*ಗೋಣಿಕೊಪ್ಪಲು, ಅ. 2: ಮನೆಯಲ್ಲಿ ದೇವರಗುಡಿ ಇರುವಂತೆ ಮನೆಯಲ್ಲೊಂದು ಗ್ರಂಥಾಲಯ ಇದ್ದರೆ ನಮ್ಮಲ್ಲಿ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಲು ಸಾಧ್ಯವಾಗಬಲ್ಲದು ಎಂದು ಸಾಹಿತಿ ಡಾ. ಜೆ. ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ಕಾವೇರಿ ಕಲಾವೇದಿಕೆಯಲ್ಲಿ 41ನೇ ವರ್ಷದ ದಸರಾ ಜನೋತ್ಸವದ ಅಂಗವಾಗಿ ನಡೆದ ದಸರಾ ಬಹುಭಾಷ ಕವಿಗೋಷ್ಠಿಯಲ್ಲಿ ಮಾತನಾಡಿದರು.
ಪುಸ್ತಕಗಳ ಓದಿನ ಹವ್ಯಾಸದಿಂದ ಉತ್ತಮ ಕಾವ್ಯ ಮತ್ತು ಗದ್ಯ ರೂಪದ ಬರಹಗಳನ್ನು ತರಬಹುದು. ಪಂಪ, ನಾಗಾರ್ಜುನರ ಕೃತಿಗಳನ್ನು ಅಧ್ಯಯನ ಮಾಡಿದಾಗ ಸಾಹಿತ್ಯದ ಜ್ಞಾನ ವೃದ್ಧಿಸುತ್ತದೆ. ಕವಿತೆಗಳು ಕೇವಲ ವಾಚಕವಾಗಿರದೆ, ಉತ್ತಮ ಸಾಮಾಜಿಕ ನೆಲೆಗಟ್ಟಿನಡಿ ಮತ್ತು ಪ್ರಕೃತಿಯ ಸೌಂದರ್ಯದಲ್ಲಿ ರಚನೆಯಾಗಬೇಕು. ಕಾವ್ಯ ವಾಚನ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಅಂತಹ ವಿಶೇಷತೆಯಲ್ಲಿ ಕಾವ್ಯವನ್ನು ಕಾವ್ಯ ವಾಚನ ಮಾಡಿದಾಗ ಪ್ರತಿಯೊಬ್ಬ ಕಾವ್ಯಾಸಕ್ತರಿಗೆ ಕಾವ್ಯ ನಾಟುತ್ತದೆ. ಈ ಪ್ರಕಾರ ಬೇಂದ್ರೆಯವರು ಕಾವ್ಯ ವಾಚಿಸುತ್ತಿದ್ದರು. ಹೀಗಾಗಿ ಬೇಂದ್ರೆ ಕಾವ್ಯ ವಾಚನ ಕೇಳಲು ಅಪಾರ ಸಂಖ್ಯೆಯಲ್ಲಿ ಕಾವ್ಯ ಪ್ರಿಯರು ಜಮಾಯಿಸುತ್ತಿದ್ದರು ಎಂದು ಕಾವ್ಯ ವಾಚಿಸುವ ಬಗ್ಗೆ ತಿಳಿಸಿದರು.
ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯನ್ನು ಸಾಹಿತಿ ಮೊಣ್ಣಂಡ ಶೋಭ ಸುಬ್ಬಯ್ಯ ಅವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು; ಉತ್ತಮ ಸಾಹಿತಿಯಾಗಲು ಒಳ್ಳೆಯ ಗ್ರಂಥಗಳ ಅಧ್ಯಯನ ಮಾಡಬೇಕು. ಶ್ರೀ ಕಾವೇರಿ ದಸರಾ ಸಮಿತಿಯು ಇಂತಹ ಸಾಹಿತ್ಯ ಪ್ರೇಮದ ಬಗ್ಗೆ ಒಲವು ಹೊಂದಿ ಕವಿಗೋಷ್ಠಿ ನಡೆಸಲು ವೇದಿಕೆ ಕಲ್ಪಿಸಿರುವದು ಉತ್ತಮ ವಿಚಾರ. ಈ ಮೂಲಕ ಹಲವಾರು ಬರಹಗಾರರಿಗೆ ಗೌರವ ಸಲ್ಲಿಸಿದಂತಾಗಿದೆ ಎಂದು ಶ್ಲಾಘಿಸಿದರು.
ವೀರಾಜಪೇಟೆ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲೆ ಇಟ್ಟೀರ ಕಮಲಾಕ್ಷಿ ಬಿದ್ದಪ್ಪ ಕವನ ವಾಚಿಸಿ ಕವಿಗಳಿಗೆ ಬರಹದ ಮೂಲ ಓದು ಎಂಬದನ್ನು ಮನದಟ್ಟು ಮಾಡಿಕೊಂಡು ಹೆಚ್ಚಿನ ಅಧ್ಯಯನಶೀಲರಾಗಬೇಕು ಎಂದು ಸಲಹೆ ನೀಡಿದರು. ಜಿಲ್ಲೆಯಿಂದ ಆಗಮಿಸಿದ್ದ ಸುಮಾರು 60ಕ್ಕೂ ಹೆಚ್ಚು ಕವಿಗಳು ಕನ್ನಡ, ಕೊಡವ, ಅರೆಭಾಷೆ, ಬ್ಯಾರಿ, ಆಂಗ್ಲ, ಕೊಂಕಣಿ, ತುಳು, ತೆಲುಗು ಭಾಷೆಗಳ ಕವನಗಳನ್ನು ಓದುವ ಮೂಲಕ ಕವಿಗೋಷ್ಠಿಗೆ ಕವಿಗಳು ಮೆರುಗು ತಂದರು. ಇದೇ ಸಂದರ್ಭ ಲೇಖಕಿ ಕೆ.ಟಿ. ವಾತ್ಸಲ್ಯ ಅವರ ಯುವಚೈತನ್ಯ ಮತ್ತು ಯುವ ಜನತೆ, ಮಹಿಳಾಪರ ಚಿಂತನೆಗಳು ಎಂಬ ಎರಡು ವೈಚಾರಿಕ ಲೇಖನಗಳ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ ರಾಮಕೃಷ್ಣ, ಕಾರ್ಯಾಧಕ್ಷ ಕುಲ್ಲಚಂಡ ಬೋಪಣ್ಣ, ಪ್ರಧಾನ ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ, ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ನೂರೇರ ರತಿ ಅಚ್ಚಪ್ಪ ಉಪಸ್ಥಿತರಿದ್ದರು. ಕವಿಗೋಷ್ಠಿ ಸಂಚಾಲಕ ಜಗದೀಶ್ ಜೋಡುಬೀಟಿ, ಚಟ್ಟಂಗಡ ರವಿ ಸುಬ್ಬಯ್ಯ, ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಮುಲ್ಲೇಂಗಡ ರೇವತಿ ಪೂವಯ್ಯ ಕಾರ್ಯಕ್ರಮ ನಿರೂಪಿಸಿದರು.