ಕುಶಾಲನಗರ, ಅ. 1: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಮತ್ತು ಆದಿವಾಸಿ ಭಾರತ್ ಮಹಾಸಭಾದ ಕೊಡಗು ಜಿಲ್ಲಾ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.

ಬಸವನಹಳ್ಳಿ, ಬ್ಯಾಡಗೊಟ್ಟ ಆದಿವಾಸಿಗಳಿಗೆ ತಲಾ 3 ಎಕರೆ ಕೃಷಿ ಭೂಮಿ ಒದಗಿಸಬೇಕು, ಆದಿವಾಸಿಗಳಿಗೆ ವರ್ಷವಿಡೀ ಪೌಷ್ಠಿಕ ಆಹಾರ ನೀಡಬೇಕು, 6ನೇ ಹೊಸಕೋಟೆ ಅಂದಾನಿಪುರದಲ್ಲಿ 20 ವರ್ಷಗಳಿಂದ 3 ಎಕರೆ ಭೂಮಿ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರುವ ಬಡವರ ಜಾಗವನ್ನು ಪೊಲೀಸ್ ಇಲಾಖೆಯ ಅಭಿವೃದ್ಧಿ ಕಾರ್ಯಗಳಿಗೆ ಸೇರ್ಪಡೆ ಗೊಳಿಸಿರುವದನ್ನು ರದ್ದುಗೊಳಿಸಿ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಸರಕಾರವನ್ನು ಆಗ್ರಹಿಸಿದರು.

ಪಟ್ಟಣದ ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಹೊರಟ ಪ್ರತಿಭಟನಾಕಾರರು ಸಂಘದ ಧ್ವಜ ಹಿಡಿದು ನಾಡಕಛೇರಿವರೆಗೆ ಮೆರವಣಿಗೆ ನಡೆಸಿದರು.

ನಾಡಕಛೇರಿ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ರೈತ ಸಂಘದ ರಾಜ್ಯ ಅಧ್ಯಕ್ಷ ಡಿ.ಎಚ್.ಪೂಜಾರ್, ಉಪಾಧ್ಯಕ್ಷ ಶ್ರೀನಿವಾಸ ಕಂದೇಗಾಲ, ಕಾರ್ಯದರ್ಶಿ ಬಿ.ಎಸ್.ನಿರ್ವಾಣಪ್ಪ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಣ್ಣಪ್ಪ, ಮಹಿಳಾ ಸಂಘದ ಜಿಲ್ಲಾ ಅಧ್ಯಕ್ಷೆ ಪವಿತ್ರ, ಸಿಪಿಐಎಂ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎಸ್.ಆರ್. ಮಂಜುನಾಥ್, ಆದಿವಾಸಿ ಮಹಾಸಭಾದ ಕಾರ್ಯಕರ್ತರಾದ ರಾಜು, ಚಿನ್ನಪ್ಪ, ಶಂಕ್ರು, ಅಪ್ಪು, ಅನಿತ ಮತ್ತಿತರರು ಇದ್ದರು.