ಶ್ರೀಮಂಗಲ, ಸೆ. 27: ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 50.89 ಲಕ್ಷ ರೂಪಾಯಿ ನಿವ್ವಳ ಲಾಭದಲ್ಲಿದೆ ಎಂದು ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಚ್ಚಮಾಡ ಯು. ಮುತ್ತಪ್ಪ ಸಂಘದ ಸಭಾಂಗಣದಲ್ಲಿ ನಡೆದ 2018-19ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ತಿಳಿಸಿದರು.
ಮಹಾಸಭೆಯ ಅಧ್ಯಕ್ಷತೆ ವಹಿಸಿ ಸಂಘದ ಪ್ರಗತಿಯ ಕುರಿತು ಮಾಹಿತಿ ನೀಡಿದ ಅವರು, ಸಂಘವು 1976ರಲ್ಲಿ ನೋಂದವಣೆಯಾಗಿದ್ದು 43 ಸುದೀರ್ಘ ವರ್ಷಗಳು ಉತ್ತಮ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ಪ್ರಸಕ್ತ 2018-19ನೇ ವರ್ಷ ರೂ. 50.89 ಲಕ್ಷದಷ್ಟು ಅತೀ ಹೆಚ್ಚು ಲಾಭ ಗಳಿಸಿದೆ. ಲಾಭದಿಂದ ಸದಸ್ಯರಿಗೆ ಅವರಿಂದ ಪಾವತಿಯಾದ ಪಾಲು ಭಂಡವಾಳದ ಶೇ. 25 ಡಿವಿಡೆಂಟ್ ನಿಧಿ ವಿತರಿಸಲಾಗುವದು. 2015 ರಿಂದ 2019 ರವರೆಗಿನ ಸತತ 5 ವರ್ಷಗಳು ಸಂಘ ಲೆಕ್ಕ ಪರಿಶೀಲನೆ ವರ್ಗಿಕರಣದಲ್ಲಿ “ಎ” ತರಗತಿ ಪಡೆದಿದೆ.
ಸಂಘದಲ್ಲಿ “ಎ” ತರಗತಿ ಸದಸ್ಯರು 3 ಸಾವಿರ ಇದ್ದು, ಅವರಿಂದ ಪಾವತಿಯಾದ ಪಾಲು ಬಂಡವಾಳ ರೂ. 1.19 ಕೋಟಿ, ಕ್ಷೇಮ ನಿಧಿ ಹಾಗೂ ಇತರ ನಿಧಿ ಸೇರಿ ಒಟ್ಟು ನಿಧಿಗಳು ರೂ. 1.81 ಕೋಟಿ. ನಿರಖು, ಸಂಚಯ, ಇತರೆ ಠೇವಣಿ ಸೇರಿ ಒಟ್ಟು ಠೇವಣಿ ಸಂಗ್ರಹಣೆ ರೂ. 13 ಕೋಟಿ. ಈ ಎಲ್ಲ ರೂಪದಲ್ಲಿ ಸಂಗ್ರಹವಾದ ಮೊಬಲಗನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಲ್ಲಿ ಪಾಲು ಭಂಡವಾಳ, ನಿರಖು ಠೇವಣಿ ಮತ್ತು ಸಹಕಾರ ಸಂಘ-ಸಂಸ್ಥೆಗಳಲ್ಲಿ ಪಾಲು ಭಂಡವಾಳ ಠೇವಣಿಗಳ ರೂಪದಲ್ಲಿ ಹೂಡಿಕೆ ಮಾಡಿದ್ದು ರೂ. 5.30 ಕೋಟಿ ಇರುತ್ತದೆ.
ಸದಸ್ಯರಲ್ಲದೆ 64 ಸ್ವ ಸಹಾಯ ಗುಂಪುಗಳ ಸದಸ್ಯರು, ಸಾವಿರಕ್ಕೂ ಅಧಿಕ ನಾಮಿನಲ್ ಸದಸ್ಯರು ಠೇವಣಿ, ಕೃಷಿ, ಕೃಷಿಯೇತರ ಸಾಲದ ವ್ಯವಹಾರದಲ್ಲಿ ಸೌಲಭ್ಯ ಪಡೆದಿರುತ್ತಾರೆ. 635 ಸದಸ್ಯರಿಗೆ ರೂ. 8.64 ಕೋಟಿ ಕೃಷಿ ಸಾಲ ವಿತರಿಸಿದ್ದು ವಾಯಿದೆ ಮೀರದೆ ಶೇ. 100 ವಸೂಲಾತಿ ಆಗಿದೆ. ಒಟ್ಟು 573 ಸದಸ್ಯರಿಗೆ ಕೆ.ಸಿ.ಸಿ. ಸಾಲ ಮನ್ನಾ ರೂ. 4.49 ಕೋಟಿ ಸರ್ಕಾರದಿಂದ ಲಭಿಸಬೇಕಾಗಿದೆ. ಕೆಲವು ಸದಸ್ಯರ ರುಪೇ ಖಾತೆಗೆ ಮೊತ್ತ ಜಮ ಆಗಿದೆ.
ಡಿ.ಸಿ.ಸಿ. ಬ್ಯಾಂಕ್ನಿಂದ ರೂ. 9.46 ಕೋಟಿ ಸಾಲ ಪಡೆದು, ಸ್ವಂತ ಭಂಡವಾಳ ಮೊತ್ತ ಸೇರಿಸಿ ಒಟ್ಟು ರೂ. 19.22 ಕೋಟಿ ಕೃಷಿ ಸಾಲ ಮತ್ತು ಕೃಷಿಯೇತರ ಸಾಲ ವಿತರಿಸಲಾಗಿದೆ. 2018- 19 ನೇ ಸಾಲಿನಲ್ಲಿ ರೂ. 155.44 ಕೋಟಿ ಜಮ-ಖರ್ಚು ವಹಿವಾಟು ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಶೇ. 100 ರಷ್ಟು ವಾಯಿದೆ ಮೀರದೆ ಸಾಲ ಮರುಪಾವತಿ ಮಾಡಬೇಕೆಂದೂ, ಸಂಘ ಅಭಿವೃದ್ಧಿ ಸಾಧಿಸಲು ಸದಸ್ಯರೆಲ್ಲರು ಸಹಕರಿಸಬೇಕೆಂದು ಕೇಳಿಕೊಂಡ ಅವರು ಸಂಘದಿಂದ ದೊರೆಯುವ ಸೌಲಭ್ಯ ಪಡೆದುಕೊಂಡು ಸದಸ್ಯರಿಂದ ಸದಸ್ಯರಿಗಾಗಿ ಸದಸ್ಯರದೆ ಸಂಘವಾಗಿ ಬೆಳೆಸಲು ಎಲ್ಲಾ ಸದಸ್ಯರ ಸಹಕಾರ ಅಗತ್ಯ ಎಂದರು.
ಮಹಾಸಭೆಯ ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಎಂ.ಯು. ಮುತ್ತಪ್ಪ, ಉಪಾಧ್ಯಕ್ಷ ಟಿ.ಬಿ. ಕರುಂಬಯ್ಯ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ.ಎಸ್. ಸೀತಮ್ಮ, ನಿರ್ದೇಶಕರಾದ ಸಿ.ಜೆ.ರಂಜಿ, ಟಿ.ಕೆ. ಸೋಮಣ್ಣ, ಕೆ.ಬಿ. ಅರುಣ, ಕೆ.ಎಂ. ಅಪ್ಪಣ್ಣ, ಟಿ.ಎಂ. ಉತ್ತಪ್ಪ, ಎಂ.ಎಂ. ತಂಗಮ್ಮ, ಕೆ.ಯು. ದೇವಮ್ಮಾಜಿ, ಎಂ.ಎಸ್. ಶಂಭು, ಕೆ.ಎಸ್. ಉಮೇಶ್, ಪಿ.ಕೆ. ಚುಬ್ರ, ಹೆಚ್.ಸಿ. ರಾಜು, ಕುಟ್ಟ ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕ ಅಪ್ಪಯ್ಯ, ಡಿ.ಸಿ.ಸಿ. ಬ್ಯಾಂಕ್ ಪರ ಮೇಲ್ವಿಚಾರಕ ಎಂ.ಬಿ. ಅಯ್ಯಪ್ಪ ಉಪಸ್ಥಿತರಿದ್ದರು. ಸಭೆಯಲ್ಲಿ ಎಂ.ಎಸ್. ಉಷಾ ಪ್ರಾರ್ಥಿಸಿ, ಟಿ.ಬಿ. ಕರುಂಬಯ್ಯ ಸ್ವಾಗತಿಸಿ, ಸಿ.ಜೆ. ರಂಜಿ ವಂದಿಸಿದರು.