ಸೋಮವಾರಪೇಟೆ, ಸೆ. 29: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಅ. 7 ರಂದು 44ನೇ ವರ್ಷದ ಆಯುಧ ಪೂಜೋತ್ಸವ ಕಾರ್ಯಕ್ರಮವನ್ನು, ಅದ್ಧೂರಿಯಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಆರ್. ಭರತ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ತಾ. 7 ರಂದು ಸೋಮವಾರಪೇಟೆಯ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸುವ ವೇದಿಕೆಯಲ್ಲಿ ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಅಂದು ಬೆಳಿಗ್ಗೆ 7.30ಕ್ಕೆ ನಗರದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುವದು. 8.30ಕ್ಕೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ನಡೆಯಲಿದ್ದು, 9 ಗಂಟೆಗೆ ಆಯುಧ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಲಾಗುವದು ಎಂದು ತಿಳಿಸಿದರು.
9.30ಕ್ಕೆ ಶಾಲಾ ಮಕ್ಕಳಿಂದ ಡ್ಯಾನ್ಸ್-ಡ್ಯಾನ್ಸ್ ಕಾರ್ಯಕ್ರಮ ಆಯೋಜಿಸಿದ್ದು, ಮಾಜಿ ಸಚಿವ ಬಿ.ಎ. ಜೀವಿಜಯ ಅವರು ಉದ್ಘಾಟಿಸಲಿದ್ದಾರೆ. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಕೆ.ಪಿ. ಚಂದ್ರಕಲಾ, ಮಾಜಿ ಎಂಎಲ್ಸಿ ಎಸ್.ಜಿ. ಮೇದಪ್ಪ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಜಿ.ಪಂ. ಸದಸ್ಯ ಬಿ.ಜೆ. ದೀಪಕ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕರಿಗೆ ಅನ್ನದಾನ ಏರ್ಪಡಿಸಲಾಗಿದೆ ಎಂದು ಭರತ್ ಹೇಳಿದರು.
ಸಂಜೆ 6.30ಕ್ಕೆ ಆಯುಧ ಪೂಜಾ ಸಮಾರಂಭ ನಡೆಯಲಿದ್ದು, ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಮುಖರಾದ ಕೆ.ಟಿ. ಸತೀಶ್, ನಾಪಂಡ ಮುತ್ತಪ್ಪ, ನಾಪಂಡ ಮುದ್ದಪ್ಪ, ಹರಪಳ್ಳಿ ರವೀಂದ್ರ, ಪವನ್ ದೇವಯ್ಯ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಎನ್.ಆನಂದ್, ಮಾಜಿ ಸೈನಿಕ ಎಸ್.ಬಿ. ರಮೇಶ್, ಸಾರ್ವಜನಿಕ ಸೇವೆ ವಿಭಾಗದಿಂದ ಹಾಲೇಬೇಲೂರು ನಿರ್ವಾಣಿ ಶೆಟ್ಟಿ ಅವರುಗಳನ್ನು ಸನ್ಮಾನಿಸಲಾಗುವದು ಎಂದರು.
ಅಯುಧ ಪೂಜೋತ್ಸವ ಅಂಗವಾಗಿ ವಾಹನ, ವರ್ಕ್ಶಾಪ್, ಅಂಗಡಿ, ಸರ್ಕಾರಿ ಕಚೇರಿಗಳ ಅಲಂಕೃತ ಸ್ಪರ್ಧೆ ಆಯೋಜಿಸಲಾಗಿದೆ. ಇದರೊಂದಿಗೆ ಮಂಗಳೂರಿನ ನೃತ್ಯ ಶಿವಂ ಕಲಾ ತಂಡದಿಂದ ನೃತ್ಯ ಪ್ರದರ್ಶನ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಡ್ಯಾನ್ಸ್-ಡ್ಯಾನ್ಸ್, ಅಲಂಕೃತ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವದು ಎಂದರು.
ಕಳೆದ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಆಯುಧ ಪೂಜೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಸೋಮವಾರಪೇಟೆ ಭಾಗದ ಜನೋತ್ಸವವಾಗಿ ಗುರುತಿಸಿಕೊಂಡಿರುವ ಮೋಟಾರ್ ಯೂನಿಯನ್ನ ಆಯುಧ ಪೂಜೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದ್ದು, ಅಗತ್ಯ ಸಿದ್ದತೆಗಳು ನಡೆದಿವೆ ಎಂದು ಭರತ್ ತಿಳಿಸಿದರು. ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ರಂಗಸ್ವಾಮಿ, ಉಪಾಧ್ಯಕ್ಷ ಬಾಲಕೃಷ್ಣ, ಪದಾಧಿಕಾರಿಗಳಾದ ಖಾದರ್, ವಿಜಿತ್ ಅವರುಗಳು ಉಪಸ್ಥಿತರಿದ್ದರು.