ಮಡಿಕೇರಿ, ಅ. 2: ಕೇಂದ್ರ ಸರ್ಕಾರವು ನಗರದ ಎಲ್ಲಾ ವಸತಿ ರಹಿತ ಕುಟುಂಬಗಳಿಗೆ 2022 ಅವಧಿಯೊಳಗಾಗಿ ವಸತಿ ಸೌಲಭ್ಯ ಒದಗಿಸುವ ಧ್ಯೇಯದೊಂದಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ(ನಗರ)ಯನ್ನು ಜೂನ್ 2015 ರಲ್ಲಿ ಜಾರಿಗೊಳಿಸಿದೆ. ಈ ಯೋಜನೆಯಡಿ ದೇಶಾದ್ಯಂತ 88.18 ಲಕ್ಷ ಮನೆಗಳು ನಿರ್ಮಾಣಗೊಳ್ಳುತ್ತಿದ್ದು, ರಾಜ್ಯದಲ್ಲಿ ಈ ವರೆಗೆ 5.29 ಲಕ್ಷ ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ.

ಕೇಂದ್ರ ಸರ್ಕಾರವು ರಾಷ್ಟ್ರಪಿತ ಮಹಾತ್ಮ ಗಾಂಧಿ ರವರ 150ನೇ ಜನ್ಮ ದಿನೋತ್ಸವÀದ ಅಂಗವಾಗಿ 2019ರ ತಾ. 2 ರಿಂದ ಡಿಸೆಂಬರ್ 10 ರವರೆಗೆ (3 ತಿಂಗಳ ಅವಧಿ) ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಂಗೀಕಾರ್ ಆಂದೋಲನವನ್ನು ಜಾರಿಗೊಳಿಸಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಪ್ರಗತಿಯಲ್ಲಿರುವ ಮತ್ತು ಪೂರ್ಣಗೊಂಡಿರುವ ಮನೆಗಳ ಫಲಾನುಭವಿಗಳಿಗೆ ಆರೋಗ್ಯ, ನೈರ್ಮಲ್ಯ, ನೀರು ಸಂರಕ್ಷಣೆ, ಮಳೆ ನೀರು ಕೊಯ್ಲು, ಗಿಡ ಮರಗಳನ್ನು ನೆಡುವದು, ತಾಜ್ಯ ನಿರ್ವಹಣೆ, ಪರಿಸರ ಹಾಗೂ ಸಂಪನ್ಮೂಲಗಳ ಸಂರಕ್ಷಣೆ, ಸೌರಶಕ್ತಿ ಬಳಕೆ, ಹೊಗೆರಹಿತ ಅಡುಗೆ ಮನೆ, ಸಮುದಾಯದೊಂದಿಗೆ ಸಹಬಾಳ್ವೆ, ಸಹಿಷ್ಣುತೆ, ಸಮುದಾಯದ ಮೂಲಭೂತ ಸೌಕರ್ಯಗಳನ್ನು ನಿರ್ವಹಣೆ ಮಾಡುವದು, ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಪಡೆಯುವದು ಮುಂತಾದವುಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಲಶಕ್ತಿ ಅಭಿಯಾನ, ಅರಣ್ಯ ಇಲಾಖೆ, ಇಂಧನ, ಇಲಾಖೆ, ಹೀಗೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.

ಈ ಉದ್ದೇಶಕ್ಕಾಗಿ ರಾಜ್ಯದ ಎಲ್ಲಾ ನಗರಗಳಲ್ಲಿ “ಅಂಗೀಕಾರ ಸಂಪನ್ಮೂಲ ವ್ಯಕ್ತಿ”(ಎಆರ್‍ಪಿ)ಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಅವರು ಫಲಾನುಭವಿಗಳ ಮನೆಗಳಿಗೆ ಮನೆಗಳಿಗೆ ಭೇಟಿ ನೀಡಿ ಮೋಬೈಲ್ ಆಪ್ ಬಳಸಿ ನೀಡ್ ಅಸೆಸ್‍ಮೆಂಟ್ ಕೈಗೊಳ್ಳುವರು ಮತ್ತು ವಿವಿಧ ಯೋಜನೆಗಳ ಕುರಿತು ಮಾಹಿತಿ ತಿಳಿಸಿ ಕರಪತ್ರವನ್ನು ವಿತರಿಸುವರು.

ಮಹಾತ್ಮಗಾಂಧಿ ಅವರ ಜನ್ಮ ದಿನೋತ್ಸವದ ಅಂಗವಾಗಿ ತಾ. 2 ರಂದು ನಗರ ಮಟ್ಟದಲ್ಲಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮಗಳು, ಸಸಿ, ಸೋಲಾರ್ ಲೈಟ್, ಎಲ್.ಇ.ಡಿ ಬಲ್ಬ್‍ಗಳನ್ನು ವಿತರಿಸುವದು, ಫಲಾನುಭವಿಗಳಿಂದ ಸಹಿ ಸಂಗ್ರಹಣೆ, ಪ್ರಮಾಣ ವಚನ ಸ್ವೀಕಾರ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರ ಮೂಲಕ ಈ ಆಂದೋಲನಕ್ಕೆ ಚಾಲನೆ ನೀಡಲಾಗುವದು.

ತಾ. 3 ರಿಂದ ಡಿಸೆಂಬರ್ 9 ರವರೆಗೆ ವಾರ್ಡ್‍ಗಳಲ್ಲಿ ಬೀದಿನಾಟಕ, ಶಾಲೆಗಳಲ್ಲಿ ಚಿತ್ರಕಲೆ, ನಾಟಕ, ಕ್ರೀಡೆ ವಿವಿಧ ಸ್ಪರ್ಧೆ ಏರ್ಪಡಿಸುವದು, ಎಫ್.ಎಂ. ರೇಡಿಯೋ/ ಲೋಕಲ್ ಟಿವಿ ಚಾಲನ್‍ಗಳಲ್ಲಿ ಪ್ರಸಾರ, ವೀಡಿಯೋ/ ಕಿರುಚಿತ್ರಗಳ ಪ್ರದರ್ಶನ, ಅಟೋರಿಕ್ಷಾಗಳ ಮೂಲಕ ಜಾಗೃತಿ, ಎಸ್‍ಎಂಎಸ್ ಮೂಲಕ ಸಂದೇಶ ರವಾನಿಸುವದು ಹೀಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು.

ಈ ಆಂದೋಲನದಲ್ಲಿ ನಗರ ಪಾಲಿಕೆಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಸ್ವ-ಸಹಾಯ ಸಂಘಗಳು, ವಿದ್ಯಾಸಂಸ್ಥೆಗಳು, ವಿಧ್ಯಾರ್ಥಿಗಳು, ಸ್ವಯಂ ಸೇವಕರು, ಸಿಎಸ್‍ಆರ್ ಸಂಸ್ಥೆಗಳು, ಜನಪ್ರತಿನಿಧಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶ್ರೀನಿವಾಸ್ ಕೋರಿದ್ದಾರೆ.