ವೀರಾಜಪೇಟೆ, ಅ. 1: ವಿದ್ಯಾರ್ಥಿ ಜೀವನದಲ್ಲಿ ಉತ್ತಮವಾದ ನಾಯಕತ್ವ ಗುಣಗಳನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ಅಪ್ರತಿಮ ನಾಯಕರಾಗಿ ಹೊರಹೊಮ್ಮಲು ಸಾಧ್ಯ ಎಂದು ವಿಶಿಷ್ಟ ಸೇವಾ ಪದಕ ವಿಜೇತರಾದ ನಿವೃತ್ತ ಸೇನಾಧಿಕಾರಿ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಹೇಳಿದರು. ವೀರಾಜಪೇಟೆ ಕಾವೇರಿ ಪದವಿ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ತಮ್ಮ ಸೇನಾ ಸೇವಾವಧಿಯ ಅನುಭವಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅತಿಥಿಯಾಗಿ ಭಾಗವಹಿಸಿದ್ದ ಭರತನಾಟ್ಯ ನೃತ್ಯ ಕಲಾವಿದೆ ಮುಕ್ಕಾಟಿರ ಶಿಲ್ಪಾ ನಂಜಪ್ಪ ಯಾವದೇ ಕಲೆಯಲ್ಲಿ ಉನ್ನತಿಯನ್ನು ಸಾಧಿಸಲು ದೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮ ಅತ್ಯಂತ ಪ್ರಮುಖ ಎಂದರು.

ಕಾವೇರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎ.ಸಿ.ಗಣಪತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸೇನಾಧಿಕಾರಿ ಕರ್ನಲ್ ಸುಬ್ಬಯ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಸಂಘದ ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು. ವೇದಿಕೆಯಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಮಾರ್ಗದರ್ಶಕ ಕರಣ್ ಕುಮಾರ್ ಹಾಗೂ ಕೆ.ಜಿ ವೀಣಾ ಮತ್ತು ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.