ಸೋಮವಾರಪೇಟೆ, ಸೆ. 27: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮಂಜುಳಾ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ಜನಪ್ರತಿನಿಧಿಗಳು, ಅವರನ್ನು ಮುಂದಿನ 15 ದಿನಗಳ ಒಳಗೆ ವರ್ಗಾವಣೆ ಮಾಡಬೇಕು. ತಪ್ಪಿದಲ್ಲಿ ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.

ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ, ಪಿಡಿಓ ಮಂಜುಳಾ ಅವರು ಜನಪ್ರತಿನಿಧಿಗಳಿಗೂ ಅಗೌರವ ತೋರುತ್ತಿದ್ದು, ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ಇಂತಹ ನಡವಳಿಕೆಯಿಂದ ಸಾರ್ವಜನಿಕರು ಬೇಸತ್ತಿದ್ದು, ತಕ್ಷಣ ಇವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಕಳೆದ ಮೂರು ವರ್ಷಗಳಿಂದ ಸಾಮಾನ್ಯ ಗ್ರಾಮಸಭೆಯನ್ನು ಕರೆದಿಲ್ಲ. ಆಡಳಿತ ಮಂಡಳಿಗೆ ಜಮಾ ಖರ್ಚಿನ ವಿವರ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, 15 ದಿನಗಳ ಒಳಗೆ ಪಿ.ಡಿ.ಒ. ವರ್ಗಾವಣೆಯಾಗಬೇಕು. ತಪ್ಪಿದಲ್ಲಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರ ಸಹಕಾರದಿಂದ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವದು. ಅಲ್ಲಿಯೂ ನ್ಯಾಯ ಸಿಗದಿದ್ದರೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿದ್ದ ಗ್ರಾ.ಪಂ. ಉಪಾಧ್ಯಕ್ಷ ದಿವಾಕರ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಪಂಚಾಯಿತಿಯಲ್ಲಿ ಜನಪರ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಬಡಜನರ ಶೋಷಣೆ ನಡೆಯುತ್ತಿದೆ. ಪಿ.ಡಿ.ಓ. ಮೇಲಿನ ಗುರುತರ ಆರೋಪಗಳ ಬಗ್ಗೆ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿಗೆ ದೂರು ನೀಡಲಾಗಿದೆ. ಆದರೂ ಪಿ.ಡಿ.ಓ. ವಿರುದ್ಧ ಕ್ರಮವಾಗಿಲ್ಲ. ದೂರಿನ ಬಗ್ಗೆ ತನಿಖೆಯಾಗುತ್ತಿಲ್ಲ ಎಂದು ದೂರಿದರು. ಪಿ.ಡಿ.ಓ. ಅವರನ್ನು ವರ್ಗಾವಣೆಗೊಳಿಸುವಂತೆ ಆಗ್ರಹಿಸಿ ಜನಪ್ರತಿನಿಧಿಗಳ ತಂಡ ಸಿ.ಇ.ಓ. ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಎರಡು ದಿನಗಳ ಒಳಗೆ ಕ್ರಮಕೈಗೊಳ್ಳುವ ಭರವಸೆಯನ್ನು ಅಧಿಕಾರಿ ನೀಡಿದ್ದರು. ಆದರೆ ವಾರ ಕಳೆದರೂ ಕ್ರಮವಾಗಿಲ್ಲ ಎಂದು ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಹೇಳಿದರು.

ಗೋಷ್ಠಿಯಲ್ಲಿ ಮಸಗೋಡು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಹೇಮಂತ್, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಗ್ರಾ.ಪಂ. ಮಾಜಿ ಅಧ್ಯಕ್ಷ ಮೋಹನ್‍ದಾಸ್ ಉಪಸ್ಥಿತರಿದ್ದರು.