ಗೋಣಿಕೊಪ್ಪಲು, ಸೆ.30: ಇಲ್ಲಿನ ಒಂದನೇ ವಿಭಾಗದ ದಸರಾ ನಾಡ ಹಬ್ಬ ಸಮಿತಿ ವತಿಯಿಂದ ಈ ಬಾರಿ 30ನೇ ವರ್ಷದ ದಸರಾ ಉತ್ಸವವನ್ನು ಆಚರಿಸಲಾಗುತ್ತಿದೆ. ದಸರಾದ ಮುಖ್ಯ ಆಕರ್ಷಣೆಯಾದ ಸ್ತಬ್ಧ ಚಿತ್ರ ಮೆರವಣಿಗೆಯು ತಾ.8ರಂದು ಮಧ್ಯಾಹ್ನ 2 ಗಂಟೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಿಂದ ಆರಂಭವಾಗಲಿದೆ ಎಂದು ದಸರಾ ನಾಡ ಹಬ್ಬ ಸಮಿತಿಯ ಹಿರಿಯ ಗೌರವ ಅಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ತಿಳಿಸಿದರು.

ಗೋಣಿಕೊಪ್ಪಲುವಿನ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ತಬ್ಧ ಚಿತ್ರ ಮೆರವಣಿಗೆ ಯಶಸ್ವಿಯಾಗಲು ನಾಡಿನ ಸಂಘ ಸಂಸ್ಥೆಗಳು,ಶಾಲಾ,ಕಾಲೇಜು, ದಶಮಂಟಪಗಳು ಸ್ತಬ್ಧ ಚಿತ್ರವನ್ನು ಮೆರವಣಿಗೆಯಲ್ಲಿ ಸಾಗಿ ಬರುವಂತೆ ಸಹಕರಿಸಬೇಕು.ಆರ್ಥಿಕ ಮುಗ್ಗ ಟ್ಟಾದರೂ ಇರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶಕ್ತಿ ಮೀರಿ ಸ್ತಬ್ಧ ಚಿತ್ರವನ್ನು ಹೊರಡಿಸಬೇಕು. ಇದರಿಂದ ನಗರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುವ ಕಲಾಭಿಮಾನಿಗಳಿಗೆ ಸಾರ್ವಜನಿಕರಿಗೆ ಉತ್ತಮ ಪ್ರದರ್ಶನ ನೀಡಿದಂತಾಗುತ್ತದೆ ಎಂದರು. ಈಗಾಗಲೇ ಉತ್ತಮ ರೀತಿಯಲ್ಲಿ ಸ್ತಬ್ಧ ಚಿತ್ರ ಪ್ರದರ್ಶನ ನೀಡಲು ಸಮಿತಿಯು ಸಕಲ ವ್ಯವಸ್ಥೆ ಮಾಡಿದೆ ಈ ಬಾರಿ ಕಾವೇರಿ ದಸರಾ ಸಮಿತಿಯು ನಗದು ಬಹುಮಾನದ ಪ್ರಾಯೋಜಕತ್ವ ನೀಡಲಿದ್ದು ಉಳಿದ ಬಹುಮಾನಗಳನ್ನು ದಸರಾ ನಾಡ ಹಬ್ಬ ಸಮಿತಿಯು ನಾಡಿನ ದಾನಿಗಳ ಸಹಕಾರದಿಂದ ಪಡೆಯಲಿದೆ. ಬಹು ಆಕರ್ಷಣೆಯಾದ ಸ್ತಬ್ಧಚಿತ್ರ ಪ್ರದರ್ಶನದ ಕಾರ್ಯಕ್ರಮಕ್ಕೆ ಕಾವೇರಿ ದಸರಾ ಸಮಿತಿಯು ದಸರಾ ನಾಡ ಹಬ್ಬ ಸಮಿತಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಸ್ತಬ್ಧ ಚಿತ್ರ ಮೆರವಣಿಗೆಗೆ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.

ಸಮಿತಿಯ ಅಧ್ಯಕ್ಷ ರಿಷಿ ಕಾವೇರಪ್ಪ ಮಾತನಾಡಿ, ವಿವಿಧ ಭಾಗದಿಂದ ಅನುಭವಿ ತೀರ್ಪುಗಾರರನ್ನು ನೇಮಕ ಮಾಡಲಾಗುವದು ಬಹುಮಾನ ವಿಚಾರದಲ್ಲಿ ತೀರ್ಪುಗಾರರು ನೀಡುವ ತೀರ್ಪನ್ನೇ ಅಂತಿಮವಾಗಿ ಪರಿಗಣಿಸಲಾಗುವದು ಹೆಚ್ಚಿನ ಸಂಖ್ಯೆಯಲ್ಲಿ ಸ್ತಬ್ಧ ಚಿತ್ರ ಹೊರಡಿಸುವಂತೆ ನಾಗರಿಕರು ಈಗಿನಿಂದಲೇ ತಯಾರಿ ನಡೆಸುವಂತೆ ಹಾಗೂ ತಾ.8ರಂದು ಆರ್‍ಎಂಸಿ ಯಾರ್ಡ್‍ನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದೆಂದು ತಿಳಿಸಿದರು. ಮೆರವಣಿಗೆಯಲ್ಲಿ ಸಾಂಸ್ಕøತಿಕ ಮನೋರಂಜನಾ ತಂಡಗಳು ಭಾಗವಹಿಸಲಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮಾಜಿ ಅಧ್ಯಕ್ಷ ಮೈಕಲ್, ಕೋಶಾಧಿಕಾರಿ ರಂಜಿತ್, ಸದಸ್ಯರಾದ ಸುನಿಲ್ ಹಾಜರಿದ್ದರು. -ಹೆಚ್.ಕೆ.ಜಗದೀಶ್