ಕಣಿವೆ, ಅ.1 : ಮೈಸೂರು ದಸರಾದಲ್ಲಿ ಭಾಗಿಯಾಗಲು ತಿಂಗಳಿಗೂ ಮೊದಲೇ ಧಾವಿಸುತ್ತಿದ್ದ ಹರ್ಷನಿಗೆ ದಸರಾ ಮಾಸದ ಅಷ್ಟೂ ದಿನಗಳಲ್ಲಿ ರಾಜಾತಿಥ್ಯ ದೊರಕುತ್ತಿತ್ತು. ಆದರೆ ಈಗ ಯಾವ ಆತಿಥ್ಯವೂ ಇಲ್ಲದೇ ಏಕಾಂಗಿಯಾಗಿ ಇದ್ದದ್ದು ಕಂಡು ಬಂತು. ದೈಹಿಕವಾಗಿ ಒಂದಷ್ಟು ಬಳಲಿದೆ ಎಂಬ ಕಾರಣಕ್ಕೆ ಕಳೆದ ವರ್ಷ ದಿಂದ ಹರ್ಷನನ್ನು ಅರಣ್ಯಾಧಿಕಾರಿಗಳು ದಸರಾಕ್ಕೆ ಕಳುಹಿಸುತ್ತಿಲ್ಲ.
ಹರ್ಷ ಸಾಕಾನೆಯ ಲಾಲನೆ ಪಾಲನೆಯನ್ನು ಮಾವುತ ಚಿಕ್ಕ ಇದೀಗ ನಿರ್ವಹಿಸುತ್ತಿದ್ದಾನೆ. ಸಾಕಾನೆಯ ಶಿಬಿರದಲ್ಲಿ ವರ್ಷವಿಡೀ ಸಿಗದೇ ಇರುವಂತಹ ಪೌಷ್ಟಿಕ ಆಹಾರ, ಲಾಲನೆ - ಪಾಲನೆಯನ್ನು ಮೈಸೂರು ದಸರಾದ ಆ ಒಂದು ತಿಂಗಳ ಕಾಲ ಸಾಕಾನೆಗಳಿಗೆ ನೀಡುವ ಕಾರಣದಿಂದಲೂ ಈಗ ಹರ್ಷ ಹಿಂದಿನ ಆ ದಸರಾ ದಿನಗಳ ಆತಿಥ್ಯವನ್ನು ನೆನೆದು ಕಂಬನಿ ಗೈಯುತ್ತಿತ್ತೆ ಎಂಬ ಪ್ರಶ್ನೆ ಅರೆಕ್ಷಣ ಹರ್ಷನನ್ನು ನೋಡಿದಾಗ ಮೂಡಿತು. ನೀಳವಾದ ದಂತಗಳನ್ನು ಹೊಂದಿರುವ ಈ ಹರ್ಷ ಸಧೃಡ ಕಾಯವನ್ನು ಹೊಂದಿದ್ದಾನೆ. ಆದರೆ ಏಕೆ ದೈಹಿಕವಾದ ಕಾರಣವನ್ನು ಅರಣ್ಯಾಧಿಕಾರಿಗಳು ನೀಡಿದರೋ ತಿಳಿಯುತ್ತಿಲ್ಲ ಎಂದು ಆನೆ ಪ್ರಿಯರೊಬ್ಬರು ಸಂದೇಹ ವ್ಯಕ್ತಪಡಿಸುತ್ತಾರೆ.
ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದ ಹರ್ಷನ ಮಾವುತರು ಹಾಗೂ ಕಾವಾಡಿಗಳು ಮೈಸೂರಿನ ದಸರಾದ ತಾತ್ಕಾಲಿಕ ಶಿಬಿರದಲ್ಲಿ ಅಲ್ಲಿನ ಅರಣ್ಯಾಧಿಕಾರಿ ಗಳಿಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ ಮತ್ತು ಇತರೇ ಆನೆಗಳ ಮಾವುತರು ಹಾಗೂ ಕಾವಾಡಿಗಳೊಂದಿಗೆ ಸರಿಯಾಗಿ ಹೊಂದುತ್ತಿರಲಿಲ್ಲ ಎಂಬ ಬಲವಾದ ಕಾರಣವನ್ನು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದರು. ಏನೇ ಇರಲೀ ಸತತವಾಗಿ ಹದಿನೈದು ವರ್ಷಗಳ ಕಾಲ ರಾಜ ಗಾಂಭೀರ್ಯದಿಂದ ದಸರಾದಲ್ಲಿ ಭಾಗಿಯಾಗುತ್ತಿದ್ದ ಹರ್ಷನನ್ನು ಆನೆಕಾಡಿನ ಸಾಕಾನೆ ಶಿಬಿರದಲ್ಲೂ ಹರುಷದಿಂದ ನೋಡಿಕೊಳ್ಳಬೇಕಾಗಿದೆ.
-ಮೂರ್ತಿ