ಮಡಿಕೇರಿ, ಅ. 2: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ನೂರು ವರ್ಷಗಳನ್ನು ಪೂರೈಸಿರುವ ದೇಚೂರು ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ 101ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ದೇಚೂರು ರಾಮಮಂದಿರ ದಸರಾ ಮಂಟಪ ಸಮಿತಿ ಅಧ್ಯಕ್ಷ ಹೆಚ್.ಬಿ. ವಿಜಯಕುಮಾರ್ ತಿಳಿಸಿದ್ದಾರೆ.

ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದ್ದು, ಪಂಚಮುಖಿ ಆಂಜನೇಯನ ಮಹಿಮೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ದಿಂಡಿಗಲ್‍ನ ಅರುಣ್ ಲೈಟಿಂಗ್ ಬೋರ್ಡ್ ಒದಗಿಸುತ್ತಿದ್ದು, ಬೆಂಗಳೂರಿನ ಕುಮರೇಶನ್ ಧ್ವನಿವರ್ಧಕ ಅಳವಡಿಸಲಿದ್ದಾರೆ. ಸ್ಟುಡಿಯೋ ಸೆಟ್ಟಿಂಗ್ಸ್‍ನ್ನು ಬೆಂಗಳೂರಿನ ಅನಿಲ್ ವಾಸುದೇವ್ ಮಾಡಲಿದ್ದು, 13 ಕಲಾಕೃತಿಗಳನ್ನು ಬಳಸಲಾಗುತ್ತಿದೆ. ಮೈಸೂರು ಹಾಗೂ ಬೆಂಗಳೂರಿನ ಕಲಾವಿದರು ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಪ್ಲಾಟ್‍ಫಾರಂ ನಿರ್ಮಾಣ, ಟ್ರ್ಯಾಕ್ಟರ್ ಸೆಟ್ಟಿಂಗ್ಸ್ ಹಾಗೂ ಕಲಾಕೃತಿಗಳಿಗೆ ಚಲನ-ವಲನ ವ್ಯವಸ್ಥೆಯನ್ನು ಚಾರ್ಲಿ ತಂಗುಕೃಷ್ಣ ತಂಡ ಮಾಡಲಿದೆ ಎಂದು ವಿಜಯಕುಮಾರ್ ಮಾಹಿತಿ ನೀಡಿದರು.

ಒಟ್ಟು 13.50 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಬಹುಮಾನಕ್ಕಾಗಿ ಪೈಪೋಟಿ ನೀಡುವ ನಿಟ್ಟಿನಲ್ಲಿ 80 ಮಂದಿ ಸದಸ್ಯರ ತಂಡ ಶ್ರಮಿಸುತ್ತಿದ್ದು, ಫೈರ್ ಎಫೆಕ್ಟನ್ನು ಬೆಂಗಳೂರಿನ ರವಿಗೌಡ ಮತ್ತು ಅಕ್ಬರ್ ನೀಡಲಿದ್ದಾರೆ. ಕೊಳ್ಳೆಗಾಲದ ವಾದ್ಯಗೋಷ್ಠಿ ಮಂಟಪವನ್ನು ಮುನ್ನಡೆಸಲಿದೆ ಎಂದು ವಿಜಯಕುಮಾರ್ ತಿಳಿಸಿದ್ದಾರೆ.

- ಉಜ್ವಲ್ ರಂಜಿತ್