ್ಯೆಯಲ್ಲಿ ಹೆಚ್ಚಿದ್ದರೂ, ಬಹುತೇಕರು ಸಮಾಜದ ಸದಸ್ಯತ್ವವನ್ನು ಇಂದಿಗೂ ಪಡೆದಿಲ್ಲದಿರುವದರಿಂದ ಸಮಾಜದ ಒಗ್ಗೂಡುವಿಕೆ ಸಾಧ್ಯವಾಗುತ್ತಿಲ್ಲ ಎಂದು ವಿಷಾಧಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಜಿಲ್ಲೆಯ ಜನರು ಯಾವದೇ ಕಾರಣಕ್ಕೂ ತಮ್ಮ ಕೃಷಿ ಭೂಮಿಯನ್ನು ಬೇರೆಯವರಿಗೆ ಮಾರುವ ಕೆಲಸ ಮಾಡಬಾರದು. ಹಿರಿಯರು ಹಬ್ಬ ಹರಿದಿನಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಮೂಲಕ ನಮ್ಮ ಕಲೆ ಸಂಸ್ಕøತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಅಭಿಪ್ರಾಯಿಸಿದರು. ಅಧ್ಯಕ್ಷತೆ ಯನ್ನು ವಹಿಸಿದ್ದ ಸಮಾಜದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಸಮಾಜ ಬೆಳೆದಲ್ಲಿ ನಾಗರಿಕತೆ ಬೆಳೆಯುತ್ತದೆ. ಸಂಸ್ಕøತಿ ವಿನಾಶದ ಹಾದಿಯನ್ನು ತುಳಿಯದಂತೆ ಜನಾಂಗದ ಪ್ರಮುಖರು ಎಚ್ಚರಿಕೆ ವಹಿಸಬೇಕೆಂದರು. ಬೆಂಗಳೂರು ಕೊಡವ ಸಮಾಜದ ಮಾಜಿ ಉಪಾಧ್ಯಕ್ಷೆ ವಾಣಿ ನಾಣಯ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಕವನ್ ಕಾರ್ಯಪ್ಪ ಮತ್ತು ಅಪಾಡಂಡ ಮೌನ ದರ್ಶನ್ ಕಾರ್ಯಕ್ರಮ ನಿರ್ವಹಿಸಿದರು. ಜನಾಂಗ ಬಾಂಧವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.