ವೀರಾಜಪೇಟೆ, ಸೆ. 30 : ವೀರಾಜಪೇಟೆ ಪಟ್ಟಣ ಪಂಚಾಯಿತಿ ಉಸ್ತುವಾರಿಯಲ್ಲಿ ಇಲ್ಲಿನ ಸುಂಕದ ಕಟ್ಟೆಯಿಂದ ಆರ್ಜಿ ಗ್ರಾಮದ ಸೇತುವೆಯವರೆಗೆ ಅವೈಜ್ಞಾನಿಕವಾಗಿ ಕೈಗೊಂಡಿರುವ ರಸ್ತೆ ಅಗಲೀಕರಣಕ್ಕೆ ಮುಖ್ಯ ರಸ್ತೆಯಲ್ಲಿರುವ ಸಂಬಂಧಿಸಿದ ಎಲ್ಲ ನಿವಾಸಿಗಳು, ಕಟ್ಟಡ ಮಾಲೀಕರು, ಸಾರ್ವಜನಿಕರು, ವರ್ತಕರು ವಿರೋಧಿಸಿದ್ದಾರೆ. ವೀರಾಜಪೇಟೆ ಪಟ್ಟಣ ಗುಡ್ಡಗಾಡು ಪ್ರದೇಶದ ವ್ಯಾಪ್ತಿಯಲ್ಲಿದ್ದು ರಸ್ತೆ ಅಗಲೀಕರಣದಿಂದ ಪಟ್ಟಣವೇ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಸರ್ವ ನಾಶವಾಗುವ ಹಿನ್ನಲೆಯಲ್ಲಿ ರಸ್ತೆ ಅಗಲೀಕರಣವನ್ನು ಕೈ ಬಿಡಬೇಕು. ಇದರ ಪರ್ಯಾಯವಾಗಿ ಬೈಪಾಸ್ ರಸ್ತೆ ನಿರ್ಮಾಣ ಮಾಡಲಿ. ಇಲ್ಲದಿದ್ದರೆ ಕಟ್ಟಡ ಮಾಲೀಕರಿಂದ, ವರ್ತಕರಿಂದ, ಸಂಘ ಸಂಸ್ಥೆಗಳ ಪ್ರತಿನಿಧಿಗಳಿಂದ ನಿವಾಸಿಗಳ ಆಶ್ರಯದಲ್ಲಿ ಪ್ರತಿಭಟನೆ, ಪಟ್ಟಣ ಬಂದ್ ಹಮ್ಮಿಕೊಳ್ಳಲು ಸಭೆ ನಿರ್ಧರಿಸಿತು.
ವೀರಾಜಪೇಟೆಯ ಬೋರೇಗೌಡ ಸಂಕೀರ್ಣದ ಕನಕ ಸಭಾಂಗಣದಲ್ಲಿ ರಸ್ತೆ ಅಗಲೀಕರಣ ಸಂಬಂಧದ ಕಟ್ಟಡ ಮಾಲೀಕರು, ಮುಖ್ಯ ರಸ್ತೆಯ ನಿವಾಸಿಗಳು, ಸಾರ್ವಜನಿಕರು ಏರ್ಪಡಿಸಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕರುಣ್ ಕಾಳಯ್ಯ ಮಾತನಾಡಿ ವೀರಾಜಪೇಟೆಯಂತಹ ಸಣ್ಣ ಪಟ್ಟಣಕ್ಕೆ ಈಗಿರುವ ರಸ್ತೆಯೇ ಸಾಕಾಗಿದ್ದು ರಸ್ತೆ ಅಗಲೀಕರಣ ಅಗತ್ಯವಿಲ್ಲ. ಇಲಾಖೆ ರಸ್ತೆ ಅಗಲೀಕರಣಕ್ಕೆ ವಿರೋಧದ ನಡುವೆಯೂ ಮುಂದಾದರೆ ಪ್ರತಿಭಟನೆಗೆ ಮುಂದಾಗಬೇಕು ಎಂದು ಹೇಳಿದರು.
ಸಿದ್ದಾಪುರ ರಸ್ತೆಯ ನಿವಾಸಿ ಎನ್.ಯು.ಮೋಹನ್ ಅಯ್ಯಪ್ಪ ಮಾತನಾಡಿ 1929 ರಿಂದ ಇಲ್ಲಿಯ ತನಕ ವೀರಾಜಪೇಟೆ ಪಟ್ಟಣದಲ್ಲಿ ನಾಲ್ಕು ಬಾರಿ ರಸ್ತೆ ಅಗಲೀಕರಣ ಗೊಳಿಸಲಾಗಿದೆ. ಈಚೆಗೆ ಭಾರೀ ಮಳೆಯಿಂದ ಮಲೆತಿರಿಕೆಬೆಟ್ಟ ಜಾರುವ ಆತಂಕ ಇಲ್ಲಿನ ಪಟ್ಟಣದ ನಿವಾಸಿಗಳಲ್ಲಿ ಬೇರೂರಿದ್ದು ಅಧಿಕಾರಿಗಳು ಇದನ್ನು ಲೆಕ್ಕಿಸದೆ ರಸ್ತೆ ಅಗಲೀಕರಣಕ್ಕೆ ಯೋಜನೆ ರೂಪಿಸಿ ಇಲ್ಲಿನ ನಿವಾಸಿಗಳಿಗೆ ಭಯದ ವಾತಾವರಣ ಮೂಡಿಸುತ್ತಿದ್ದಾರೆ. ಈಗ ಸರಕಾರದಿಂದ ಬಂದಿರುವ ಹಣವನ್ನು ರಸ್ತೆ ದುರಸ್ತಿ ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸುವಂತಾಗಲಿ ಎಂದರು.
ಡಾ. ಎಂ.ಎ.ಪಾರ್ಥ ಮಾತನಾಡಿ ರಸ್ತೆ ಅಗಲೀಕರಣದಿಂದ ಬೀದಿಯ ನಿವಾಸಿಗಳು ಕಟ್ಟಡಗಳನ್ನು ಕಳೆದುಕೊಳ್ಳುವದರೊಂದಿಗೆ ಪಟ್ಟಣವೇ ನಿರ್ನಾಮವಾಗಲಿದೆ. ರಸ್ತೆ ಅಗಲೀಕರಣದಿಂದ ಆಗುವ ದುಷ್ಪರಿಣಾಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಹಿರಿಯ ವಕೀಲ ಎನ್.ಜಿ.ಕಾಮತ್ ಮಾತನಾಡಿ ಐತಿಹಾಸಿಕ ನಗರವೆಂಬ ಪ್ರಸಿದ್ಧಿ ಹೊಂದಿರುವ ವೀರಾಜಪೇಟೆಯಲ್ಲಿ ರಸ್ತೆ ಅಗಲೀಕರಣದಿಂದ ಬಡ ಬಗ್ಗರು ಬೀದಿಗೆ ಬರುವದು ಖಚಿತ. ಜೊತೆಗೆ 9ದೇವಾಲಯಗಳು, 2 ಮಸೀದಿಗಳು ಭಾಗಶಃ ಜಖಂಗೊಳ್ಳಲಿವೆ. ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಹಾಗೂ ಇತರ ಸ್ವಾರ್ಥಪರ ಶಕ್ತಿಗಳು ಸೇರಿ ಏಕ ಪಕ್ಷೀಯವಾಗಿ ಸಾರ್ವಜನಿಕರ, ನಿವಾಸಿಗಳ ಸಲಹೆ ಅಭಿಪ್ರಾಯ ಪಡೆಯದೆ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದಾರೆ. ಕಸ್ತೂರಿ ರಂಗನ್ ವರದಿ ಪ್ರಕಾರ ಅಂತರರಾಜ್ಯದ ಕೊಡಗಿನ ಗಡಿಭಾಗದಲ್ಲಿ ರಸ್ತೆ ಅಗಲೀಕರಣ ಮಾಡುವಂತಿಲ್ಲ. ಅಧಿಕಾರಿಗಳು ಪ್ರತಿಭಟನೆ, ಬಂದ್ಗೆ ಮಣಿಯದಿದ್ದರೆ ಅಂತಿಮವಾಗಿ ನ್ಯಾಯಾಲಯಕ್ಕೆ ಹೋಗುವ ನಿರ್ಧಾರವನ್ನು ಕೈಗೊಳ್ಳುವದಾಗಿ ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಎಚ್.ಮತೀನ್ ಮಾತನಾಡಿ ಪಟ್ಟಣ ಪಂಚಾಯಿತಿಗೆ ಇನ್ನೂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಆಗದಿರುವದರಿಂದ ಸದಸ್ಯರುಗಳ ಪೂರ್ವಾನುಮತಿ ಪಡೆಯದೆ ಮುಖ್ಯಾಧಿಕಾರಿ ಏಕ ಪಕ್ಷೀಯವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ರಸ್ತೆ ಅಗಲೀಕರಣವನ್ನು ವಿರೋಧಿಸುವ ಹೋರಾಟವನ್ನು ಮುಕ್ತವಾಗಿ ಬೆಂಬಲಿಸುವದಾಗಿ ಹೇಳಿದರು. ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ.ರಾಜೇಶ್ ಮಾತನಾಡಿ ಅವೈಜ್ಞಾನಿಕವಾದ ರಸ್ತೆ ಅಗಲೀಕರಣಕ್ಕೆ ನಿವಾಸಿಗಳೊಂದಿಗೆ ಹೋರಾಡುವ ದಾಗಿ ಹೇಳಿದರು.
ಸದಸ್ಯ ಸಿ.ಕೆ.ಪೃಥ್ವಿನಾಥ್ ಪಟ್ಟಣ ಪಂಚಾಯಿತಿಯ ಇತರ ಅಭಿವೃದ್ಧಿ ಕಾರ್ಯಗಳನ್ನು ಬದಿಗೊತ್ತಿ ರಸ್ತೆ ಅಗಲೀಕರಣಕ್ಕೆ ವಿಶೇಷ ಆಸಕ್ತಿ ವಹಿಸಿರುವ ಮುಖ್ಯಾಧಿಕಾರಿ ಶ್ರೀಧರ್ ಅವರು ರಸ್ತೆ ಅಗಲೀಕರಣಕ್ಕೆ ಈಗ ಸರಕಾರದಿಂದ ಮಂಜೂರಾಗಿರುವ ಕೋಟಿಗಟ್ಟಲೆ ಹಣವನ್ನು ವೆಚ್ಚ ಮಾಡಿ ಸರಕಾರಕ್ಕೆ ಲೆಕ್ಕ ತೋರಿಸಲಿದ್ದಾರೆ. ರಸ್ತೆ ಅಗಲೀಕರಣದ ಮೂಲಕ ಮುಖ್ಯ ರಸ್ತೆಗಳಲ್ಲಿರುವ ನಿವಾಸಿಗಳಿಗೆ ಭಯದ ವಾತಾವರಣ ಮೂಡಿಸಿದ್ದಾರೆ. ಇಷ್ಟು ಸಣ್ಣ ಪಟ್ಟಣಕ್ಕೆ ರಸ್ತೆ ಅಗಲೀಕರಣದ ಅವಶ್ಯಕತೆ ಇಲ್ಲ ಎಂದರು.
ವೀರಾಜಪೇಟೆ ತಾಂತ್ರಿಕ ತಜ್ಞ ಎಂ.ಎ.ರಘುಪತಿ ಅವರು ರಸ್ತೆ ಅಗಲೀಕರಣದಿಂದ ಆಗುವ ನಷ್ಟ ಕಷ್ಟಗಳನ್ನು ವೀಡಿಯೋ ಮೂಲಕ ಪ್ರದರ್ಶಿಸಿದರು. ನಿವಾಸಿಗಳ ಪರವಾಗಿ ರಸ್ತೆ ಅಗಲೀಕರಣ ವಿರೋಧಿಸಿ ಡಾ:ದುರ್ಗಾಪ್ರಸಾದ್, ಎನ್.ಉಮೇಶ್, ಐ.ಆರ್.ಪ್ರಮೋದ್, ಉಷಾ ಪ್ರೀತಮ್, ಟಿ.ಕೆ.ರವಿಕುಮಾರ್, ಟಿ.ಜೆ.ದಿವಾಕರ್, ಮಹಮ್ಮದ್ ಹಸನ್, ಸರೋಜಮ್ಮ, ಮತ್ತಿತರರು ಮಾತನಾಡಿದರು. ಸಾರ್ವಜನಿಕರು, ನಿವಾಸಿಗಳ ಪರವಾಗಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಸಂಚಾಲಕ ಟಿ.ಪಿ.ಕೃಷ್ಣ ಸಭೆಯನ್ನು ಏರ್ಪಡಿಸಿದ್ದರು. ವಕೀಲರಾದ ಸಿ.ವಿ.ಸುನಿಲ್ ನಿರೂಪಿಸಿದರು. ಸಭೆಯಲ್ಲಿ ಮಹಿಳೆಯರು ಸೇರಿದಂತೆ ಕಟ್ಟಡ ಮಾಲೀಕರು, ನಿವಾಸಿಗಳು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು.