ವೀರಾಜಪೇಟೆ, ಅ. 2: ವೀರಾಜಪೇಟೆಯಲ್ಲಿ ರಸ್ತೆ ಅಗಲೀಕರಣಕ್ಕೆ ವಿರೋಧಿಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಕಾನೂನು ಹೋರಾಟ ನಡೆಸಿದರೆ ಏನು ಪ್ರಯೋಜನ ಇಲ್ಲ ಎಂದು ಅರಿತ ಮೇಲೆ ಪ್ರತಿಭಟನೆ ನಡೆಸುತ್ತೇವೆ, ನಗರ ಬಂದ್ ಮಾಡುತ್ತೇವೆ ಎನ್ನುವದು ಒತ್ತಡದ ತಂತ್ರವಾಗಿದೆ. ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ರಸ್ತೆ ಅಗಲೀಕರಣವನ್ನು ಬೆಂಬಲಿಸುತ್ತೇವೆ ಎಂದು ವರ್ತಕ ಪಟ್ರಪಂಡ ರಘು ನಾಣಯ್ಯ ಹೇಳಿದರು.

ಗ್ರಾಮಾಂತರ ಪ್ರದೇಶದ ಸಾರ್ವಜಕನಿರು, ಆಟೋ ಚಾಲಕರ ಸಂಘ, ಜಯಕರ್ನಾಟಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಘುನಾಣಯ್ಯ ಅವರು ಕಳೆದವಾರ ಸಂತ ಅನ್ನಮ್ಮ ಶಾಲೆಯ ಸಭಾಂಗಣದಲ್ಲಿ ಶಾಸಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರಸ್ತೆಯ 2ಬದಿ ತಲಾ 30 ಅಡಿಗಳಷ್ಟು ರಸ್ತೆ ಅಗಲೀಕರಣಕ್ಕೆ ವರ್ತಕರು ಹಾಗೂ ಸಾರ್ವಜನಿಕರು ಸಮ್ಮತಿ ಸೂಚಿಸಿದ್ದರು. ಅದೇ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ರಸ್ತೆ ವಿಸ್ತರಣೆಯನ್ನು ವಿರೋಧಿಸಿ ಸಾರ್ವಜನಿಕರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ಶಾಸಕರು ಮಾನವೀಯತೆಯ ದೃಷ್ಟಿಯಿಂದ 40 ಅಡಿಗಳಷ್ಟು ಇರುವ ರಸ್ತೆಯನ್ನು 30 ಅಡಿಗಳಿಗೆ ಕಡಿಮೆಗೊಳಿಸಿದ್ದಾರೆ. ಸಂಪೂರ್ಣ ಮನೆ ಕಳೆದುಕೊಳ್ಳುವವರಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಈಗ ಕೆಲವರು ಶಾಸಕರ ಮಾತಿಗೆ ಬೆಲೆ ಕೊಡದೆ ರಸ್ತೆ ವಿಸ್ತರಣೆ ಮಾಡಿದರೆ ಪಟ್ಟಣ ಬಂದ್ ಮಾಡುತ್ತೇವೆ ಎಂದು ಸಭೆಗಳನ್ನು ನಡೆಸುತ್ತಿದ್ದಾರೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯ ಮೂಕೋಂಡ ಶಶಿ ಸುಬ್ರಮಣಿ ಮಾತನಾಡಿ ಗ್ರಾಮಾಂತರ ಜನರು ಪಟ್ಟಣಕ್ಕೆ ಬಂದರೆ ಮಾತ್ರ ವ್ಯಾಪಾರ ವಹಿವಾಟು ನಡೆಯಲು ಸಾಧ್ಯ. ಪಟ್ಟಣದಲ್ಲಿ ರಸ್ತೆಗಳು ಕಿರಿದಾಗಿರುವ ದರಿಂದ ಮುಕ್ತವಾಗಿ ಸಂಚರಿಸಲು ಸಾಧ್ಯವಿಲ್ಲ, ವರ್ತಕರು ತಮ್ಮ ಅಂಗಡಿ ಮಳಿಗೆಗಳ ಮುಂದೆ ವಾಹನಗಳನ್ನು ತಂದು ನಿಲ್ಲಿಸಿಕೊಳ್ಳುತ್ತಾರೆ. ಗ್ರಾಮಾಂತರÀ ಜನರಿಗೆ ವಾಹನ ಪಾರ್ಕಿಂಗ್‍ಗೆ ಅವಕಾಶ ಸಿಗುತ್ತಿಲ್ಲ. ಇದರಿಂದ ವರ್ತಕರಿಗೆ ವ್ಯಾಪಾರ ಕಡಿಮೆ ಆಗುತ್ತಿದೆ. ಫುಟ್‍ಪಾತ್‍ನಲ್ಲಿ ವಾಹನ ನಿಲುಗಡೆ ಮಾಡುತ್ತಿರುವರಿಂದ ಶಾಲಾ ಕಾಲೇಜು ಮಕ್ಕಳು, ವಯೋವೃದ್ಧರು, ಸಾರ್ವಜನಿಕರಿಗೂ ತೊಂದರೆ ಉಂಟಾಗುತ್ತಿದೆ ಎಂದು ಹೇಳಿದರು.

ಆಟೋ ಚಾಲಕರ ಸಂಘದ ಕಾರ್ಯದರ್ಶಿ ರಜನೀಶ್ ಮಾತನಾಡಿ ಪಟ್ಟಣದಲ್ಲಿ 800ಕ್ಕೂ ಅಧಿಕ ಆಟೋಗಳಿವೆ. ರಸ್ತೆ ಕಿರಿದಾಗಿರುವದರಿಂದ ಎಲ್ಲಾ ಕಡೆಗಳಲ್ಲಿ ಏಕಮುಖ ಸಂಚಾರ ಇದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ಬಳಸಿಕೊಂಡು ಹೋಗಬೇಕಾಗಿದೆ. ರಸ್ತೆ ವಿಸ್ತರಣೆ ಯಾದರೆ ಇವೆಲ್ಲದಕ್ಕೂ ಉಪಯೋಗ ವಾಗುತ್ತದೆ ಎಂದು ಹೇಳಿದರು.

ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ ಮಾತನಾಡಿ ರಸ್ತೆ ವಿಸ್ತರಣೆಯನ್ನು ವಿರೋಧಿಸುವ ಕೆಲವರಿಗೆ ತಮ್ಮ ಮನೆಯ ಯಾವದೇ ದಾಖಲಾತಿಗಳಿಲ್ಲದ ಕಾರಣ ಸರ್ಕಾರದಿಂದ ಯಾವದೇ ಪರಿಹಾರವು ಸಿಗುವದಿಲ್ಲ ಎಂಬದನ್ನು ಅರಿತು ಪ್ರತಿಭಟನೆ ನಡೆಸಿದರೆ ಸರ್ಕಾರದ ನಿಲುವು ಬದಲಾಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ತಮ್ಮ ಮನೆಯಲ್ಲಿಯೆ ಮೂರ್ನಾಲ್ಕು ವಾಹನಗಳಿದೆ. ಪಾರ್ಕಿಂಗ್ ಜಾಗ ಇಲ್ಲದೆ ರಸ್ತೆ ಬದಿಯಲ್ಲಿಯೆ ನಿಲ್ಲಿಸುತ್ತಾರೆ. ಆದರೂ ಇವರಿಗೆ ಅಭಿವೃದ್ಧಿ ಬೇಕಾಗಿಲ್ಲ ಎಂದು ಹೇಳಿದರು.

ಗೋಷ್ಠಿಯಲ್ಲಿ ಆಟೋ ಚಾಲಕರ ಸಂಘದ ಖಜಾಂಚಿ ಸತೀಶ್, ಬಿಜೆಪಿ ಮುಖಂಡ ಜೋಕೀಂ ರಾಡ್ರಿಗಸ್, ವರ್ತಕ ಅನಿಲ್ ಮಂದಣ್ಣ ಉಪಸ್ಥಿತರಿದ್ದರು.