ಸೋಮವಾರಪೇಟೆ, ಅ. 2: ತಾಲೂಕಿನ ಕಲ್ಲೂರು-ಮಲ್ಲೂರು ಸಂಪರ್ಕ ರಸ್ತೆ ನಿರ್ಮಾಣವಾದ 4 ತಿಂಗಳಲ್ಲೇ ಗುಂಡಿ ಬಿದ್ದಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್ ಆರೋಪಿಸಿದ್ದಾರೆ.
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 3 ಕಿ.ಮೀ ಡಾಂಬರು ರಸ್ತೆ ನಿರ್ಮಾಣವಾಗಿದ್ದು, 4 ತಿಂಗಳಿನಲ್ಲೇ ರಸ್ತೆಯಲ್ಲಿ ಗುಂಡಿಗಳಾಗುತ್ತಿವೆ.
ಗ್ರಾಮದಲ್ಲಿ 2017ರಲ್ಲಿ ಪ್ರಾರಂಭವಾದ ರೂ. 297ಲಕ್ಷ ವೆಚ್ಚದ ರಸ್ತೆ ಕಾಮಗಾರಿ 2019ರ ಸೆಪ್ಟಂಬರ್‍ನಲ್ಲಿ ಮುಗಿಯಬೇಕಿತ್ತು. ಆದರೆ, ಗುತ್ತಿಗೆದಾರರು 2019ರ ಮೇ ತಿಂಗಳಿನಲ್ಲಿ ಮುಗಿಸಿರುತ್ತಾರೆ. ನಿರ್ಮಾಣವಾಗಿ ನಾಲ್ಕು ತಿಂಗಳಿನಲ್ಲಿಯೇ ಅಲ್ಲಲ್ಲಿ ರಸ್ತೆ ಕಿತ್ತು ಬಂದು ಹಲವು ಗುಂಡಿಗಳಾಗಿವೆ.
ಮೇಲ್ನೋಟಕ್ಕೆ ಇದು ಕಳಪೆ ಕಾಮಗಾರಿ ಎಂದು ತೋರುತ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ಸಂಪೂರ್ಣ ಹಾಳಾಗುವ ಸಾಧ್ಯತೆ ಇದ್ದು, ಗುತ್ತಿಗೆದಾರರು ಯೋಜನೆಯಂತೆ ಕಾಮಗಾರಿ ಮಾಡದಿರುವದು ಇಂದಿನ ಸ್ಥಿತಿಗೆ ಕಾರಣ ಎಂದು ಅನಿಲ್ ದೂರಿದ್ದಾರೆ.
ಕೂಡಲೇ ಸಂಬಂಧಿಸಿದ ಇಲಾಖೆಯ ಗುಣಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಪುನರ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ.