ಕೂಡಿಗೆ: ಸರ್ಕಾರಿ ಪದವಿಪೂರ್ವ ಕಾಲೇಜು ಶಿರಂಗಾಲದಲ್ಲಿ ಎನ್‍ಎಸ್‍ಎಸ್ ದಿನಾಚರಣೆ ಹಾಗೂ ಪೋಷಕರ ಸಭೆಯನ್ನು ಮಾಜಿ ಸೈನಿಕ ಮನೋಹರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಎನ್‍ಎಸ್‍ಎಸ್ ಕೂಡ ದೇಶದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಶಿರಂಗಾಲ ಕಾಲೇಜಿನ ಎನ್‍ಎಸ್‍ಎಸ್ ಘಟಕ ತುಂಬಾ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಮುಖ್ಯ ಶಿಕ್ಷಕ ಸೋಮಯ್ಯ, ನಾಯಕತ್ವ ಗುಣ, ಸಮಯಪ್ರಜ್ಞೆ, ಸಮಾನತೆ, ಸಮಾಜದ ಒಳಿತು-ಕೆಡುಕುಗಳನ್ನು ಅರಿಯಲು ಇಂತಹ ಸೇವಾ ಸಂಸ್ಥೆಯಿಂದ ಮಾತ್ರ ಸಾಧ್ಯ ಎಂದರು. ಈ ಸಂದರ್ಭ ಪ್ರಥಮ ಮತ್ತು ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಮಾಡಲಾಯಿತು. ಪೋಷಕರು ತಮ್ಮ ಮಕ್ಕಳ ಪ್ರಗತಿಯ ಬಗ್ಗೆ ಚರ್ಚಿಸಿದರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹೆಚ್ಚು ಗಮನ ನೀಡುತ್ತಿದ್ದು, ಪೋಷಕರು ಮತ್ತು ಶಿಕ್ಷಕರು ಒಟ್ಟಿಗೆ ಸೇರಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸುವಂತೆ ಮಾಡಬೇಕಾದಂತಹ ಅನಿವಾರ್ಯತೆ ಇದೆ ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಜರಿದ್ದರು. ಕಾಲೇಜಿನ ನಾಯಕ ಪುನೀತ್‍ಕುಮಾರ್ ಸ್ವಾಗತಿಸಿದರೆ, ಹೇಮಂತ್ ವಂದಿಸಿದರು, ಆನಂದ್ ನಿರೂಪಿಸಿದರು.ವೀರಾಜಪೇಟೆ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ವೀರಾಜಪೇಟೆಯಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಬಿಳಿಗುಂದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರ ಥ್ರೋಬಾಲ್ ತಂಡ ವಿಜೇತರಾಗಿ ಮುಂದಿನ ತಿಂಗಳು ಮಂಡ್ಯದಲ್ಲಿ ನಡೆಯಲಿರುವ ವಿಭಾಗೀಯ ಮಟ್ಟದ ಸ್ಪರ್ಧೆಯಲ್ಲಿ ಪಾÀಲ್ಗೊಳ್ಳುವ ಅರ್ಹತೆಯನ್ನು ಪಡೆದುಕೊಂಡಿದೆ.
ಸ್ಥಳೀಯ ಸಂತ ಅನ್ನಮ್ಮ ಕಾಲೇಜಿನ ಮೈದಾನದಲ್ಲಿ ನಡೆದ ರೋಚಕ ಅಂತಿಮ ಪಂದ್ಯದಲ್ಲಿ ಬಿಳುಗುಂದ ತಂಡದ ವಿದ್ಯಾರ್ಥಿನಿಯರು ನಂಜರಾಯಪಟ್ಟಣ ಪ್ರೌಢಶಾಲಾ ತಂಡವನ್ನು ಮಣಿಸಿತು. ಬಿಳುಗುಂದ ಪ್ರೌಢಶಾಲೆಯ ತಂಡವು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗುತ್ತಿರುವದು ಇದೇ ಪ್ರಥಮ ಬಾರಿಯಾಗಿದೆ.
ತಂಡದ ತರಬೇತುದಾರರಾಗಿ ದೈಹಿಕ ಶಿಕ್ಷಕಿ ಎಸ್.ಜಿ. ಲಿನ್ನಿ, ಮಾರ್ಗದರ್ಶಕಿಯಾಗಿ ಮುಖ್ಯ ಶಿಕ್ಷಕಿ ಕೆ.ಆರ್. ಬಿಂದು, ತಂಡದ ವ್ಯವಸ್ಥಾಪಕಿಯಾಗಿ ಪಿ.ಕೆ. ಪವಿತ್ರ ಕಾರ್ಯನಿರ್ವಹಿಸಿದರು.ಸುಂಟಿಕೊಪ್ಪ: ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಸಂತ ಮೇರಿ ಪದವಿಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ವಾಲಿಬಾಲ್ ಕ್ರೀಡೆಯನ್ನು ನಡೆಸಲಾಯಿತು.
ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿತಗೊಂಡ ವಾಲಿಬಾಲ್ ಕ್ರೀಡೆಗೆ ಜಿಲ್ಲೆಯ ಮೂರು ತಾಲೂಕುಗಳ 6 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ವೈ.ಎಂ. ಕರುಂಬಯ್ಯ ಚಾಲನೆ ನೀಡಿದರು.
ಈ ಸಂದರ್ಭ ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಾಲಿಂಗಯ್ಯ, ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ಎಸ್.ಜೆ. ಶ್ರೀನಿವಾಸ್, ಕಾಲೇಜಿನ ಪ್ರಾಂಶುಪಾಲ ಪಿ.ಎಸ್. ಜಾನ್, ಜಿಲ್ಲಾ ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಪಿಲಿಫ್ ವಾಸ್, ಸುಂಟಿಕೊಪ್ಪ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ, ಸಂತ ಮೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸೆಲ್ವರಾಜ್, ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ ಹಾಗೂ ಉಪನ್ಯಾಸಕರು ಮತ್ತಿತರರು ಇದ್ದರು. ಕುಶಾಲನಗರ: ಕುಶಾಲನಗರದ ಜ್ಞಾನಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಾಧನೆ ತೋರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವೀರಾಜಪೇಟೆಯ ಸೇಂಟ್ ಆನ್ಸ್ ಪ್ರೌಢಶಾಲೆಯಲ್ಲಿ ನಡೆದ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಾದ ವಿ.ಹೆಚ್. ಧನುಷ್ 100, 400 ಮೀಟರ್ ಓಟದಲ್ಲಿ ಪ್ರಥಮ ಹಾಗೂ 200 ಮೀಟರ್ ಓಟದಲ್ಲಿ ದ್ವಿತೀಯ, ಕೆ.ಎಂ. ವಿಷ್ಣು 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.