ಸೋಮವಾರಪೇಟೆ, ಅ. 1: ತಾಲೂಕಿನ ಗೋಣಿಮರೂರು, ಗಣಗೂರು ಮತ್ತು ಬಾಣಾವರ ವ್ಯಾಪ್ತಿಯಲ್ಲಿ ವಿದ್ಯುತ್ ಇಲಾಖೆಯವರು ರೈತರಿಗೆ ಕಿರುಕುಳ ನೀಡುತ್ತಿದ್ದು, ಇದು ಮುಂದುವರೆದರೆ ಉಗ್ರ ಹೋರಾಟ ರೂಪಿಸಲಾಗುವದು ಎಂದು ಈ ಭಾಗದ ರೈತರು ಎಚ್ಚರಿಕೆ ನೀಡಿದ್ದಾರೆ.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ವಿದ್ಯುತ್ ಇಲಾಖಾ ಸಿಬ್ಬಂದಿಗಳ ಕಿರುಕುಳದ ಬಗ್ಗೆ ಮನವಿ ಸಲ್ಲಿಸಿದ ರೈತರು, ಇಂತಹ ಕ್ರಮಕ್ಕೆ ತಕ್ಷಣ ಕಡಿವಾಣ ಹಾಕಲು ಇಲಾಖೆಗೆ ಸೂಚಿಸುವಂತೆ ಒತ್ತಾಯಿಸಿದರು.
ತಾಲೂಕಿನ ಗೋಣಿಮರೂರು, ಗಣಗೂರು, ಬಾಣಾವರ ಸುತ್ತಮುತ್ತಲ ರೈತರು ಕೃಷಿ ಉಪಯೋಗಕ್ಕಾಗಿ ವಿದ್ಯುತ್ ಸಂಪರ್ಕ ಪಡೆದಿದ್ದು, ಮನೆಗಳಿಗೆ ಕುಡಿಯುವ ನೀರನ್ನೂ ಸಹ ತೆಗೆದುಕೊಳ್ಳಲಾಗುತ್ತಿದೆ. ಆದರೆ ಇದೀಗ ವಿದ್ಯುತ್ ಇಲಾಖೆಯ ಅಧಿಕಾರಿಗಳು ವಿದ್ಯುತ್ ಬಿಲ್ ಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಂಜನ್, ಈ ಹಿಂದೆ ಉಸ್ತುವಾರಿ ಸಚಿವರು ಕೊಡಗಿಗೆ ಭೇಟಿ ನೀಡಿದ ಸಂದರ್ಭ 10 ಹೆಚ್.ಪಿ. ವರೆಗೆ ಉಚಿತ ವಿದ್ಯುತ್ ಒದಗಿಸಬೇಕು; ರೈತರಿಗೆ ತೊಂದರೆ ಕೊಡಬೇಡಿ ಎಂದು ಸೂೀಚಿಸಲಾಗಿದೆ. ಆದರೂ ಸಹ ಅಧಿಕಾರಿಗಳು ತೊಂದರೆ ಕೊಡುವದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವದು ಎಂದರು.
ಈ ಸಂದರ್ಭ ಪ್ರಮುಖರುಗಳಾದ ಸಣ್ಣಸ್ವಾಮಿ, ಉದಯ್, ಶೇಖರ್, ಮಲ್ಲಿಕಾರ್ಜುನ, ಶಿವದಾಸ್, ರಾಜಶೇಖರ್, ನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.