ವರದಿ-ಚಂದ್ರಮೋಹನ್
ಕುಶಾಲನಗರ, ಸೆ. 28: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕೊಡಗು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಆಶ್ರಯದಲ್ಲಿ ಮಡಿಕೇರಿಯ ಶಾಲೆಯೊಂದರ ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿಶಿಷ್ಟ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು.
ದುಬಾರೆ ಪ್ರವಾಸಿ ಕೇಂದ್ರಕ್ಕೆ ಪ್ರವಾಸ ಕಾರ್ಯಕ್ರಮ ಆಯೋಜಿಸಿದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಅರಣ್ಯ ಇಲಾಖೆ ಮತ್ತು ದುಬಾರೆ ರ್ಯಾಫ್ಟಿಂಗ್ ಅಸೋಸಿ ಯೇಷನ್ ಸಹಕಾರದೊಂದಿಗೆ ಮಡಿಕೇರಿಯ ಕೊಡಗು ವಿದ್ಯಾಲಯದ ಅಪರ್ಚುನಿಟಿ ಸ್ಕೂಲ್‍ನ 50 ಕ್ಕೂ ಅಧಿಕ ವಿಶೇಷಚೇತನ ಮಕ್ಕಳಿಗೆ ಹೊಸ ಅನುಭವವೊಂದನ್ನು ನೀಡುವ ಪ್ರಯತ್ನ ಮಾಡಿದ್ದು ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.
ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ರಾಘವೇಂದ್ರ ಅವರ ನೇತೃತ್ವದಲ್ಲಿ ಇಲಾಖೆಯ ಸಮಾಲೋಚಕ ಚೇತನ್ ಕಾರ್ಯಕ್ರಮ ಆಯೋಜಿಸಿದ್ದು ಶಾಲೆಯ ಪ್ರಾಂಶುಪಾಲೆÀ ಗೀತಾ ಶ್ರೀಧರ್ ಮತ್ತು ಶಿಕ್ಷಕರ ತಂಡದೊಂದಿಗೆ ಮಕ್ಕಳನ್ನು ದುಬಾರೆಗೆ ಕರೆ ತಂದು ಕಾವೇರಿ ನದಿಯಲ್ಲಿ ಬೋಟಿಂಗ್ ಕರೆದೊಯ್ದು ಮಕ್ಕಳ ಮನಸ್ಸಿಗೆ ಹಿತ ಉಂಟುಮಾಡುವ ಯತ್ನದೊಂದಿಗೆ ದುಬಾರೆ ಸಾಕಾನೆ ಶಿಬಿರದಲ್ಲಿ ಸ್ವಲ್ಪಕಾಲ ಅಡ್ಡಾಡುವ ಅವಕಾಶವನ್ನು ಕಲ್ಪಿಸಲಾಗಿತ್ತು. ಈ ಸಂದರ್ಭ ಕೆಲವು ಮಕ್ಕಳು ಅರಣ್ಯದ ನಡುವೆ ಸಾಕಾನೆಗಳ ಘೀಳು, ಹಕ್ಕಿಗಳ ಕಲರವ ಕೇಳಿಸುವದರೊಂದಿಗೆ ನದಿ ಯಲ್ಲಿ ಆನೆಯನ್ನು ಸ್ನಾನ ಮಾಡಿಸುವ ದೃಶ್ಯವನ್ನು ಕೂಡ ಹಲವರು ಕಣ್ತುಂಬಿಸಿ ಸಂಭ್ರಮಿಸಿ ಕೊಳ್ಳುವ ಅವಕಾಶ ಕೂಡ ಲಭಿಸಿತ್ತು.
ತಂಡದಲ್ಲಿ ಬುದ್ಧಿಮಾಂದ್ಯತೆ, ಶ್ರವಣ ದೋಷವುಳ್ಳ ಮಕ್ಕಳು ತಮ್ಮದೇ ಆದ ಖುಷಿಯನ್ನು ಪರಸ್ಪರ ವ್ಯಕ್ತಪಡಿಸಿಕೊಂಡರು. ಪ್ರವಾಸದಲ್ಲಿ 6 ವರ್ಷ ವಯೋಮಾನದಿಂದ ಅಂದಾಜು 24 ವರ್ಷ ಪ್ರಾಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ದುಬಾರೆ ಸಾಕಾನೆ ಶಿಬಿರದ ಉಸ್ತುವಾರಿ ಅಧಿಕಾರಿ ಕನ್ನಂಡ ರಂಜನ್ ಮತ್ತು ಸಿಬ್ಬಂದಿಗಳು ಕೂಡ ಮಕ್ಕಳ ಪ್ರವಾಸ ತಂಡದೊಂದಿಗೆ ಕೈಜೋಡಿಸಿ ಬೆಳಗಿನಿಂದ ಮಧ್ಯಾಹ್ನದ ತನಕ ಸಹಕಾರ ನೀಡುವದರೊಂದಿಗೆ ಸ್ಥಳೀಯ ರ್ಯಾಫ್ಟಿಂಗ್ ಅಸೋಸಿ ಯೇಷನ್‍ನ ಅಧ್ಯಕ್ಷರಾದ ಸಿ.ಎಲ್.ವಿಶ್ವ ಮತ್ತು ಪದಾಧಿಕಾರಿಗಳು ಮಕ್ಕಳಿಗೆ ಊಟೋಪಚಾರ ನೀಡಿ ಸಹಕರಿಸಿದರು.
ಈ ಸಂದರ್ಭ ಪ್ರವಾಸಿ ಕೇಂದ್ರಕ್ಕೆ ಆಗಮಿಸಿದ ಪ್ರವಾಸಿಗರು ಕೂಡ ಮಕ್ಕಳಿಗೆ ಐಸ್‍ಕ್ರೀಂ, ಚಾಕಲೇಟ್ ನೀಡುವ ಮೂಲಕ ಉಪಚರಿಸಿದರು. ಇದೇ ಪ್ರಥಮ ಬಾರಿಗೆ ಮಕ್ಕಳಿಗೆ ನದಿಯಲ್ಲಿ ಬೋಟಿಂಗ್ ಮತ್ತು ಆನೆ ಶಿಬಿರಕ್ಕೆ ಕರೆತರುವ ಅವಕಾಶವನ್ನು ಕಲ್ಪಿಸಿದ್ದು ಕೊಡಗು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗಳ ಕಾರ್ಯವನ್ನು ಪ್ರಾಂಶುಪಾಲೆÀ ಗೀತಾ ಶ್ರೀಧರ್ ಮೆಚ್ಚುಗೆ ವ್ಯಕ್ತ ಪಡಿಸುವದರೊಂದಿಗೆ ದುಬಾರೆಯಲ್ಲಿ ಪ್ರವಾಸಕ್ಕೆ ಸಹಕರಿಸಿದ ಬಗ್ಗೆಯೂ ಶ್ಲಾಘನೆ ವ್ಯಕ್ತಪಡಿಸಿದರು.
ಪ್ರಥಮ ಬಾರಿಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಂದು ಈ ರೀತಿಯ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು ಈ ಮಕ್ಕಳಿಗೆ ವಿಶಿಷ್ಟ ಅನುಭವವೊಂದನ್ನು ಪಡೆಯಲು ಅವಕಾಶ ಕಲ್ಪಿಸಿದಂತಾಗಿತ್ತು.