ಸೋಮವಾರಪೇಟೆ, ಅ. 1: ಕೃಷಿ ಕ್ಷೇತ್ರದ ಬೆಳವಣಿಗೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಎಲ್ಲಿಯವರೆಗೆ ಕೃಷಿ ಕ್ಷೇತ್ರ ಅಭಿವೃದ್ಧಿ ಕಾಣುವದಿಲ್ಲವೋ ಅಲ್ಲಿಯವರೆಗೆ ದೇಶದ ಆಮೂಲಾಗ್ರ ಅಭಿವೃದ್ಧಿ ಅಸಾಧ್ಯ ಎಂದು ನಬಾರ್ಡ್‍ನ ನಿವೃತ್ತ ವ್ಯವಸ್ಥಾಪಕ ಎಂ.ಸಿ. ನಾಣಯ್ಯ ಅಭಿಪ್ರಾಯಿಸಿದರು.

ಇಲ್ಲಿನ ಭುವನ ಮಂದಾರ ರೈತ ಉತ್ಪಾದಕರ ಸಂಸ್ಥೆ ಮತ್ತು ಅಬ್ಬೂರುಕಟ್ಟೆ, ಹಾರಳ್ಳಿ, ತಣ್ಣೀರುಹಳ್ಳ, ಹಾನಗಲ್ಲು ಮತ್ತು ಚಿಕ್ಕಬ್ಬೂರು ಜಲಾನಯನ ಸಮಿತಿಗಳ ವತಿಯಿಂದ ಸ್ಥಳೀಯ ಗೌಡ ಸಮುದಾಯ ಭವನದ ಶ್ರೀಗಂಧ ಕನ್ವೆನ್‍ಷನ್ ಸಭಾಂಗಣದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮ ದಲ್ಲಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ರೈತರು ಇತರ ಉತ್ಪಾದಕತೆ ಯತ್ತಲೂ ಗಮನ ಹರಿಸುವ ಮೂಲಕ ತಮ್ಮ ಅರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದು ಕಿವಿಮಾತು ನುಡಿದ ನಾಣಯ್ಯ ಅವರು, ನಬಾರ್ಡ್‍ನಿಂದ ಕೊಡಗಿನಲ್ಲಿ ಕೃಷಿ ಕ್ಷೇತ್ರಕ್ಕಾಗಿಯೇ ರೈತರಿಗೆ 2800 ಕೋಟಿ ಸಾಲ ವಿತರಿಸಲಾಗಿದೆ. ಇದರೊಂದಿಗೆ ರೈತರ ಗೃಹ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸಕ್ಕೂ ಸಾಲ ಸೌಲಭ್ಯ ನೀಡಲಾಗಿದೆ ಎಂದರು.

ದೇಶದಲ್ಲಿ 2500 ರೈತ ಉತ್ಪಾದಕ ಸಂಸ್ಥೆಗಳಿದ್ದು, ಕರ್ನಾಟಕದಲ್ಲಿ 185 ಸಂಸ್ಥೆಗಳು ಕಾರ್ಯನಿರ್ವಹಿಸುವ ಮೂಲಕ ರೈತರಿಗೆ ಸ್ಪಂದಿಸುತ್ತಿವೆ. ನಬಾರ್ಡ್‍ನಿಂದ 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆಯ ಯೋಜನೆಯಿದೆ. ಅಂತರ್ಜಲ ಸೇರಿದಂತೆ ಕೃಷಿ ಅಭಿವೃದ್ಧಿ ಕಾರ್ಯಗಳಿಗೆ ಸುಮಾರು ರೂ. 27 ಕೋಟಿ ಅನುದಾನವನ್ನು ಜಿಲ್ಲೆಗೆ ತರಲಾಗಿದೆ. ಇದರೊಂದಿಗೆ ಸುಸ್ಥಿರ ಅಭಿವೃದ್ಧಿ ಯೋಜನೆಯಡಿ ರೂ. 1.50 ಕೋಟಿ ಅನುದಾನ ವಿನಿಯೋಗ ವಾಗುತ್ತಿದೆ ಎಂದು ನಾಣಯ್ಯ ತಿಳಿಸಿದರು. ಓಡಿಪಿ ಸಂಸ್ಥೆಯ ಸಂಯೋಜಕ ರಮೇಶ್ ಮಾತನಾಡಿ, ಭುವನ ಮಂದಾರ ರೈತ ಉತ್ಪಾದಕ ಸಂಸ್ಥೆಯಿಂದ ರೂ. 1 ಕೋಟಿಯಷ್ಟು ವ್ಯವಹಾರ ನಡೆಸಿದ್ದು, ರೈತರಿಗೆ ಅತೀ ಕಡಿಮೆ ದರದಲ್ಲಿ ಉತ್ಪನ್ನಗಳನ್ನು ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭುವನ ಮಂದಾರ ಸಂಸ್ಥೆಯ ಮುಖ್ಯ ನಿರ್ದೇಶಕ ಎಸ್.ಎಂ. ಡಿಸಿಲ್ವಾ ವಹಿಸಿದ್ದರು. ವೇದಿಕೆಯಲ್ಲಿ ನಬಾರ್ಡ್‍ನ ಡಿಜಿಎಂ ಶ್ರೀನಿವಾಸ್ ಉಪಸ್ಥಿತರಿದ್ದರು.

ಭುವನ ಮಂದಾರ ರೈತ ಉತ್ಪಾದಕರ ಸಂಸ್ಥೆ ಮತ್ತು ಅಬ್ಬೂರುಕಟ್ಟೆ, ಹಾರಳ್ಳಿ, ತಣ್ಣೀರುಹಳ್ಳ, ಹಾನಗಲ್ಲು ಮತ್ತು ಚಿಕ್ಕಬ್ಬೂರು ಜಲಾನಯನ ಸಮಿತಿಗಳ ವತಿಯಿಂದ ನಬಾರ್ಡ್‍ನ ನಿವೃತ್ತ ವ್ಯವಸ್ಥಾಪಕ ಎಂ.ಸಿ. ನಾಣಯ್ಯ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.