ಸೋಮವಾರಪೇಟೆ,ಸೆ.30: ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಪ್ರತಿ ವರ್ಷದಂತೆ ಆಯೋಜಿಸಲಾಗುವ ಶ್ರೀ ಶರನ್ನವರಾತ್ರಿ ಉತ್ಸವಕ್ಕೆ ದೇವಾಲಯ ಸಮಿತಿ ಪದಾಧಿಕಾರಿಗಳು ವಿಧ್ಯುಕ್ತ ಚಾಲನೆ ನೀಡಿದರು.
ಬ್ರಾಹ್ಮಣ ಸಮಾಜದ ಹಿರಿಯರಾದ ರತನ್ ಪದ್ಮನಾಭ ಅವರ ಮನೆಯಿಂದ ದೇವಿಯ ಮೂರ್ತಿಯನ್ನು ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳ ಮೂಲಕ ಪ್ರತಿಷ್ಠಾಪಿಸಲಾಯಿತು.
ನಂತರ ಉತ್ಸವಮೂರ್ತಿಗೆ ಅಲಂಕಾರ, ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ, ರಂಗಪೂಜೆ, ಆವರಣೋತ್ಸವ, ಉಯ್ಯಾಲೋತ್ಸವ ಹಾಗೂ ಮಂಗಳಾರತಿ ನಡೆಯಿತು.
ತಾ. 1 ರಂದು (ಇಂದು) ಬ್ರಹ್ಮಚಾರಿಣಿ ಅಲಂಕಾರ, 2 ರಂದು ಭಾರತಮಾತೆ ಅಲಂಕಾರ, 3 ರಂದು ಹೊಂಬಾಳೆ ಅಲಂಕಾರ, 4 ರಂದು ವಿಳ್ಳೆದೆಲೆ ಅಲಂಕಾರ, 5 ರಂದು ಶಾರದಾಂಭೆ ಅಲಂಕಾರ ನಡೆಯುವದು. ಅ. 5ರಂದು ಬೆಳಿಗ್ಗೆ 8 ಕ್ಕೆ ಸರಸ್ವತಿ ಪೂಜೆ ಮತ್ತು ಮಕ್ಕಳಿಗೆ ಅಕ್ಷರಭ್ಯಾಸ ನಡೆಯಲಿದೆ.
ಅ. 6 ರಂದು ಬೆಳಿಗ್ಗೆ 9 ಕ್ಕೆ ದುರ್ಗಾಹೋಮ, 12 ಕ್ಕೆ ಪೂರ್ಣಾಹುತಿ, ರಾತ್ರಿ ಲಿಂಬೆಹಣ್ಣಿನ ಅಲಂಕಾರ ನಡೆಯಲಿದೆ. 7 ರಂದು ಅಡಿಕೆ ಅಲಂಕಾರ, 8 ರಂದು ಮಧ್ಯಾಹ್ನ 3 ಕ್ಕೆ ದೇವಿಯ ಮೆರವಣಿಗೆಯೊಂದಿಗೆ ವಿಗ್ರಹವನ್ನು ಆನೆಕೆರೆಯಲ್ಲಿ ವಿಸರ್ಜಿಸಲಾಗುವದು ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.
ಈ ಸಂದರ್ಭ ದೇವಾಲಯ ಸಮಿತಿ ಕಾರ್ಯದರ್ಶಿ ಎಸ್.ಡಿ. ವಿಜೇತ್, ಖಜಾಂಚಿ ಶ್ಯಾಂಸುಂದರ್, ಪ್ರಮುಖರಾದ ಎಸ್.ಆರ್. ಸೋಮೇಶ್, ಮಧುಸೂದನ್, ಯಡೂರು ಹರೀಶ್, ರಾಜೇಶ್ ಪದ್ಮನಾಭ್, ಲೋಕೇಶ್, ಪ್ರಸಾದ್, ಶ್ರೀಕಾಂತ್, ಸೋಮಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.