ಮಡಿಕೇರಿ, ಸೆ. 29: ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬದ ಕರಗ ಮಹೋತ್ಸವಕ್ಕೆ ನಗರದ ಪಂಪ್ ಕೆರೆಯ ಬಳಿ ಧಾರ್ಮಿಕ ವಿಧಿ ವಿಧಾನಗಳು ನೆರವೇರುವ ಮೂಲಕ ಚಾಲನೆ ದೊರೆಯಿತು. ನಾಲ್ಕು ಶಕ್ತಿ ದೇವತೆಗಳಿಗೆ ಕಲಶ ಸ್ಥಾಪನೆ ಮೂಲಕ ಹೋಮ ಸಹಿತ ಪೂಜಾ ಕೈಂಕರ್ಯ ನೆರವೇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಐತಿಹಾಸಿಕ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಕರಗವನ್ನು ವ್ರತಧಾರಿ ಹರೀಶ್ (ಧರ್ಮ) ದಂಡಿನ ಮಾರಿಯಮ್ಮ ಕರಗವನ್ನು ಉಮೇಶ್, ಕೋಟೆ ಮಾರಿಯಮ್ಮ ಕರಗವನ್ನು ಅನೀಶ್ ಹಾಗೂ ಕಂಚಿ ಕಾಮಾಕ್ಷಿ ಕರಗವನ್ನು ನವೀನ್ ಇವರುಗಳು ಹೊತ್ತಿದ್ದರು. ಹಿರಿಯರಾದ ಟಿ.ಪಿ. ರಮೇಶ್ ವಿಶೇಷ ಪ್ರಾರ್ಥನೆ ಸಲ್ಲಿಸಿದರೆ, ನಾಲ್ಕು ಶಕ್ತಿ ದೇವಾಲಯಗಳ ಪೂಜಾರಿಗಳ ಸಮ್ಮುಖ ಅರ್ಚಕರು ಸಂಪ್ರದಾಯದಂತೆ ಪೂಜೆ ನೆರವೇರಿಸಿದರು. ಜಿಲ್ಲೆಯ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ಮೇಲ್ಮನೆ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಸೇರಿದಂತೆ ಇತರ ಗಣ್ಯರು ಪಾಲ್ಗೊಂಡಿದ್ದರು. ದಸರಾ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಮಹಾಪೋಷಕರಾದ ಎಸ್‍ಪಿ ಸುಮನ್ ಡಿ.ಪಿ., ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ಮತ್ತಿತರರು ಪುಷ್ಪಮಾಲೆಯೊಂದಿಗೆ ಈಡುಗಾಯಿ ಒಡೆದು ಕರಗವನ್ನು ಸ್ವಾಗತಿಸಿದರು.
ಬಳಿಕ ಕರಗವು ಇಲ್ಲಿನ ಬನ್ನಿಮಂಟಪದಲ್ಲಿ ವಿಶೇಷ ಪೂಜೆ ಬಳಿಕ ಶ್ರೀ ಕೋದಂಡರಾಮ ದೇವಾಲಯ, ಶ್ರೀ ಬಸವೇಶ್ವರ, ಶ್ರೀ ಚೌಡೇಶ್ವರಿ, ಶ್ರೀ ಕನ್ನಿಕಾ ಪರಮೇಶ್ವರಿ ಹಾಗೂ ರಾಜಬೀದಿಯ ನಿವಾಸಿಗಳಿಂದ ಪೂಜೆಗೊಂಡು ಪೇಟೆ ಶ್ರೀರಾಮ ಮಂದಿರದಲ್ಲಿ ಸಂಗಮಗೊಂಡಿತು. ಅಲ್ಲಿ ವಿಶೇಷ ಪೂಜೆಯ ಬಳಿಕ ಆಯಾ ನಾಲ್ಕು ಶಕ್ತಿ ದೇವಾಲಯಗಳ ಸನ್ನಿಧಿಗೆ ತೆರಳಿದವು. ಕೋದಂಡರಾಮ ದೇವಾಲಯದಲ್ಲಿ ಕರಗ ದೇವತೆಗಳಿಗೆ ವಿಶೇಷ ಪೂಜೆಯೊಂದಿಗೆ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ದಸರಾ ಸಮಿತಿಯ ಪದಾಧಿಕಾರಿಗಳಾದ ಬಿ.ಕೆ. ಜಗದೀಶ್, ಉಮೇಶ್, ಸುಬ್ರಮಣಿ, ನೆರವಂಡ ಜೀವನ್, ಮಹೇಶ್ ಜೈನಿ, ಸತೀಶ್ ಪೈ, ಎಸ್.ಸಿ. ಸುಬ್ರಮಣಿ, ದಶಮಂಟಪ
(ಮೊದಲ ಪುಟದಿಂದ) ಸಮಿತಿ ಅಧ್ಯಕ್ಷ ರಂಜಿತ್, ದಸರಾ ಸಮಿತಿ ಗೌರವ ಕಾರ್ಯದರ್ಶಿ ಎಂ.ಎಲ್. ರಮೇಶ್ ಸೇರಿದಂತೆ ಉಪ ಸಮಿತಿಯ ಪದಾಧಿಕಾರಿಗಳಾದ ವಿವಿಧ ದೇವಾಲಯಗಳ ಪದಾಧಿಕಾರಿಗಳು ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದು, ಮಡಿವಾಳ ಸಮಾಜದ ಪರವಾಗಿ ವಸ್ತ್ರ ಹಾಸಿ ದೇವತೆಗಳ ಪಾದ ತೊಳೆದು ಕರಗ ಉತ್ಸವಕ್ಕೆ ಮುಂದಡಿ ಇಡಲಾಯಿತು. ಕರಗ ಮೆರವಣಿಗೆ ಬೀದಿಯಲ್ಲಿ ಅಲ್ಲಲ್ಲಿ ಮಹಿಳೆಯರು, ಮಕ್ಕಳು ರಂಗೋಲಿ ಹಾಕುವ ಮುಖಾಂತರ ಶಕ್ತಿ ದೇವತೆಗಳನ್ನು ಸ್ವಾಗತಿಸಿ ಬರಮಾಡಿಕೊಂಡರು. ಈ ಬಾರಿ ಮಹದೇವಪೇಟೆ ರಾಜಬೀದಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸಾರ್ವಜನಿ ಕರು, ಸದ್ಭಕ್ತರು ನೆರೆದು ಕರಗ ಮೆರವಣಿಗೆ ವೀಕ್ಷಿಸಿದ್ದು, ವಿಶೇಷವಾಗಿತ್ತು.