ವೀರಾಜಪೇಟೆ, ಅ. 2: ಸಾಮಾಜಿಕ ಜಾಲತಾಣಗಳಿಂದ ಅದೆಷ್ಟೋ ಮಂದಿ ಯುವ ಸಮೂಹ ದಾರಿ ತಪ್ಪುತ್ತಿದ್ದು, ಅಂತಹ ಯುವ ಸಮೂಹದಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಕೊಡಗು ದಫ್ ಸಮಿತಿಎಂಬ ಸಂಘಟನೆಯು ನೂರಾರು ಯುವ ಪ್ರತಿಭೆಗಳನ್ನು ಗಾಯನದ ಮೂಲಕ ಮುಂದೆ ತರಲು ಮೊಬೈಲ್ ಆನ್‍ಲೈನ್ ಗಾಯನ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಗಮನ ಸೆಳೆದಿದೆ.

ಎರಡನೇ ಆವೃತ್ತಿಯ ಇಶಲ್ ಮರ್ಹಬ ಆನ್‍ಲೈನ್ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿಜೇತರಿಗೆ ವೀರಾಜಪೇಟೆಯ ಡಿ.ಹೆಚ್.ಎಸ್. ಎಂಕ್ಲೇವ್‍ನ ಎನ್.ಸಿ.ಟಿ. ಟೂರ್ಸ್ ಮತ್ತು ಟ್ರಾವೆಲ್ಸ್ ಕಚೇರಿಯ ಸಭಾಂಗಣದಲ್ಲಿ ಬಹುಮಾನ ವಿತರಣೆ ನಡೆಯಿತು.

ಸೀನಿಯರ್ ವಿಭಾಗದ ಸ್ಪರ್ಧೆಯಲ್ಲಿ ಎಮ್ಮೆಮಾಡುವಿನ ಇಶಾಕ್ ಪ್ರಥಮ, ಕಡಂಗದ ನೌಫಲ್ ದ್ವಿತೀಯ ಹಾಗೂ ಮಡಿಕೇರಿಯ ಯೂಸುಫ್ ತೃತೀಯ ಸ್ಥಾನ ಪಡೆದರು. ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಅನಸ್ ಬೆಂಗಳೂರು ಪ್ರಥಮ, ಆಶಿಕ್ ಚೋಕಂಡಳ್ಳಿ ದ್ವಿತೀಯ, ಆರಿಫ್ ಎಮ್ಮೆಮ್ಮಾಡು ತೃತೀಯ ಸ್ಥಾನ ಪಡೆದರು.

ಕಾರ್ಯಕ್ರಮದಲ್ಲಿ ಕೊಡಗು ಧಪ್ ಸಮಿತಿ ಅಧ್ಯಕ್ಷ ಚೋಕಂಡಳ್ಳಿ ಮಜೀದ್ ಮಾತನಾಡಿ, ಪ್ರಕೃತಿ ವಿಕೋಪ ಪ್ರವಾಹದಿಂದ ಜಿಲ್ಲೆಯ ಜನತೆ ತತ್ತರಿಸಿದ್ದು, ಹಲವು ಕುಟುಂಬಗಳು ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಲು ಸಂಘಟನೆ ಮುಂದಾಗಿದೆ ಎಂದರು. ಕೆ.ಡಿ.ಎಸ್. ಸಮಿತಿಯ ಗೌರವಾಧ್ಯಕ್ಷ ಮೊಯ್ದು, ಕಾರ್ಯದರ್ಶಿ ಷರೀಫ್ ಕುಶಾಲನಗರ, ಖಜಾಂಚಿ ಬಷೀರ್ ಏಕ್ಸ್ ಆರ್ಮಿ, ಉಪ ಕಾರ್ಯದರ್ಶಿ ಶಫೀಕ್ ಗುಂಡಿಗೆರೆ, ಪ್ರಮುಖರಾದ ರಶೀದ್, ಸುಬೈರ್, ಅಬ್ಬಾಸ್ ಝ್ಯನಿ ಉಸ್ತಾದ್, ಜುಬೇರ್ ಉಸ್ತಾದ್, ಹನೀಫ್ ಮತ್ತಿತರರು ಉಪಸ್ಥಿತರಿದ್ದರು.