ವೀರಾಜಪೇಟೆ: ಪ್ರಕೃತಿ ವಿಕೋಪದಿಂದ ವೀರಾಜಪೇಟೆ ಅಯ್ಯಪ್ಪ ಬೆಟ್ಟದಲ್ಲಿ ಗುಡ್ಡ ಕುಸಿದಿರುವ ಸ್ಥಳಗಳಿಗೆ ಟಾಟಾ ಸಂಸ್ಥೆ, ಎಮ್ಮೆಗುಂಡಿ ಎಸ್ಟೇಟ್, ಮಾರ್ಗೊಲ್ಲಿ ಹಾಗೂ ಪಾಲಿಬೆಟ್ಟ ಎಸ್ಟೇಟ್ ಮತ್ತು ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ (ಕ್ಯಾಮಗ್ರಾಸ್) ವೆಕ್ಟಿವಾರ್ ಹುಲ್ಲುಗಳನ್ನು ನೆಡುವ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ.ರಾಜೇಶ್ ಚಾಲನೆ ನೀಡಿದರು.
ಈ ಸಂದರ್ಭ ಟಾಟಾ ಸಂಸ್ಥೆಯ ವ್ಯವಸ್ಥಾಪಕ, ಅಯ್ಯಪ್ಪ ಸ್ವಾಮಿ ದೇವಾಲಯ ಸಮಿತಿಯ ಶಾಮ್‍ಕುಮಾರ್, ಧಶರತ್, ಬಿ.ಕೆ. ಚಂದ್ರು, ಸ್ಥಳಿಯ ನಿವಾಸಿಗಳು ಉಪಸ್ಥಿತರಿದ್ದರು.ಮಡಿಕೇರಿ: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಹಾಗೂ ಕೊಡಗು ವೈದ್ಯಕೀಯ ಕಾಲೇಜು, ವೀರಾಜಪೇಟೆ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಅನುರಾದ್ ಸಂಸ್ಥೆಯೊಂದಿಗೆ ಆಯೋಜಿಸಲಾಗಿದ್ದ ಇಳಿಜಾರು ಸ್ಥಿರೀಕರಣ ವಿಧಾನಗಳ ಬಗ್ಗೆ ತರಬೇತಿ ಹಾಗೂ ಪ್ರಾತ್ಯಕ್ಷಿತೆಯು ನಗರದ ಭಾರತೀಯ ವಿದ್ಯಾ ಭವನದಲ್ಲಿ ನಡೆಯಿತು.
ಉಪ ವಿಭಾಗಾಧಿಕಾರಿ ಜವರೇಗೌಡ ಮಾತನಾಡಿ, 2018-19ರಲ್ಲಿ ಜಿಲ್ಲೆಯಲ್ಲಿ ಆದ ಪ್ರಕೃತಿ ವಿಕೋಪದಲ್ಲಿ ಅನೇಕ ಕಡೆ ಭೂ ಕುಸಿತ ಹಾಗೂ ಗುಡ್ಡಗಾಡು ಪ್ರದೇಶಗಳು ಕುಸಿದಿದ್ದು, ಇದರ ಪುನರ್ ನಿರ್ಮಾಣ ಆಗಲು ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸುವಂತಾಗಬೇಕು ಎಂದು ಮನವಿ ಮಾಡಿದರು.
ಐಐಟಿ ಜಮ್ಮು ಹಾಗೂ ಕಾಶ್ಮೀರ್ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಚಂದನ್ ಘೋಷ್ ಅವರು ಭೂಕುಸಿತಕ್ಕೆ ಒಳಗಾದ ಇಳಿಜಾರು ಪ್ರದೇಶಗಳ ಸ್ಥಿರೀಕರಣ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿತೆ ಹಾಗೂ ಲಾವಂಚ ಹುಲ್ಲಿನ ಸಸಿಗಳ ಕುರಿತು ಮಾಹಿತಿ ತಿಳಿಸಿದರು.
ಭೂದಾಖಲೆಗಳ ಸಹಾಯಕ ನಿರ್ದೇಶಕರಾದ ಷಂಶುದ್ದೀನ್, ಸುನಿಲ್ ಮುದ್ದಯ್ಯ, ಡಾ. ಕಾಮತ್, ಪ್ರೇಮ್‍ನಾಥ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಲೀಲ ಪಾಟ್ಕರ್ ಅವರು ಸ್ವಾಗತಿಸಿ, ವಂದಿಸಿದರು.
ವೀರಾಜಪೇಟೆ: ಕಳೆದ ಮೂರು ತಿಂಗಳ ಹಿಂದೆ ಸುರಿದ ಭಾರೀ ಮಳೆಗೆ ಇಲ್ಲಿನ ಸಿದ್ದಾಪುರ ರಸ್ತೆಯಲ್ಲಿರುವ ಮಲೆತಿರಿಕೆ ಬೆಟ್ಟದ ಕೆಲವು ಕಡೆಗಳಲ್ಲಿ ಬಿರುಕು ಕಂಡಿದ್ದು, ಆ ಸ್ಥಳದಲ್ಲಿ ಬೆಟ್ಟ ಸರಿಯುವದನ್ನು ತಡೆಯಲು ವೀರಾಜಪೇಟೆ ಪಟ್ಟಣ ಪಂಚಾಯಿತಿ ಹಾಗೂ ಪಾಲಿಬೆಟ್ಟದ ಟಾಟಾ ಸಂಸ್ಥೆಯ ವತಿಯಿಂದ ವೆಟ್ರಿವೇರ್ ಹುಲ್ಲುಗಳ ಸಸಿಗಳನ್ನು ನೆಟ್ಟು ಜಾಗೃತಿ ಕ್ರಮ ವಹಿಸಲಾಯಿತು. ಟಾಟಾ ಸಂಸ್ಥೆಯ 45 ನೌಕರ ಸಿಬ್ಬಂದಿಗಳು ಬೆಟ್ಟದಲ್ಲಿ ಬಿರುಕು ಕಂಡ ಸ್ಥಳಗಳಲ್ಲಿ ಹುಲ್ಲು ನೆಡುವ ಕೆಲಸದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ. ರಾಜೇಶ್ ಮಾತನಾಡಿ, ಬೆಟ್ಟದ ಬಿರುಕು ಕಂಡ ಸ್ಥಳಗಳಲ್ಲಿ ಹುಲ್ಲು ಬೆಳೆದರೆ ಇದರಿಂದ ಬೆಟ್ಟ ಜರಿಯಲು ಸಾಧ್ಯವಿಲ್ಲ. ಯಾವದೇ ಬೆಟ್ಟದಲ್ಲಿ ಬಿರುಕು ಕಂಡ ಸ್ಥಳಗಳಲ್ಲಿ ಈ ಹುಲ್ಲನ್ನು ಕಾಣಬಹುದಾಗಿದೆ. ಬೆಟ್ಟ ಜಾರದಂತೆ ನಿಗಾವಹಿಸಲು ಇದೊಂದು ಉತ್ತಮ ಕೆಲಸ ಎಂದರು. ಬೆಟ್ಟದ ಆಯ್ದ ಜಾಗಗಳಲ್ಲಿ ಹುಲ್ಲು ಸಸಿ ನೆಡುವ ಸಂದರ್ಭದಲ್ಲಿ ಮಲೆತಿರಿ ಕೆಬೆಟ್ಟದ ಅಯ್ಯಪ್ಪ ದೇವಾಲಯದ ಪದಾಧಿಕಾರಿಗಳು, ಪಟ್ಟಣ ಪಂಚಾಯಿತಿಯ ನೌಕರರು ಹಾಜರಿದ್ದರು.