ವೀರಾಜಪೇಟೆ, ಸೆ. 30: ಕೇರಳ ರಾಜ್ಯದ ಕಸಾಯಿಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನ ಸಮೇತ ನಾಲ್ವರನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ.ವೀರಾಜಪೇಟೆ ಗಡಿಭಾಗವಾದ ಪೆರುಂಬಾಡಿ ಕೆರೆಯ ಸನಿಹದಲ್ಲಿ ಅಕ್ರಮವಾಗಿ 5 ಕೋಣ ಮರಿಗಳನ್ನು (ಕೆಎ-13ಸಿ-5592) ಟಾಟಾ ಏಸ್ ವಾಹನದಲ್ಲಿ ಗೊಣಿಕೊಪ್ಪಲು ಮಾರ್ಗವಾಗಿ ಕೊಂಡೊಯ್ಯುತ್ತಿದ್ದಾಗ ಪೆರುಂಬಾಡಿ ತಪಾಸಣೆ ಕೇಂದ್ರದಲ್ಲಿ ತಪಾಸಣೆಗೆ ನಿಲ್ಲಿಸಿದಾಗ ಸಂದೇಹಾಸ್ಪದವಾಗಿ ವರ್ತನೆ ಮಾಡುತ್ತಾ ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾದ ವಾಹನವನ್ನು ಪೊಲೀಸರು ಹಿಂಬಾಲಿಸಿ ತಡೆಯುವಲ್ಲಿ ಯಶಸ್ವಿಯಾದರು. ಪರಿಶೋಧನೆ ವೇಳೆ 5 ಕೋಣದ ಮರಿಗಳು ಪತ್ತೆಯಾಗಿವೆ.ಕೇರಳ ರಾಜ್ಯದ ಕಸಾಯಿಖಾನೆಗೆ ಸಾಗಾಟ ಮಾಡುತ್ತಿರುವದಾಗಿ ಆರೋಪಿಗಳು ಪೊಲೀಸರೊಂದಿಗೆ ಹೇಳಿದ್ದಾರೆ. ಹಾಸನ ಜಿಲ್ಲೆಯ ನಿವಾಸಿಗಳಾದ ವಸಂತ್ (34), ಪ್ರತಾಪ್ (23), ಸತೀಶ್ (19) ಮತ್ತು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬು ನಿವಾಸಿ ಸುಮಿತ್ರನ್ (30) ಎಂಬವರ ಮೇಲೆ ಕರ್ನಾಟಕ ಗೋ ಸಂರಕ್ಷಣಾ ಕಾಯ್ದೆ ಅನ್ವಯ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡಲು ಬಳಸಿದ್ದ ವಾಹನವನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
- ಕೆ.ಕೆ.ಎಸ್.