ಸೋಮವಾರಪೇಟೆ, ಅ. 1: ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆಗೆ ಗ್ರಾಮೀಣ ಭಾಗದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದು, ವಾಹನಗಳಿರಲಿ; ನಡೆದಾಡಲೂ ಕಷ್ಟಕರವಾದಂತಹ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣ ಭಾಗದ ರಸ್ತೆಗಳು ಹೊಂಡಗಳ ಆಗರವಾಗಿವೆ. ಬೇಸಿಗೆಯಲ್ಲಿದ್ದ ಸಣ್ಣ ಪುಟ್ಟ ಗುಂಡಿಗಳು ಮಳೆಗೆ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದ್ದು, ಸಂಚಾರ ದುಸ್ತರವಾಗಿದೆ.
ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೀಟಿಕಟ್ಟೆ ಜಂಕ್ಷನ್‍ನಿಂದ ಹನಸೆ-ಈಚಲಬೀಡು -ಶನಿವಾರಸಂತೆ ರಸ್ತೆಯಲ್ಲೂ ಗುಂಡಿಗಳದ್ದೇ ಕಾರುಬಾರು. ಬಸವನಕೊಪ್ಪ ಸೇತುವೆಯ ಮುಂಭಾಗದಿಂದ ಸುಮಾರು 200 ಮೀಟರ್ ದೂರದಲ್ಲಿ ರಸ್ತೆಯನ್ನು ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮಿಳರ ಕಾಲೋನಿ ರಸ್ತೆ ಈಗಾಗಲೇ ಸಂಚಾರಕ್ಕೆ ಸಮಸ್ಯೆ ತಂದೊಡ್ಡಿದೆ. ಅತೀ ಹೆಚ್ಚು ಕೂಲಿ ಕಾರ್ಮಿಕರು ವಾಸಿಸುತ್ತಿರುವ ಈ ಕಾಲೋನಿಗೆ ಇಲ್ಲಿಯವರೆಗೆ ಡಾಂಬರು ರಸ್ತೆಯಾಗಿಲ್ಲ.
ಸುಳಿಮಳ್ತೆ ಗ್ರಾಮದ ರಸ್ತೆಯೂ ಗುಂಡಿಮಯವಾಗಿದ್ದು, ಗ್ರಾಮಸ್ಥರ ರಸ್ತೆ ಅಭಿವೃದ್ಧಿಯ ಕೂಗು ಅರಣ್ಯರೋಧನವಾಗಿದೆ. ಕಳೆದ 20 ವರ್ಷಗಳಿಂದಲೂ ರಸ್ತೆ ಡಾಮರೀ ಕರಣಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋವೇರ ಮನೆ ಕಡೆಯಿಂದ ಸೇನೇರ ಮನೆ ಸಂಪರ್ಕ ರಸ್ತೆಯ ಸ್ಥಿತಿಯಂತೂ ಹೇಳತ್ತಿರದ್ದಾಗಿದೆ. ಕೆಲ ದಶಕಗಳ ಹಿಂದೆ ಡಾಂಬರು ಕಂಡಿದ್ದ ಈ ರಸ್ತೆ ನಂತರದ ನಿರ್ಲಕ್ಷ್ಯದಿಂದಾಗಿ ಇದೀಗ ಸಂಚಾರಕ್ಕೆ ಅಯೋಗ್ಯವಾಗಿದೆ. ಸುಮಾರು 2 ಕಿ.ಮೀ. ರಸ್ತೆ ಇನ್ನಿಲ್ಲದಂತೆ ಹಾಳಾಗಿದೆ.
ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲುಶೆಟ್ಟಳ್ಳಿ, ಹಾನಗಲ್ಲು ಬಾಣೆ, ಆದಿಗಳಲೆ ರಸ್ತೆ, ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ಗಾಂಧಿನಗರ, ಆಲೇಕಟ್ಟೆ, ಚೌಡ್ಲು ಗ್ರಾಮ ಸಂಪರ್ಕ ರಸ್ತೆ, ಬೇಳೂರು ಗ್ರಾ.ಪಂ. ವ್ಯಾಪ್ತಿಯ ಕೆಂಚಮ್ಮನಬಾಣೆ ರಸ್ತೆ, ತೋಳೂರುಶೆಟ್ಟಳ್ಳಿಯ ಸುಗ್ಗಿಕಟ್ಟೆ, ದೊಡ್ಡತೋಳೂರು ರಸ್ತೆ, ಚಿಕ್ಕತೋಳೂರು-ಕೌಕೋಡಿ ರಸ್ತೆ, ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯ ಹಂಚಿನಳ್ಳಿ ರಸ್ತೆ, ಬೀದಳ್ಳಿ, ಕೊತ್ನಳ್ಳಿ ರಸ್ತೆ ಸೇರಿದಂತೆ ಹಲವಷ್ಟು ಗ್ರಾಮೀಣ ಪ್ರದೇಶದ ರಸ್ತೆಗಳು ಗುಂಡಿಮಯವಾಗಿವೆ.
ಇದೀಗ ಮಳೆ ಕಡಿಮೆಯಾಗಿದ್ದು, ಗ್ರಾಮೀಣ ಪ್ರದೇಶದ ರಸ್ತೆಗಳ ದುರಸ್ತಿಗೆ ಕ್ರಮವಹಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಒತ್ತಾಯಿಸಿದ್ದಾರೆ.
ಗ್ರಾಮೀಣ ಪ್ರದೇಶದ ರಸ್ತೆಗಳ ದುರಸ್ತಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಶಾಸಕರೂ ಸೇರಿದಂತೆ ಜನಪ್ರತಿನಿಧಿಗಳು ಒಟ್ಟಾಗಿ ಸರ್ಕಾರದ ಮುಂದೆ ಬೇಡಿಕೆ ಸಲ್ಲಿಸಬೇಕು. ಆ ಮೂಲಕ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಮುಂದಾಗಬೇಕೆಂದು ಸಿಂಗನಳ್ಳಿಯ ಮಾಚಯ್ಯ ಅಭಿಪ್ರಾಯಿಸಿದ್ದಾರೆ.
ಮಳೆಹಾನಿ ಪರಿಹಾರ ಅನುದಾನದಲ್ಲಿ, ಮಳೆಯಿಂದ ಹಾನಿಗೀಡಾದ ರಸ್ತೆ, ಸೇತುವೆ, ತಡೆಗೋಡೆ ಕಾಮಗಾರಿಗಳನ್ನು ಕೈಗೊಳ್ಳಲಾಗುವದು.
ಈ ಬಗ್ಗೆ ಇಲಾಖಾ ಮಟ್ಟದಲ್ಲಿ ಯೋಜನೆ ತಯಾರಿಸಲಾಗಿದೆ ಎಂದು ಪಂಚಾಯತ್ ರಾಜ್ ಇಂಜಿನಿಯ ರಿಂಗ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ.ಪಿ. ವೀರೇಂದ್ರ ‘ಶಕ್ತಿ’ಗೆ ತಿಳಿಸಿದ್ದಾರೆ.
-ವಿಜಯ್ ಹಾನಗಲ್