ಮಡಿಕೇರಿ, ಅ. 1: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹುದಿಕೇರಿ ಗ್ರಾಮದ ಮಲ್ನಾಡ್ ರಿಕ್ರಿಯೇಷನ್ಸ್ ಕ್ಲಬ್ನಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟುಕೊಂಡು ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಪೊಲೀಸ್ ಇನ್ಸ್ಪೆಕ್ಟರ್ ಡಿಸಿಐಬಿ ಮಡಿಕೇರಿ ಹಾಗೂ ಸಿಬ್ಬಂದಿಯವರು ದಾಳಿ ನಡೆಸಿದ್ದು, 7 ಮಂದಿಯನ್ನು ಬಂಧಿಸಿದ್ದಾರೆ. ಜೂಜಾಟಕ್ಕೆ ಬಳಸಿದ್ದ ರೂ. 69,620 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್ಸ್ಪೆಕ್ಟರ್ ಎಂ. ಮಹೇಶ್, ಸಿಬ್ಬಂದಿಗಳಾದ ಕೆ.ವೈ. ಹಮೀದ್, ಕೆ.ಎಸ್. ಅನಿಲ್ ಕುಮಾರ್, ವಿ.ಜಿ. ವೆಂಕಟೇಶ್, ಬಿ.ಎಲ್. ಯೋಗೇಶ್ ಕುಮಾರ್, ಕೆ.ಆರ್. ವಸಂತ, ಎಂ.ಎನ್.ನಿರಂಜನ್, ಚಾಲಕ ಕೆ.ಎಸ್. ಶಶಿಕುಮಾರ್ ಅವರುಗಳು ದಾಳಿ ನಡೆಸಿ ಕ್ರಮ ಕೈಗೊಂಡಿದ್ದಾರೆ.