ಸೋಮವಾರಪೇಟೆ, ಅ. 2: ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಶೌಚಾಲಯದಿಂದ ಮಲೀನ ನೀರನ್ನು ಹಾಡಹಗಲೇ ರಸ್ತೆ ಬದಿಯ ಚರಂಡಿ ಮೂಲಕ ಹರಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಪಟ್ಟಣದಲ್ಲಿ ಅವ್ಶೆಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಶೌಚಾಲಯದಲ್ಲಿ ಈ ಹಿಂದೆಯೂ ಸಮಸ್ಯೆ ಎದುರಾಗಿತ್ತು. ಆದರೆ, ಪಟ್ಟಣ ಪಂಚಾಯಿತಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರಿದೆ. ಶೌಚಾಲಯದ ಗುಂಡಿಯಲ್ಲಿ ಮಲೀನ ನೀರು ಸಂಗ್ರಹಗೊಂಡ ನಂತರ ಮಧ್ಯರಾತ್ರಿ ಅಥವಾ ಹಗಲಿನ ವೇಳೆಯಲ್ಲಿ ಸಿ.ಕೆ. ಸುಬ್ಬಯ್ಯ ರಸ್ತೆಗೆ ಹೊಂದಿಕೊಂಡಂತಿರುವ ಚರಂಡಿಯ ಮೂಲಕ ಕಕ್ಕೆಹೊಳೆಗೆ ಹರಿಸಲಾಗುತಿತ್ತು. ಶೌಚದ ನೀರನ್ನು ಚರಂಡಿಗೆ ಹರಿಸಿದ ಸಂದರ್ಭ ರಸ್ತೆಯ ಮೇಲೆ ಹರಿದು ಇಡೀ ಪರಿಸರ ದುರ್ಗಂಧಮಯವಾಗಿತ್ತು. ಪಂಚಾಯಿತಿ ಸಿಬ್ಬಂದಿಗಳ ಈ ಕ್ರಮಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಾ, ಮೂಗುಮುಚ್ಚಿಕೊಂಡು ನಡೆದಾಡಿದರು.