ಭಾಗಮಂಡಲ, ಸೆ. 30: ಸಮೀಪದ ಚೇರಂಬಾಣೆಯ ಬೇಂಗೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಅಧ್ಯಕ್ಷತೆಯಲ್ಲಿ ನಿಗದಿಯಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಕಂದಾಯ ಇಲಾಖಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸದಸ್ಯರು ಸಭೆಗೆ ಆಗಮಿಸದ ಬಗ್ಗೆ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತಗೊಂಡಿತು. ಕಂದಾಯ ಇಲಾಖಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಆಗಮಿಸದೇ ಇರುವದರಿಂದ ಸಭೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಯಿತು. ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಬೇಂಗೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಬಹಳಷ್ಟು ಆಸ್ತಿಪಾಸ್ತಿ ನಷ್ಟವಾಗಿದೆ. ಕಾಫಿಯ ತೋಟಗಳು ಹಾಳಾಗಿದ್ದು ರೈತರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ರೆವಿನ್ಯೂ ಅಧಿಕಾರಿಗಳಾಗಲಿ, ಈ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರಾಗಲಿ ಒಂದು ಬಾರಿಯೂ ಕೂಡ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಬೇಂಗೂರು ಚೇರಂಬಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಭಾಗಮಂಡಲ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ದೂರು ನೀಡಿದ್ದು, ಈ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರು ಕಳೆದ ಆರು ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇಂದಿನ ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಗ್ರಾಮಸಭೆಗೂ ಗೈರು ಹಾಜರಾಗಿದ್ದಾರೆ. ಮುಂದಿನ ಗ್ರಾಮಸಭೆಯೊಳಗೆ ಅವರನ್ನು ಹುಡುಕಿಕೊಡಿ ಹಾಗೂ ಮುಂದಿನ ಗ್ರಾಮಸಭೆಯನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿ ಎಂದು ದೂರಿನಲ್ಲಿ ಅವರು ಮನವಿ ಮಾಡಿದ್ದಾರೆ. -ಸುನಿಲ್