ಗೋಣಿಕೊಪ್ಪಲು, ಅ. 1: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ ಬಳಿ ಇರುವ 70ಕ್ಕೂ ಅಧಿಕ ಪರಿಶಿಷ್ಟ ವರ್ಗದ ಕುಟುಂಬಗಳಿಗೆ ಜಿಲ್ಲಾಡಳಿತ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಯಿತು. ಗೋಣಿಕೊಪ್ಪ ಜಿಲ್ಲಾ ಪಂಚಾಯಿತಿ ಸದಸ್ಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಕೆ. ಬೋಪಣ್ಣ ಆಹಾರ ಕಿಟ್ ವಿತರಿಸಿದರು.
ಈ ಭಾಗದ ಪರಿಶಿಷ್ಟ ವರ್ಗದ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಶೌಚಾಲಯ ನಿರ್ಮಾಣ ಮಾಡಲಾಗುವದು. ರಸ್ತೆ ನಿರ್ಮಾಣಕ್ಕೆ ಇಲಾಖೆ ವತಿಯಿಂದ ರೂ. 10 ಲಕ್ಷ ಅನುದಾನ ಮೀಸಲಿಟ್ಟಿದ್ದು ಕೆಲವೇ ದಿನಗಳಲ್ಲಿ ರಸ್ತೆ ಕಾಮಗಾರಿ ಆರಂಭಗೊಳ್ಳಲಿದೆ. ಅಂಗನವಾಡಿ ನಿರ್ಮಾಣ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ನೀಲನಕ್ಷೆ ತಯಾರಾಗಿದೆ. ಇಲಾಖೆಯು ಹಂತಹಂತವಾಗಿ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಿದೆ. ಜನತೆ ಸಹಕಾರ ನೀಡಬೇಕೆಂದು ಸಿ.ಕೆ. ಬೋಪಣ್ಣ ತಿಳಿಸಿದರು.
ಜಿಲ್ಲಾ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ ಇಲ್ಲಿಯ ಪರಿಸ್ಥಿತಿ ಅವಲೋಕಿಸಿದ್ದಾರೆ. ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ. ಆದಷ್ಟು ಬೇಗನೇ ಇಲ್ಲಿಯ ಕೆಲಸಗಳು ಆರಂಭ ವಾಗಲಿದೆ ಎಂದರು. ಜಿಲ್ಲಾಡಳಿತದ ಸೂಚನೆ ಮೇರೆ ತಾಲೂಕು ಗಿರಿಜನ ಕಲ್ಯಾಣಾಧಿ ಕಾರಿಗಳು ಈ ಭಾಗದ 70 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು. ತಾಲೂಕು ಗಿರಿಜನ ಕಲ್ಯಾಣಾಭಿವೃದ್ಧಿ ಅಧಿಕಾರಿ ದೇವರಾಜ್, ನವೀನ್ ಹಾಡಿಯ ಪ್ರಮುಖರಾದ ಜಪ್ಪು ಮುಂತಾದವರು ಹಾಜರಿದ್ದರು.
- ಹೆಚ್.ಕೆ. ಜಗದೀಶ್