ವೀರಾಜಪೇಟೆ, ಅ. 2: ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬತಿದೆ ಅಡಳಿತ ವ್ಯವಸ್ಥೆ. ದಕ್ಷಿಣ ಕೊಡಗಿನಲ್ಲಿ ಸಾವಿರಾರು ಎಕರೆ ಅರಣ್ಯ ಪ್ರದೇಶವು ಕಾಣದ ಕೈಗಳ ಸಹಕಾರದಿಂದ ರಾಜ್ಯದಲ್ಲಿ ಯಾವದೇ ದಾಖಲೆಗಳನ್ನು ಹೊಂದಿರದ ವ್ಯಕ್ತಿಗಳಿಗೆ ಮಂಜೂರು ಮಾಡಿರುವದು ಘೋರ ಅಪರಾಧ. ವಿವಿಧೆಡೆಗಳಲ್ಲಿ ಒತ್ತುವರಿಯಾಗಿರುವ ಸ್ಥಳಗಳ ಬಗ್ಗೆ ಸರ್ಕಾರವು ತನಿಖೆ ನಡೆಸಿ ಆಕ್ರಮಿತ ಸ್ಥಳವನ್ನು ಸರ್ಕಾರದ ವಶ ಪಡೆಯುವಂತೆ ಮಾಜಿ ಸೈನಿಕರು ಅಗ್ರಹಿಸಿದ್ದಾರೆ.
ವೀರಾಜಪೇಟೆ ತಾಲೂಕಿನ ಬೇಟೋಳಿ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ಗ್ರಾಮದ ಸರ್ವೆ ಸಂಖ್ಯೆ 317/1ಪಿ4 ಬೂದಿಮಾಳ ಅಲತ್ಕಾಡು ಪೈಸಾರಿ ಒಟ್ಟು 43 ಎಕರೆ ಭೂ ಪ್ರದೇಶವಿದ್ದು. ಅರ್.ಟಿ.ಸಿ.ಯಲ್ಲಿ ಸರ್ಕಾರದವರಿಗೆ ಸೇರಿದ್ದು ಈ ಜಮೀನನ್ನು ಲ್ಯಾಂಡ್ ಬ್ಯಾಂಕಿಗೆ ಹಸ್ತಾಂತರಿಸಿದೆ ಎಂದು ನಮೂದಿಸಲಾಗಿದೆ. ಇದೆ ಸರ್ವೆ ಸಂಖ್ಯೆಯ ಸ್ಥಳದಲ್ಲಿ 10 ಎಕರೆ ಭೂ ಪ್ರದೇಶವನ್ನು ಕೇರಳ ರಾಜ್ಯದ ಕಣ್ಣೂರು ನಿವಾಸಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದು ತೋಟ ಮಾಡಿಕೊಂಡಿದ್ದಾರೆ ಎಂದು ಗ್ರಾಮದ ಮಾಜಿ ಸೈನಿಕರುಗಳು ಅರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ನಮಗಳಿಗೆ ಅರಣ್ಯ ಪ್ರದೇಶದಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸಲು 20 ವರ್ಷಗಳಿಂದ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಯಾವದೇ ಪ್ರತಿಕ್ರಿಯೆ ನೀಡದೆ ನಾವು ನೀಡಿರುವ ಅರ್ಜಿಗೆ ಸೂಕ್ತ ಸ್ಥಳವು ಲಭ್ಯವಿರುವದಿಲ್ಲ ಎಂಬ ಹಿಂಬರಹದೊಂದಿಗೆ ಅರ್ಜಿಯನ್ನು ಮುಕ್ತಯಗೊಳಿಸುತ್ತಾರೆ. ಈ ಭಾಗದಲ್ಲಿ ಸುಮಾರು 40-60 ಮಂದಿ ಭಾರತೀಯ ಸೇನೆಯಲ್ಲಿ ತಮ್ಮ ಸುದೀರ್ಘವಾದ ಸೇವೆ ಸಲ್ಲಿಸಿ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಗ್ರಾಮಸ್ಥರಿಗೆ ಸ್ಥಳವು ಲಭ್ಯವಿಲ್ಲ ಎಂದು ಹೇಳುವ ಅಧಿಕಾರಿಗಳು ಕೊಡಗಿನಲ್ಲಿ ಯಾವದೇ ದಾಖಲೆ ಹೊಂದದಿರುವ ಅನ್ಯ ರಾಜ್ಯದ ವ್ಯಕ್ತಿಗಳಿಗೆ ಹೇಗೆ ಅರಣ್ಯ ಪ್ರದೇಶವನ್ನು ಅಕ್ರಮ - ಸಕ್ರಮದ ಅಡಿಯಲ್ಲಿ ಪಟ್ಟೆಯನ್ನು ನೀಡುತ್ತಾರೆ ಇದು ನಮಗೆ ಯಕ್ಷ ಪ್ರಶ್ನೆಯಾಗಿದೆ ಎಂದು ಹೆಗ್ಗಳ ಗ್ರಾಮದ ನಿವಾಸಿ ಭಾರತೀಯ ಸೇನಾ ಪಡೆಯಲ್ಲಿ 23 ವರ್ಷ ಸೇವೆಗೈದು 21 ವರ್ಷಗಳ ಕಾಲ ಗ್ರಾಮದಲ್ಲಿ ನೆಲೆಸಿರುವ ಎ.ಎ. ಅಚ್ಚಪ್ಪ ಅವರು ಅಕ್ರೋಶದಿಂದ ಹೇಳುತ್ತಾರೆ.
ಭೂ ಪ್ರದೇಶವನ್ನು ಪರಬಾರಿಕೆಯಲ್ಲಿ ಅಂದರೆ 317/1ಬಿ ರಲ್ಲಿ 1980-2000 ರಲ್ಲಿ ಜಮಾಬಂದಿ ವಿತರಿಸಲಾಗಿದ್ದು, ಒಟ್ಟು 10 ಎಕರೆ ಭೂ ಪ್ರದೇಶವನ್ನು ಅತಿಕ್ರಮಿಸಿದ್ದು 4 ಎಕರೆ ಭೂ ಪ್ರದೇಶಕ್ಕೆ ಅಕ್ರಮ-ಸಕ್ರಮ ಅರ್ಜಿಯಡಿಯಲ್ಲಿ 2002-2003 ರಂತೆ ಸಾಗುವಳಿ ಚೀಟಿ ಹೊಂದಿಕೊಂಡಿರುತ್ತಾರೆ ಉಳಿದ 6 ಎಕರೆ ಭೂ ಪ್ರದೇಶವು ಯಾವದೇ ಕೃಷಿ ಮಾಡಿರುವದಿಲ್ಲ ಹಾಗೂ ಯಾವದೇ ದಾಖಲೆಗಳು ಇಲ. ಇಲ್ಲಿ 5 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಹಂಚಿನ ಮನೆಯಿದ್ದು, ಇಲ್ಲಿ ಯಾರು ವಾಸವಿರುವದಿಲ್ಲ ಬೇಟೋಳಿ ಪಂಚಾಯಿತಿಯಲ್ಲಿ ಯಾವದೇ ರೀತಿಯಲ್ಲಿ ಕಂದಾಯ ಪಾವತಿಯಾಗಿರುವದಿಲ್ಲ ಸದ್ರಿ ಸ್ಥಳದಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಮರಗಳನ್ನು ಕಡಿದು ಸಾಗಿಸಲಾಗಿದೆ. ಸ್ಥಳವನ್ನು ಮಣ್ಣು ಕೊರೆಯುವ ಯಂತ್ರದಿಂದ ಸಮತಟ್ಟುಗೊಳಿಸಲಾಗಿದೆ. ಈ ಹಿಂದೆ ವೀರಾಜಪೇಟೆ ತಹಶೀಲ್ದಾರ್ ಒಬ್ಬರು ಈ ಸ್ಥಳದಲ್ಲಿ ಫಾರಂ ಹೌಸ್ ನಿರ್ಮಾಣ ಮಾಡಲು ಅನುಮತಿ ನೀಡಿರುತ್ತಾರೆ. ನಡೆಯುತ್ತಿರುವ ಕಾಮಗಾರಿಯನ್ನು ತಡೆಹಿಡಿಯುವಂತೆ ತಹಶೀಲ್ದಾರ್ಗೆ 2017 ರಲ್ಲಿ ಜಿಲ್ಲಾಧಿಕಾರಿಗಳಿಗೆ 2018 ಜನವರಿ 5 ರಂದು ಮತ್ತು ಕರ್ನಾಟಕ ಲೋಕಾಯುಕ್ತರ ಕಚೆÉೀರಿಗೆ 2.4.2019 ರಂದು ಅರ್ಜಿ ಸಲ್ಲಿಸಲಾಗಿದ್ದು, ಇಂದಿನವರೆಗೆ ಅಧಿಕಾರಿಗಳಾಗಲಿ ಇಲಾಖೆಗಳಾಗಲಿ ಯಾವದೇ ಕ್ರಮಕ್ಕೆ ಮುಂದಾಗಲಿಲ್ಲ. ಇಲ್ಲಿನ ಅರಣ್ಯ ಪ್ರದೇಶವು ಅನ್ಯರ ಪಾಲಾಗುತ್ತಿರುವದು ದು:ಖಕರ ಎಂದು ಹೆಗ್ಗಳ ಗ್ರಾಮದ ಮಾಜಿ ಸೈನಿಕ ಬಿ.ಸಿ. ಗೋವಿಂದ ಆಡಳಿತ ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ.
ದೇಶ ಸೇವೆಗೆಂದು ತನ್ನ 21 ವರ್ಷಗಳು ಮುಡಿಪಾಗಿಟ್ಟೆ ನಂತರದಲ್ಲಿ ಸೇವೆಯಿಂದ ನಿವೃತ್ತಿಯ ಬಳಿಕ ಸ್ವಗ್ರಾಮಕ್ಕೆ ಹಿಂದಿರುಗಿ ಬದುಕಲು ಕೃಷಿಯನ್ನು ಅವಲಂಬಿಸಿದೆ. 1988 ರಲ್ಲಿ ಸರ್ಕಾರಿ ಜಮೀನಿಗಾಗಿ ಅರ್ಜಿ ಸಲ್ಲಿಸುತ್ತಾ ಬಂದಿದ್ದೇನೆ. ಆದರೆ ಮೂರು ದಶಕಗಳು ಕಳೆದುಹೋಗಿದೆ. ನನಗೆ ವಯಸ್ಸಾಗಿದೆ, ಮುಂದೆ ಜೀವನವು ದುಸ್ತರವಾಗಿದೆ ದೇಶ ಸೇವೆ ಮಾಡಿದವನಿಗೆ ಒಂದಿಷ್ಟು ಭೂಮಿ ಕೊಡಲು ಹಿಂದು-ಮುಂದು ನೋಡುತ್ತಿದೆ. ಆದರೆ ಸ್ಥಿತಿವಂತರಿಗೆ ಮಣೆ ಹಾಕುತ್ತಿರುವದು ಶೋಚನೀಯ. ಸರ್ಕಾರವು ಮತ್ತು ಇಲಾಖೆಯ ಅಧಿಕಾರಿಗಳು ಕಚೇರಿಗಳಿಗೆ ಅಲೆದಾಡಿಸಿ ಅರ್ಧ ಭಾಗದ ಆಯುಸ್ಸು ಕಡಿಮೆಗೊಳಿಸುವ ಪರಿ ಎಂದು ಮಾಜಿ ಸೈನಿಕ ಎ.ಪಿ. ನಂಜುಂಡ ಆಕ್ರೋಶ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ಅದೆಷ್ಟೋ ಅರಣ್ಯ ಭೂಮಿಯು ಅನ್ಯರ ಪಾಲಾಗಿದೆ, ಯಾವದೇ ದಾಖಲೆಗಳನ್ನು ಒದಗಿಸದೇ ಬೇನಾಮಿ ಹೆಸರಿನಲ್ಲಿ ಜಮೀನು ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟದ ಲೆಕ್ಕ ತೋರಿಸುವದಾಗಿದೆ. ಫಾರಂ ಹೌಸ್ ನಿರ್ಮಾಣ ಮಾಡಲು ಅನುಮತಿ ಪಡೆದು ಬೆಲೆಬಾಳುವ ಮರಗಳನ್ನು ಹನನ ಮಾಡಿ ಇಲ್ಲೇ ಮುಂದೆ ರೆಸಾರ್ಟ್ ನಿರ್ಮಾಣ ಮಾಡುವಲ್ಲಿ ಸಂದೇಹವಿಲ್ಲ. ಕೊಡಗು ಜಿಲ್ಲೆಯಲ್ಲಿ ಭೂ ಕುಸಿತದಂತಹ ಘನಘೋರವಾದ ಘಟನೆಗಳು ನಡೆದಿದೆ. ಆಸ್ತಿಪಾಸ್ತಿಗಳು ಹಾನಿಯಾಗಿದೆ ಮುಂದೆ ಈ ಸ್ಥಳದಲ್ಲಿ ಭೂಕುಸಿತವಾಗುವ ಆತಂಕವಿದೆ. ಜಿಲ್ಲಾಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು, ಒತ್ತುವರಿಯಾದ ಭೂ ಪ್ರದೇಶವನ್ನು ಸರ್ಕಾರವು ತಮ್ಮ ವಶಕ್ಕೆ ಪಡೆದು ನಿರಾಶ್ರಿತರಿಗೆ ಮತ್ತು ಮಾಜಿ ಸೈನಿಕರಿಗೆ ನೀಡುವಂತೆ ಹೆಗ್ಗಳ ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಪಡಿಸಿದ್ದಾರೆ.
ಈ ಸಂದರ್ಭ ಗ್ರಾಮಸ್ಥರಾದ ಎ.ಯು. ತಿಮ್ಮಯ್ಯ, ಅಚ್ಚಪಂಡ ಪೂಣಚ್ಚ ಮಾಜಿ ಸೈನಿಕರಾದ ಕಂಬಂಡ ಎಂ. ಬೆಳ್ಯಪ್ಪ ಮತ್ತು ಪಟ್ಟಡ ನಾಚಪ್ಪ ಹಾಜರಿದ್ದರು.