ಮಡಿಕೇರಿ, ಸೆ. 30: ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಿರ್ಮಿಸಿರುವ ಕಲಾ ಸಂಭ್ರಮ ವೇದಿಕೆಯಲ್ಲಿ; ಇಂದಿನಿಂದ ವಿಜಯದಶಮಿ ತನಕ ಜರುಗಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ, ಕನಿಷ್ಟ ಮೂಲಭೂತ ಸೌಕರ್ಯದ ಕೊರತೆ ಯಾಗದಂತೆ ನಿಗಾವಹಿಸಬೇಕೆಂದು; ದಸರಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನಗರಸಭೆ ಆಯುಕ್ತರಿಗೆ ನಿರ್ದೇಶಿಸಿದ್ದಾರೆ.

ಈ ಬೆಳಿಗ್ಗೆ ಗಾಂಧಿ ಮೈದಾನದಲ್ಲಿ ಸಿದ್ಧಗೊಳ್ಳುತ್ತಿರುವ ನವರಾತ್ರಿ ಕಾರ್ಯಕ್ರಮ ಸಭಾಂಗಣ, ವೇದಿಕೆ, ಆಸನಗಳ ವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿ; ಶೌಚಾಲಯ, ನೀರಿನ ವ್ಯವಸ್ಥೆ, ಬೆಳಕಿನ ಸೌಲಭ್ಯ ಸೇರಿದಂತೆ ಇತರ ಅನುಕೂಲತೆಯ ಕೊರತೆಯಾಗದಂತೆ ಕ್ರಮವಹಿಸಲು ತಿಳಿ ಹೇಳಿದರು.

ಗಾಂಧಿ ಮೈದಾನದ ವಿಶಾಲ ವೇದಿಕೆಯ ತಯಾರಿ, ಸಭಾಂಗಣ ಪೆಂಡಾಲ್ ಸುರಕ್ಷತೆ, ಮಳೆಯಿಂದ ಕಲಾವಿದರು ಮತ್ತು ಸಾರ್ವಜನಿಕರಿಗೆ ಅಡಚಣೆ ಉಂಟಾಗದಂತೆ ಅನುಸರಿಸಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ದಸರಾ ಸಮಿತಿ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಮಾಲೋಚನೆ ನಡೆಸಿದರು.

ದಸರಾ ಸಮಿತಿಯ ಗೌರವ ಕಾರ್ಯದರ್ಶಿಯೂ ಆಗಿರುವ ಆಯುಕ್ತ ಎಂ.ಎಲ್. ರಮೇಶ್, ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಉಪಾಧ್ಯಕ್ಷ ಅರುಣ್ ಶೆಟ್ಟಿ ಸೇರಿದಂತೆ ಇತರರು ಹಾಜರಿದ್ದು, ಪೂರ್ವ ಸಿದ್ಧತೆಯ ಮಾಹಿತಿ ನೀಡಿದರು.

ಜಾನಪದ ಉತ್ಸವದ ಕುರಿತು ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಖಜಾಂಚಿ ಎಸ್.ಎಸ್. ಸಂಪತ್‍ಕುಮಾರ್, ಸಂಚಾಲಕ ಹೆಚ್.ಟಿ. ಅನಿಲ್ ವಿವರಣೆ ನೀಡಿದರು. ಎಲ್ಲವನ್ನು ಆಲಿಸಿದ ಜಿಲ್ಲಾಧಿಕಾರಿಗಳು ಎಲ್ಲಾ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುವ ದಿಸೆಯಲ್ಲಿ ನೋಡಿಕೊಳ್ಳ ಬೇಕೆಂದು ಸಲಹೆಯಿತ್ತರು.