ಗೋಣಿಕೊಪ್ಪ ವರದಿ, ಸೆ. 28: ಮತ್ತೊಂದು ಕಿರುಚಿತ್ರ ಬಿಡುಗಡೆಗೆ ಯುವ ನಿರ್ದೇಶಕ ತಂಡ ಮುಂದಾಗಿದೆ. ದೀನಾ-ಗಾನಾ ಜೋಡಿ ನಿರ್ದೇಶನದ ‘ನೆಪ್ಪ್‍ರ ನಳ’ ಕಿರುಚಿತ್ರ ತಾ. 29 ರಂದು (ಇಂದು) ಬಿಡುಗಡೆಯಾಗಲಿದೆ.

ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಕೂಗನ್ನು ಕಿರು ಚಿತ್ರದ ಮೂಲಕ ಜಾಗೃತಿ ಮೂಡಿಸಿ ಯಶಸ್ಸು ಪಡೆದ ಬೆನ್ನಲ್ಲೆ, ದೀನಾ-ಗಾನಾ ಜೋಡಿ ಕೊಡವರಿಗೆ ಬದುಕಿಗೆ ಬೇಕಾದ ಪಾಠವನ್ನು ಅಂದಾಜು ನೆರಳು ಎಂಬ ಕನ್ನಡದ ಅರ್ಥದ ಮತ್ತೊಂದು ಕೊಡವ ಕಿರುಚಿತ್ರವನ್ನು ನಿರ್ಮಿಸಿದೆ.

ಡಿ.ಜಿ. ಕ್ರಿಯೇಷನ್ಸ್ ಹೆಸರಿನಲ್ಲಿ ಯುವ ಸಾಹಿತಿ ಕಳ್ಳಿಚಂಡ ದೀನಾ ಉತ್ತಪ್ಪ ಮತ್ತು ತಡಿಯಂಗಡ ಗಾನಾ ಸೋಮಣ್ಣ ಒಂದಾಗಿ ನಿರ್ದೇಶಿಸಿದ್ದು, 5 ಜನರು ಚಿತ್ರದ ಪಾತ್ರದಲ್ಲಿದ್ದಾರೆ. ಒಟ್ಟು 16 ನಿಮಿಷದ ಚಿತ್ರವಾಗಿದ್ದು, ನೆರವಂಡ ಉಮೇಶ್ ತಂದೆಯ ಪಾತ್ರದಲ್ಲಿದ್ದಾರೆ. ಮಗನಾಗಿ ಉಡುವೇರ ರಾಜಾ ಉತ್ತಪ್ಪ, ಮಗನ ಪತ್ನಿಯಾಗಿ ಮುಂಡಚಾಡಿರ ರಿನಿ ಭರತ್, ಮರಿಮಕ್ಕಳ ಪಾತ್ರದಲ್ಲಿ ನಂದಿನೆರವಂಡ ಶರತ್ ಮೇದಪ್ಪ, ಕೋಡಿಯಂಡ ಕೌಶಿಕ್ ಚೆಂಗಪ್ಪ ನಟಿಸಿದ್ದಾರೆ. ದೀನಾ-ಗಾನಾ ಜೋಡಿ ಒಂದಾಗಿ ಕಥೆ, ಸ್ಕ್ರೀನ್ ಪ್ಲೇ, ನಿರ್ದೇಶನ ಮಾಡಿದ್ದಾರೆ.

ಉದ್ಘಾಟನೆ: ನೆಪ್ಪ್‍ರ ನಳ ಕೊಡವ ಶಾರ್ಟ್ ಮೂವಿ ಉದ್ಘಾಟನೆ ತಾ. 29 ರಂದು (ಇಂದು) ಗೋಣಿಕೊಪ್ಪ ಪಾಪೆರ ಇನ್ ಸಭಾಂಗಣದಲ್ಲಿ ಮಧ್ಯಾಹ್ನ 3 ಕ್ಕೆ ನಡೆಯಲಿದೆ. ವೈದ್ಯೆ ಡಾ. ಅಪ್ಪನೆರವಂಡ ಸೋನಿಯಾ ಮಂದಪ್ಪ ಚಿತ್ರ ಬಿಡುಗಡೆಗೊಳಿಸಲಿದ್ದಾರೆ. ಈ ಸಂದರ್ಭ ಅತಿಥಿಯಾಗಿ ಸಮಾಜ ಸೇವಕ ಕುಕ್ಕೇರ ಜಯ ಚಿಣ್ಣಪ್ಪ, ಕದ್ದಣಿಯಂಡ ಹರೀಶ್ ಬೋಪಣ್ಣ, ಅರೆಯಡ ಪವಿನ್ ಪೊನ್ನಣ್ಣ, ಅಪ್ಪಚಟ್ಟಂಗಡ ಮೋಟಯ್ಯ ಅವರೊಂದಿಗೆ ಚಿತ್ರ ತಂಡ ಕೂಡ ಪಾಲ್ಗೊಳ್ಳಲಿದೆ.

-ಸುದ್ದಿಪುತ್ರ