ಕುಶಾಲನಗರ, ಸೆ. 28: ಕುಶಾಲನಗರ ಪಟ್ಟಣದಲ್ಲಿ ಕಳೆದ 5 ವರ್ಷಗಳ ಹಿಂದೆ ರೂ 40 ಕೋಟಿ ವೆಚ್ಚದಲ್ಲಿ ಆರಂಭಿಸಲಾದ ಒಳಚರಂಡಿ ಕಾಮಗಾರಿ ಇದುವರೆಗೆ ಪೂರ್ಣಗೊಳ್ಳದೆ ಇಡೀ ಪಟ್ಟಣದ ಬಡಾವಣೆಗಳು ಅಶುಚಿತ್ವದ ಕೇಂದ್ರವಾಗುತ್ತಿದ್ದು ಜೀವನದಿ ಕಾವೇರಿ ಸಂಪೂರ್ಣ ಕಲುಷಿತ ಗೊಳ್ಳುತ್ತಿರುವದು ಕಾಣಬಹುದು. ಪಟ್ಟಣದ ಸ್ವಚ್ಛತೆ ಮತ್ತು ಕಾವೇರಿ ನದಿಯ ನೇರ ಕಲುಷಿಕೆ ತಪ್ಪಿಸುವ ಉದ್ದೇಶದಿಂದ ಸರಕಾರದಿಂದ ಅನುಮೋದನೆಗೊಂಡ ಯೋಜನೆ ಯೊಂದು ಇದೀಗ ಹೇಳುವವರು, ಕೇಳುವವರು ಇಲ್ಲದೆ ಮಣ್ಣು ಪಾಲಾಗಿದೆ ಎಂದರೆ ತಪ್ಪಾಗಲಾರದು.ಜಲಮಂಡಳಿ ವತಿಯಿಂದ 2011 ರಲ್ಲಿ ರೂ.53.44 ಕೋಟಿ ಅಂದಾಜು ವೆಚ್ಚದ ಒಳಚರಂಡಿ ನಿರ್ಮಾಣ ಕಾಮಗಾರಿ ಬಗ್ಗೆ ಸರ್ಕಾರಕ್ಕೆ ಪ್ರ್ರಸ್ತಾವನೆ ಸಲ್ಲಿಸಲಾಗಿತ್ತು. 2012ರಲ್ಲಿ ಸರ್ಕಾರ ರೂ.40.1 ಕೋಟಿ ಅನುದಾನಕ್ಕೆ ಅನುಮೋದನೆ

(ಮೊದಲ ಪುಟದಿಂದ) ನೀಡಿ ಉಳಿದ ಅನುದಾನ ರೂ.13 ಕೋಟಿ ಹಣವನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ಬಿಡುಗಡೆ ಮಾಡಬೇಕು ಎಂದು ಆದೇಶದೊಂದಿಗೆ ಯೋಜನೆ ಕಾಮಗಾರಿ ಪ್ರಾರಂಭಗೊಂಡಿತ್ತು. ಇದೀಗ ನಿಗದಿತ ಕಾಮಗಾರಿಯ ಅವದಿ ಮುಗಿದು 3 ವರ್ಷ ಕಳೆದರೂ ಒಳಚರಂಡಿ ಯೋಜನೆ ಮಾತ್ರ ಕುಶಾಲನಗರಕ್ಕೆ ಕಂಟಕವಾಗಿ ಕಂಡು ಬರುತ್ತಿರುವದು ಇತ್ತೀಚಿನ ಬೆಳವಣಿಗೆಯಾಗಿದೆ. ಪಟ್ಟಣದ ಬಡಾವಣೆಯ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆದು ಕಳಪೆ ಕಾಮಗಾರಿಯೊಂದಿಗೆ ನಿರ್ಮಾಣ ಗೊಂಡ ಕುಶಾಲನಗರ ಒಳಚರಂಡಿ ಯೋಜನೆ ಕುಂಟುತ್ತಾ ಸಾಗಿ ಕೆಲವು ತಾಂತ್ರಿಕ ನೆಪದೊಂದಿಗೆ ಕಾಮಗಾರಿ ಸ್ಥಗಿತಗೊಂಡಿದೆ. ಆದರೆ ಅರ್ಧಕ್ಕೆ ನಿಂತಿರುವ ಒಳಚರಂಡಿ ಪೈಪ್‍ಗಳಲ್ಲಿ ಮಾತ್ರ ಬಡಾವಣೆಗಳ ಕೆಲವು ಮನೆಗಳ, ವಾಣಿಜ್ಯ ಕೇಂದ್ರಗಳ ಕಲುಷಿತ ತ್ಯಾಜ್ಯಗಳು ಹರಿಯುತ್ತಿದ್ದು ಎಲ್ಲೆಂದರಲ್ಲಿ ನೀರು ಹೊರ ಚೆಲ್ಲುತ್ತಿರುವ ದೃಶ್ಯ ಕಂಡುಬಂದಿದೆ.

ಸಂಪೂರ್ಣ ಕಲುಷಿತ ನೀರು ಕಾವೇರಿ ನದಿ ಪಾಲಾಗುವ ದರೊಂದಿಗೆ ನದಿ ನೀರು ವಾಸನಾಮಯವಾಗಿ ಹರಿಯುತ್ತಿರುವದು ಕೆಲವೆಡೆ ಕಾಣಬಹುದು. ಕರ್ನಾಟಕ ಜಲಮಂಡಳಿ ವತಿಯಿಂದ ಒಳ ಚರಂಡಿ ಕಾಮಗಾರಿ ಆರಂಭ ಗೊಂಡಿದ್ದು ನೆರೆ ರಾಜ್ಯದ ಗುತ್ತಿಗೆದಾರನೊಬ್ಬ ಸ್ಥಳೀಯ ಪಂಚಾಯಿತಿಯ ಸಲಹೆ ಪಡೆಯದೆ; ತನ್ನಿಷ್ಟಕ್ಕೆ ಕಾಮಗಾರಿ ಮಾಡಿರುವದು ಕಂಡುಬಂದಿದ್ದು ನದಿ ತಟದಲ್ಲಿಯೇ ಒಳಚರಂಡಿ ಯೋಜನೆಯ ಪೈಪ್‍ಗಳು, ಮ್ಯಾನ್‍ಹೋಲ್‍ಗಳನ್ನು ಅಳವಡಿಸಿರುವದು ಇದೀಗ ಸಮಸ್ಯೆಯ ಆಗರವಾಗಿ ಪರಿವರ್ತನೆಗೊಂಡಿದೆ.

ಕುಶಾಲನಗರ ಪಟ್ಟಣ ಪಂಚಾಯಿತಿ ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೈಗೊಳ್ಳಲಾದ ಒಳಚರಂಡಿ ಕಾಮಗಾರಿ ಇದೀಗ ಅಪೂರ್ಣಗೊಂಡು ಅರ್ಧಕ್ಕೆ ನಿಂತಿದೆ. ಕಾಮಗಾರಿಗೆ ತಂದಿರಿಸಲಾದ ಮ್ಯಾನ್‍ಹೋಲ್, ಪೈಪ್‍ಲೈನ್ ಸಾಮಗ್ರಿಗಳು ಕಾಡು ಪಾಲಾಗುತ್ತಿರುವದು ಕಾಣಬಹುದು.

ಈಗಾಗಲೇ 70 ಕಿ.ಮೀ. ಉದ್ದದ ಪೈಪ್ ಲೈನ್ ಅಳವಡಿಸಲಾಗಿದೆ. 2500 ಮ್ಯಾನ್ ಹೋಲ್ ಅಳವಡಿಸಲಾಗಿದೆ. ಸೆಫ್ಟಿಕ್ ಟ್ಯಾಂಕ್ ಹಾಗೂ ವೆಟ್ವೆಲ್ ನಿರ್ಮಾಣವಾಗಿದೆ. 78 ಕಿಲೋಮೀಟರ್ ಪೈಪ್‍ಲೈನ್ ಒಳಗೊಂಡ 40.01 ಕೋಟಿ ವೆಚ್ಚದ ಒಳಚರಂಡಿ ಕಾಮಗಾರಿಗೆ 2012ರಲ್ಲೇ ಸರ್ಕಾರದಿಂದ ಮಂಜೂರಾತಿ ದೊರಕಿತ್ತು. ಆದರೆ ಯೋಜನೆಗೆ ಸಂಸ್ಕರಣಾ ಘಟಕಕ್ಕೆ ಸೂಕ್ತ ಜಾಗ ಸಿಗದ ಕಾರಣ ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಸಲು ತಾಂತ್ರಿಕ ಅಡಚಣೆ ಉಂಟಾಗಿತ್ತು. ನಂತರ ಅಧಿಕಾರಿಗಳು ಕುಶಾಲನಗರ ಸುತ್ತಮುತ್ತ ಸರಿಯಾದ ಜಾಗಕ್ಕಾಗಿ ಹುಡುಕಾಟ ನಡೆಸಿದಾಗ ಗುಮ್ಮನಕೊಲ್ಲಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹತ್ತಿರ ವಾಲ್ಮೀಕಿ ಭವನದ ಬಳಿ ಸರ್ಕಾರಿ ಜಾಗ ಗುರುತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂಬರ್ 5/1ಎ ರಲ್ಲಿ ಬರುವ ಈ ಜಾಗದಲ್ಲಿ 1.9 ಎಕರೆ ಗುರುತಿಸಿ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಒಳಚರಂಡಿ ಕಾಮಗಾರಿಯಲ್ಲಿ ಬಹುಮುಖ್ಯ ಪಾತ್ರವಾಗಿರುವ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ನಿಗದಿಯಾಗಿದ್ದ ಜಾಗ ವ್ಯಾಜ್ಯದಲ್ಲಿರುವ ಹಿನ್ನಲೆಯಲ್ಲಿ ಅಲ್ಲಿನ ಕೆಲಸ ಮಾತ್ರ ಇನ್ನೂ ಪ್ರಾರಂಭ ಗೊಂಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಹಲವು ಬಾರಿ ಪರಿಶೀಲನೆ ಕೂಡ ನಡೆದಿತ್ತು.

ಈ ಹಿಂದೆ ಗುರುತು ಮಾಡಿದ್ದ ಜಾಗದ ಪಕ್ಕದಲ್ಲಿಯೇ ಪರ್ಯಾಯ ವಾದ ಜಾಗವನ್ನು ಗುರುತಿಸಿ ಈ ಜಾಗದಲ್ಲಿ ಸಂಸ್ಕರಣಾ ಘಟಕ ನಿರ್ಮಾಣ ಮಾಡಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಗಳು ಸೂಚನೆ ನೀಡಿದ್ದಾರೆ. ಸಧ್ಯದಲ್ಲಿಯೇ ಕಾಮಗಾರಿ ಮತ್ತೆ ಪ್ರಾರಂಭಗೊಳ್ಳಲಿದೆ ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂದಿನ 1 ವರ್ಷ ದೊಳಗೆ ಕಾಮಗಾರಿ ಪೂರ್ಣ ಗೊಳ್ಳಲಿದೆ ಎಂದು ಒಳಚರಂಡಿ ಮಂಡಳಿ ಸಹಾಯಕ ಅಭಿಯಂತರ ಆನಂದ್ ಶಕ್ತಿಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಯೋಜನೆಯ ಕಾಮಗಾರಿ ನಿರ್ಮಾಣಕ್ಕೆ ಗುರುತಿಸಿದ್ದ ಜಾಗದ ಬಗ್ಗೆ ಗೊಂದಲ ಉಂಟಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಸಧ್ಯದಲ್ಲಿಯೇ ಕೆಲಸ ಪುನರಾರಂಭ ಗೊಳ್ಳಲಿದೆ ಎಂದಿದ್ದಾರೆ.

ಪಟ್ಟಣಕ್ಕೆ ಒಳಚರಂಡಿ ಯೋಜನೆ ಮಂಜೂರಾದ ಬಳಿಕ ಪಟ್ಟಣ ವ್ಯಾಪ್ತಿಯಲ್ಲಿ ಸುಸ್ಥಿತಿಯಲ್ಲಿದ್ದ ರಸ್ತೆಗಳು ಇದೀಗ ಸಂಪೂರ್ಣ ಹದಗೆಟ್ಟಿರುವದು ಕಾಣಬಹುದು. ಒಳಚರಂಡಿ ಕಾಮಗಾರಿಗೆ ಪಟ್ಟಣದ ಎಲ್ಲ ರಸ್ತೆಗಳನ್ನು ಅಗೆದು ಪೈಪ್‍ಲೈನ್ ಅಳವಡಿಸಿದ ಹಿನ್ನಲೆಯಲ್ಲಿ ಪಟ್ಟಣದಾದ್ಯಂತ ರಸ್ತೆ ಸ್ಥಿತಿ ಹೇಳತೀರದಷ್ಟು ಹದಗೆಟ್ಟು ಹೋಗಿದೆ.

ಕಳೆದ ಎರಡು ವರ್ಷಗಳಿಂದ ಸಂಭವಿಸಿದ ಪ್ರಾಕೃತಿಕ ವಿಕೋಪ ಹಾಗೂ ಜಲಪ್ರಳಯದಿಂದ ಪಟ್ಟಣದಲ್ಲಿ ಕೈಗೊಂಡಿದ್ದ ಒಳಚರಂಡಿ ಕಾಮಗಾರಿಗೆ ಅಪಾರ ಪ್ರಮಾಣದಲ್ಲಿ ಹಾನಿ ಕೂಡ ಉಂಟಾಗಿದೆ. ಕೆಲವು ಕಡೆಗಳಲ್ಲಿ ಮ್ಯಾನ್ ಹೋಲ್‍ಗಳು ಒಡೆದು ಹೋಗಿವೆ. ಅಲ್ಲದೆ ಪೈಪ್ ಲೈನ್‍ಗಳು ಕುಸಿದಿವೆ. ಇದರೊಂದಿಗೆ ಒಳಚರಂಡಿ ಕಾಮಗಾರಿಯ ಪೈಪ್‍ಲೈನ್‍ಗಾಗಿ ರಸ್ತೆಯ ಮಧ್ಯದಲ್ಲಿ ತೆಗೆದಿದ್ದ ಗುಂಡಿಯನ್ನು ಸರಿಯಾಗಿ ಮುಚ್ಚದೆ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿರುವದು ಕಾಣಬಹುದು. ನದಿ ಬದಿಯಲ್ಲಿ ಅಳವಡಿಸಿರುವ ಮ್ಯಾನ್‍ಹೋಲ್‍ಗಳು ಬಹುತೇಕ ನದಿ ಪಾಲಾಗಿವೆ.

ಕೂಡಲೆ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಿ ಪಟ್ಟಣದ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಲೋಕಾರ್ಪಣೆಗೊಳಿಸುವದರೊಂದಿಗೆ ಸ್ವಚ್ಛ ಕುಶಾಲನಗರ ಹಾಗೂ ಸ್ವಚ್ಛ ಕಾವೇರಿ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

- ವರದಿ: ಚಂದ್ರಮೋಹನ್