ಮಡಿಕೇರಿ, ಅ. 2: ಕಾವೇರಿ ನದಿ ದಂಡೆ ಮತ್ತು ಅದರ ಉಪ ನದಿಗಳ ಅಕ್ರಮ ಒತ್ತುವರಿ ನಿರಾಶ್ರಿತ ಸಂತ್ರಸ್ತರಿಗೆ ಒಂದೇ ನಿರ್ದಿಷ್ಟ ಪ್ರದೇಶವನ್ನು ಗುರುತುಮಾಡಿ ಅಲ್ಲಿ ಆಧುನಿಕ ಬಡಾವಣೆಯ ಮಾದರಿ ಪುನರ್ ವಸತಿ ಕಲ್ಪಿಸುವಂತೆ ಸಿಎನ್‍ಸಿ ಆಗ್ರಹಿಸಿದೆ.

ಈ ಕುರಿತು ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರದ ಪ್ರಮುಖರಿಗೆ ಮನವಿ ಸಲ್ಲಿಸಿದ್ದಾರೆ. ಕೊಡಗಿನಲ್ಲಿ ಕಾವೇರಿ ನದಿ ಹುಟ್ಟಿ ಹರಿಯುವ ಪ್ರದೇಶ, ವಿವಿಧ ಧಾರ್ಮಿಕ ನೆಲೆಗಟ್ಟಿನಿಂದ ಕೂಡಿದ್ದು, ಇದು ಅನಾದಿ ಕಾಲದಿಂದ ಸಂರಕ್ಷಿಸಿ ಕೊಂಡು ಬರಲ್ಪಟ್ಟಿದೆ. ಇದೀಗ ಈ ಪ್ರದೇಶಕ್ಕೆ ಆತಂಕ ಎದುರಾಗುತ್ತಿದೆ ಎಂದಿರುವ ಅವರು, ಈ ಹಿಂದೆ ಮುಂಬೈಯಲ್ಲಿ 30 ವರ್ಷಗಳ ಹಿಂದೆ ಸಮುದ್ರ ಕರಾವಳಿ ಒತ್ತುವರಿದಾರರನ್ನು ಸಮುದ್ರಕ್ಕೆ ಕಲ್ಲು ಮಣ್ಣು ತುಂಬಿ ಆ ಪ್ರದೇಶವನ್ನು ‘ರಿಕ್ಲಮೇಷನ್ ಏರಿಯ’ ಎಂದು ಗುರುತಿಸಿ ಪುನರ್ ವಸತಿ ಕಲ್ಪಿಸಿದ ಮಾದರಿಯಲ್ಲಿ ಒಂದೇ ಸೂರಿನಡಿ ಒಂದೇ ಪ್ರದೇಶ ಗುರುತಿಸಿ ಪುನರ್ ವಸತಿ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

ಕೊಡಗಿನಲ್ಲಿ ಐನ್‍ಮನೆ, ಕೈಮಡ, ಮಂದ್-ಮಾನಿ, ದೇವರ ಕಾಡಿನಂತೆ ನೆಲೆಗಳಿದ್ದು, ಇವು ಜನಪದೀಯ ಜೀವಂತಿಕೆಯನ್ನು ಇಂದಿಗೂ ಉಳಿಸಿ ಕೊಂಡು ಬಂದಿದೆ. ಕೇರಳ ದೇವರ ನಾಡು ಎಂಬ ಹೆಗ್ಗಳಿಕೆ ಹೊಂದಿರು ವಂತೆ ಕೊಡಗು ಸಹ ದೈವ ಸ್ವರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದಕ್ಕೆ ಧಕ್ಕೆಯಾಗಬಾರದು ಎಂದು ಅವರು ಮನವಿಯಲ್ಲಿ ಪ್ರತಿಪಾದಿಸಿದ್ದಾರೆ.