ಪೊನ್ನಂಪೇಟೆ, ಸೆ. 30: ಕಳೆದ ಮಳೆಗಾಳದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಂತ್ರಸ್ತರಾದ ಕಾವೇರಿ ನದಿತೀರದ ಎಲ್ಲಾ ಸಂತ್ರಸ್ತರು ಸರಕಾರದ ಪುನರ್ವಸತಿ ಯೋಜನೆಗೆ ಅರ್ಹರಾಗಿದ್ದಾರೆ. ಆದ್ದರಿಂದ ನದಿತೀರದ ಎಲ್ಲಾ ಸಂತ್ರಸ್ತರನ್ನು ಜಿಲ್ಲಾಡಳಿತ ಪರಿಗಣಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಸಿ.ಎಸ್. ಅರುಣ್ ಮಾಚಯ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತರಿಗೆ ಪರಿಹಾರ ಒದಗಿಸಿ ಅವರಿಗೆ ಪುನರ್ವಸತಿಯನ್ನು ಕಲ್ಪಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜನಪ್ರತಿನಿಧಿಗಳನ್ನು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಪಕ್ಷಾತೀತವಾದ ಜಿಲ್ಲಾಮಟ್ಟದ ‘ಸಂತ್ರಸ್ತರ ಪುನರ್ವಸತಿ ನಿರ್ವಹಣಾ ಸಮಿತಿ’ಯನ್ನು ಕೂಡಲೇ ಸರಕಾರ ಅಸ್ತಿತ್ವಕ್ಕೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಅತಿವೃಷ್ಟಿ ಉಂಟಾದ ಸಂದರ್ಭದಲ್ಲಿ ಅಪಾರ ಪ್ರಮಾಣದ ನಾಶ-ನಷ್ಟ ಸಂಭವಿಸಿದೆ. ಆ ಅವಧಿಯ 15 ದಿನಗಳ ಕಾಲ ಪರಿಹಾರ ಕಾರ್ಯ ಬಿರುಸಿನಿಂದ ನಡೆದಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ವಹಿಸಿದ್ದ ಮುತುವರ್ಜಿ ಸ್ವಾಗತಾರ್ಹ. ಆದರೆ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲು ಅಗತ್ಯವಿರುವ ಮಾನದಂಡ ಇದೀಗ ಪ್ರಶ್ನೆಯಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಮಾನವೀಯತೆಯೊಂದಿಗೆ ಜನಪರ ನಿಲುವು ತೆಗೆದುಕೊಳ್ಳಬೇಕಿದೆ. ಎಲ್ಲಾ ಸಂತ್ರಸ್ತರು ಸರಕಾರದ ಪುನರ್ವಸತಿ ಯೋಜನೆಗೆ ಅರ್ಹರು ಎಂಬದನ್ನು ಜಿಲ್ಲಾಡಳಿತ ಮರೆಯಬಾರದು ಎಂದು ಅರುಣ್ ಮಾಚಯ್ಯ ಪುನರುಚ್ಚರಿಸಿದರು.
ನದಿತೀರದ ಸಂತ್ರಸ್ತರ ಪುನರ್ವಸತಿ ಬಗ್ಗೆ ಇದೀಗ ಜಿಲ್ಲಾಧಿಕಾರಿಗಳ ನಿಲುವಿನ ಮೇಲೆ ಜಿಲ್ಲೆಯಲ್ಲಿ ಪರ-ವಿರೋಧದ ಹೇಳಿಕೆಗಳು ಬರುತ್ತಿವೆ. ಕಳೆದ ಹಲವು ದಶಕಗಳಿಂದ ನದಿತೀರದ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿದ್ದ ಕುಟುಂಬ ಗಳಿಗೆ ಜಿಲ್ಲಾಡಳಿತ ಪುನರ್ವಸತಿ ಕಲ್ಪಿಸದಿದ್ದರೆ ಅವರು ಎಲ್ಲಿ ವಾಸಿಸಬೇಕು? ಅವರೇನು ಬೇರೆ ದೇಶದಿಂದ ಧಿಡೀರನೆ ಬಂದು ನೆಲೆಸಿದ ವಲಸಿಗರೇ? ಎಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದ ಅರುಣ್ ಮಾಚಯ್ಯ
(ಮೊದಲ ಪುಟದಿಂದ) ಅವರು, ನದಿತೀರದ ಸಂತ್ರಸ್ತರು ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಮತ್ತು ಆಹಾರ ಪಡಿತರ ಚೀಟಿ ಹೊಂದಿದ್ದು, 1989ರಿಂದ ಈಚೆಗೆ ನಡೆದ ನಿರಾಶ್ರಿತರ ಸಮೀಕ್ಷೆಯ ಪಟ್ಟಿಯಲ್ಲಿ ಇವರ ಹೆಸರಿದ್ದರೆ ಸರಕಾರದ ಪುನರ್ವಸತಿ ಯೋಜನೆಗೆ ಇವರು ಖಂಡಿತ ಅರ್ಹರಾಗುತ್ತಾರೆ. ಈ ಮಾನದಂಡದ ಆಧಾರದಲ್ಲಿ ನದಿತೀರದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.
ನದಿ ತೀರದ ಪ್ರದೇಶದ ಒತ್ತುವರಿಗೆ ಸಂಬಂಧಿಸಿದಂತೆ 1983ರಲ್ಲಿ ಕೇಂದ್ರ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿದೆ. ಅದನ್ನು ಆಯಾ ರಾಜ್ಯ ಸರಕಾರಗಳ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರವಾನಿಸಿದೆ.ಅರಣ್ಯ ಮತ್ತು ಕಂದಾಯ ಇಲಾಖೆಗೆ ಒಳಪಟ್ಟ ಯಾವದೇ ಒತ್ತುವರಿಯನ್ನು ಸಕ್ರಮಗೊಳಿಸಲು ಈ ಸುತ್ತೋಲೆಯಲ್ಲಿ ಸ್ಪಷ್ಟ ಉಲ್ಲೇಖವಿದೆ. ಈ ಸುತ್ತೋಲೆ ಆಧಾರದಲ್ಲಿ 1985 ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನೇತೃತ್ವದ ಸರಕಾರ ನಿರಾಶ್ರಿತರ ಪಟ್ಟಿಮಾಡಿ ಒತ್ತುವರಿ ಮಾಡಿದ್ದಲ್ಲಿ ಸಕ್ರಮಗೊಳಿಸಲು ಸ್ಪಷ್ಟ ಆದೇಶ ನೀಡಿದೆ ಎಂದು ನೆನಪಿಸಿದ ಅರುಣ್ ಮಾಚಯ್ಯ ಅವರು, ಸರಕಾರದ ಈ ಆದೇಶದ ಮಾನದಂಡದಲ್ಲಿ ನದಿ ತೀರದ ಪ್ರದೇಶದ ಜನತೆಗೆ ಜಿಲ್ಲಾಡಳಿತ ನ್ಯಾಯ ಒದಗಿಸಿ ಮಾನವೀಯತೆ ಮೆರೆಯಬೇಕು ಎಂದು ಹೇಳಿದರು.
ಅತಿವೃಷ್ಟಿ ವೇಳೆ ತಮ್ಮ ಕಾಫಿತೋಟ ಮತ್ತು ಭತ್ತದ ಗದ್ದೆಯನ್ನು ಕಳೆದುಕೊಂಡ ದಕ್ಷಿಣ ಕೊಡಗಿನ ನೂರಾರು ರೈತರಿದ್ದಾರೆ. ಅಲ್ಲದೆ ಸಂಪಾಜೆ, ಚೆಂಬು ಭಾಗದ ಬೆಳೆಗಾರರು ತಮ್ಮ ಅಡಿಕೆ, ತೆಂಗು, ರಬ್ಬರ್ ಮೊದಲಾದ ಬೆಳೆಗಳನ್ನು ನೂರಾರು ಎಕರೆಗಳಲ್ಲಿ ಕಳೆದುಕೊಂಡಿದ್ದಾರೆ. ಇವರೆಲ್ಲರಿಗೂ ಸೂಕ್ತವಾದ ಪರಿಹಾರ ದೊರೆಯಬೇಕು. ಕೇವಲ ಅಲ್ಪ ಮೊತ್ತದ ಪರಿಹಾರ ಧನ ನೀಡಿ ಜಿಲ್ಲಾಡಳಿತ ಕೈತೊಳೆದುಕೊಳ್ಳಬಾರದು. ಎಲ್ಲವನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ವೈಜ್ಞಾನಿಕ ರೂಪದಲ್ಲೇ ಪರಿಹಾರ ಒದಗಿಸಬೇಕು. ಆಸ್ತಿ ಕಳೆದುಕೊಂಡ ರೈತರಿಗೆ ನ್ಯಾಯೋಚಿತ ದರದಲ್ಲಿ ವೈಜ್ಞಾನಿಕ ಪರಿಹಾರ, ಇಲ್ಲವೇ ಅರಣ್ಯಿಕರಣಕ್ಕಾಗಿ ಸರಕಾರವೇ ಸಂತ್ರಸ್ತ ರೈತರಿಗೆ ಹಣ ನೀಡಿ ಹಾನಿಯಾದ ಜಾಗವನ್ನು ಖರೀದಿಸಬೇಕು. ಇಲ್ಲವೇ ಹಾನಿಯಾದ ಜಾಗವನ್ನು ಸರಕಾರ ಪಡೆದು ಅದಕ್ಕೆ ಪರ್ಯಾಯವಾದ ಜಾಗವನ್ನು ಬೇರೆಡೆ ನೀಡಿ ಸಂತ್ರಸ್ತ ರೈತರನ್ನು ಮೇಲೆತ್ತಬೇಕು ಎಂದು ಅವರು ಸಲಹೆ ನೀಡಿದರು.
ಸಂತ್ರಸ್ತರ ಸಮಸ್ಯೆಗಳ ಕುರಿತು ಸ್ಥಳೀಯರಿಗೆ ಮಾತ್ರ ಸಂಪೂರ್ಣ ಅರಿವು ಇರುತ್ತದೆ. ಆದ್ದರಿಂದ ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನು ಒಳಗೊಂಡ ಪಕ್ಷಾತೀತವಾದ ‘ಸಂತ್ರಸ್ತರ ಪುನರ್ವಸತಿ ನಿರ್ವಹಣಾ ಸಮಿತಿ’ಯನ್ನು ಸರಕಾರ ಜಾರಿಗೆ ತರಬೇಕು. ಪುನರ್ವಸತಿ ಕುರಿತು ಸಮಿತಿಯ ತೀರ್ಮಾನವೇ ಅಂತಿಮವಾಗಬೇಕು. ಈ ಸಮಿತಿಯಲ್ಲಿ ತೋಟಗಾರಿಕೆ, ಕೃಷಿ, ಕಂದಾಯ, ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳನ್ನು ಸೇರಿದಂತೆ ಕಾಫಿ ಮಂಡಳಿಯ ತಜ್ಞರನ್ನು ಸೇರಿಸಿಕೊಳ್ಳಬೇಕು. ಸಮಿತಿ ರಚನೆ ಕುರಿತ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ಕೂಡಲೇ ಸರಕಾರಕ್ಕೆ ಕಳುಹಿಸಿ ಮಂಜೂರಾತಿ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ನದಿತೀರದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಭೂ ಬ್ಯಾಂಕ್‍ನಿಂದ ಜಾಗ ಪಡೆಯಲಿ ಎಂದು ಜಿಲ್ಲಾಡಳಿತಕ್ಕೆ ಸಲಹೆ ನೀಡಿರುವ ಅರುಣ್ ಮಾಚಯ್ಯ ಅವರು, ಜಾಗದ ಲಭ್ಯತೆಯನ್ನು ಆಧರಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಇದೂ ಒಂದು ಕಾನೂನುಬದ್ಧ ಮಾರ್ಗ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಆಪಟ್ಟಿರ ಎಸ್. ಟಾಟು ಮೊಣ್ಣಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಮತ್ತು ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಕೆ.ಎಂ. ಅಬ್ದುಲ್ ರಹಮಾನ್ (ಬಾಪು) ಉಪಸ್ಥಿತರಿದ್ದರು.