*ಗೋಣಿಕೊಪ್ಪಲು, ಸೆ. 30: ಉತ್ತಮ ಸಾಹಿತ್ಯವನ್ನು ರಚಿಸುವ ಮೂಲಕ ಕೊಡಗಿನ ಸಾಹಿತ್ಯವನ್ನು ಮೇರು ಮಟ್ಟಕ್ಕೆ ಕೊಂಡೊಯ್ದ ಸಾಹಿತಿಗಳಲ್ಲಿ ಭಾರತಿಸುತ ಅವರ ಕೊಡುಗೆ ಅಪಾರವಾದದ್ದು ಎಂದು ಜಿಲ್ಲಾ ಸರ್ವೋದಯ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.

ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಮತ್ತು ಕಾವೇರಿ ಪದವಿ ಮತ್ತು ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಇಲ್ಲಿನ ಕಾಲೇಜು ಸಭಾಂಗಣದಲ್ಲಿ ನಡೆದ ಭಾರತಿಸುತರ ಸಾಹಿತ್ಯ, ಸಂವಾದ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸುಮಾರು 74 ಕೃತಿಗಳನ್ನು ರಚಿಸಿದ ಭಾರತಿಸುತರ ಸಾಹಿತ್ಯ ಕೃತಿಗಳಲ್ಲಿ ಕೇವಲ 32 ಕೃತಿಗಳಷ್ಟೇ ಲಭ್ಯವಿದೆ. ಅದರಲ್ಲೂ ಅವರ ಕೆಲವು ಕೃತಿಗಳು ಸಿನಿಮಾಗಳಾಗಿರುವದು ಬಹಳ ಹೆಮ್ಮೆಯ ವಿಚಾರವಾಗಿದೆ. ಕೊಡಗಿನ ಮತ್ತು ವೈನಾಡು ಭಾಗದ ಪರಿಸರವನ್ನೇ ತಮ್ಮ ಸಾಹಿತ್ಯದಲ್ಲಿ ಅಳವಡಿಸಿಕೊಂಡು ಅಂದಿನ ಕಾಲದ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಕಥೆಗಳನ್ನು ಹೆಣೆದ ಭಾರತಿಸುತರು ಕೌಟುಂಬಿಕ ವ್ಯವಸ್ಥೆಗಳೊಳಗಿನ ಚಿತ್ರಣಗಳನ್ನು ಕಟ್ಟಿಕೊಟ್ಟರು. ಈ ಮೂಲಕ ಕೊಡಗಿನಲ್ಲಿ ಸಾಹಿತ್ಯವನ್ನು ಮತ್ತಷ್ಟು ವಿಸ್ತರಿಸಿ ಕೊಡಗಿನಲ್ಲಿರುವ ಸಾಹಿತ್ಯದ ಕೊರತೆಯನ್ನು ನೀಗಿಸಿದರು. ಇಂತಹ ಸಾಹಿತಿಗಳ ಬದುಕು ಬರಹಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುವ ಮೂಲಕ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಿಕ್ಷಕರಾಗಿಯೂ, ಸಾಹಿತಿ ಯಾಗಿಯೂ ಗುರುತಿಸಿಕೊಂಡು ಶಿಸ್ತುಬದ್ದ ಜೀವನ ನಡೆಸಿದ ಇವರ ಆದರ್ಶ ಜೀವನ ಪ್ರತಿಯೊಬ್ಬರಿಗೂ ಮಾರ್ಗದರ್ಶನ ಎಂದರು.

ಪ್ರಾಸ್ತಾವಿಕ ನುಡಿಗಳನ್ನು ಆಡಿದ ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ ಭಾರತಿಸುತರ ಸಾಹಿತ್ಯವನ್ನು ವಿದ್ಯಾರ್ಥಿಗಳು ಓದಿಕೊಂಡು ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯದ ಓದಿನಿಂದ ಹೆಚ್ಚಿನ ಜ್ಞಾನಗಳಿಸಲು ಸಾಧ್ಯವಿದೆ. ಎಸ್.ಆರ್. ನಾರಾಯಣ ರಾವ್ ಅವರು ಭಾರತಿಸುತ ಎನ್ನುವ ಕಾವ್ಯನಾಮದಿಂದ ಪ್ರಸಿದ್ದರಾಗಿ ಹಲವು ಕೃತಿಗಳನ್ನು ರಚಿಸಿದ್ದಾರೆ ಎಂದರು. ಇವರನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಸಣ್ಣ ಕಾರ್ಯಕ್ಕೆ ನಾವು ಕೈಜೋಡಿಸಿದ್ದೇವೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.

ಭಾರತಿಸುತರ ಸಾಹಿತ್ಯದಲ್ಲಿ ಮಹಿಳೆ ಎಂಬ ವಿಚಾರವಾಗಿ ಹಿರಿಯ ಸಾಹಿತಿ ಬಿ.ಎ ಷಂಶುದ್ದೀನ್ ಉಪನ್ಯಾಸ ನೀಡಿ ಅವರ ಕಾದಂಬರಿ ಗಳಲ್ಲಿ ಬರುವ ಹೆಣ್ಣಿನ ಪಾತ್ರಗಳನ್ನು ಅಂದಿನ ಕಾಲಘಟ್ಟದೊಳಗೆ ಬಹು ಸುಂದರವಾಗಿ ಶಬ್ದಗಳ ರೂಪದಲ್ಲಿ ಹೆಣೆದಿದ್ದಾರೆ ಎಂದು ಭಾರತಿಸುತರ ಕಾದಂಬರಿಗಳ ಬಗ್ಗೆ ವಿಶ್ಲೇಷಿಸಿದರು.

ಹಿರಿಯ ಸಾಹಿತಿ ಗಿರೀಶ್ ಕಿಗ್ಗಾಲು ಅವರು ಭಾರತಿಸುತರ ಸಾಹಿತ್ಯ ವಿಚಾರವಾಗಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಕೆ.ವಿ. ಕುಸುಮಾದರ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್ ಮಾದಯ್ಯ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ತೀತಿರ ರೇಖಾ ವಸಂತ್, ಸಂಪಾದಕ ಮನು ಶೆಣೈ, ಸಾಹಿತಿ ಬಿ.ಆರ್. ಜೋಯಪ್ಪ ಸೇರಿದಂತೆ ಹಲವು ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಹಾಜರಿದ್ದರು. ಮುನೀರ್ ಅಹಮ್ಮದ್ ಜನಪದ ಗೀತೆ ಹಾಗೂ ವಿ.ಟಿ. ಶ್ರೀನಿವಾಸ್ ದೇಶಭಕ್ತಿ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.