ಗೋಣಿಕೊಪ್ಪಲು, ಸೆ. 27: ವಿಜ್ಞಾನದಿಂದ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ. ಆದರೆ ಆಧ್ಯಾತ್ಮದಿಂದ ಜೀವನದಲ್ಲಿ ಸುಖ, ನೆಮ್ಮದಿ, ಆನಂದ ಪಡೆಯಲು ಸಾಧ್ಯವಿದೆ ಎಂದು ರಾಮಕೃಷ್ಣ ಮಿಷನ್ನ ಉಪಾಧ್ಯಕ್ಷ ಚೆನೈ ಆಶ್ರಮದ ಅಧ್ಯಕ್ಷ ಗೌತಮನಂದಾಜೀ ಮಹಾರಾಜ್ ಅಭಿಪ್ರಾಯಪಟ್ಟರು.
ಪೊನ್ನಂಪೇಟೆಯ ರಾಮಕೃಷ್ಣ ಶಾರದಾ ಆಶ್ರಮದಲ್ಲಿ ಆಯೋಜನೆಗೊಂಡಿದ್ದ ಭಕ್ತರಿಗೆ ಮಂತ್ರ ದೀಕ್ಷೆ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಗೌತಮನಂದಾಜಿ ಅವರು ಮನುಷ್ಯನ ಜೀವನದಲ್ಲಿ ತೃಪ್ತಿ ಅನ್ನುವದು ಇಲ್ಲದಂತಾಗಿದೆ. ತನ್ನ ಜೀವನವನ್ನು ಅತೃಪ್ತಿಯಿಂದ ಮುಗಿಸುತ್ತಾನೆ. ಅನುಭವದಿಂದ ಬುದ್ಧಿ ಪ್ರಾಪ್ತವಾಗುತ್ತದೆ. ಅನಂತ ಜೀವನ ಆತ್ಮದಲ್ಲಿದೆ, ಬೆಳಿಗ್ಗೆ, ಸಂಜೆ ಭಗವಂತನ ಧ್ಯಾನ ಮಾಡುವದರಿಂದ ನೆಮ್ಮದಿ ಕಾಣಬಹುದಾಗಿದೆ, ಹೆಚ್ಚು ಹೆಚ್ಚು ರಾಮಕೃಷ್ಣರ ಪುಸ್ತಕ, ವಚನಗಳನ್ನು ಓದಬೇಕು ಎಂದರು. ಪೊನ್ನಂಪೇಟೆ ರಾಮಕೃಷ್ಣ ಆಶ್ರಮ ಸೇವಾ ಕಾರ್ಯದಲ್ಲಿ ಮುಂದಿರುವದನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಆಶ್ರಮದ ಅಧ್ಯಕ್ಷ ಬೋದಸ್ವರೂಪ ನಂದಾಜೀ ಮಹರಾಜ್, ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಲ್ಲಿ ನೊಂದ ಸಂತ್ರಸ್ತರ ಕಷ್ಟದಲ್ಲಿ ಭಾಗಿಯಾಗುವ ಮೂಲಕ ಸ್ಪಂದಿಸಿದ್ದೇವೆ. ರೂ. 80 ಲಕ್ಷ ಹಣದಲ್ಲಿ ವಿವಿಧ ರೀತಿಯ ಕಾರ್ಯಕ್ರಮ ನೀಡುವ ಮೂಲಕ ಆರ್ಥಿಕ ಅಭಿವೃದ್ಧಿ ಕಾಣಲು ಹೊಲಿಗೆ ಯಂತ್ರ ವಿತರಣೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ನೀಡಿದ್ದೇವೆ. ಜಿಲ್ಲೆಯ ಹಲವು ಭಾಗಗಳಲ್ಲಿ ಈ ಕೆಲಸಗಳು ನಿರಂತರವಾಗಿ ನಡೆಯುತ್ತಲೇ ಬರುತ್ತಿವೆ. ಆಶ್ರಮದ ಅನುಯಾಯಿಗಳು, ಭಕ್ತರು ನೀಡುವ ಸಹಾಯವನ್ನು ಅರ್ಹರಿಗೆ ತಲಪಿಸುತ್ತಿದ್ದೇವೆ. ಇದರಿಂದ ಭಗವಂತನ ಕೆಲಸ ಮಾಡಿದ ತೃಪ್ತಿ ಸಿಕ್ಕಿದಂತಾಗಿದೆ ಎಂದರು.
ಆಶ್ರಮದ ವತಿಯಿಂದ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರ, ವೀಡ್ ಕಟ್ಟರ್, ವಿದ್ಯಾರ್ಥಿ ವೇತನವನ್ನು ಇದೇ ಸಂದರ್ಭದಲ್ಲಿ ಗೌತಮನಂದಾಜೀ ಮಹರಾಜ್ ವಿತರಿಸಿದರು.
ಆಶ್ರಮದ ಸಲಹಾ ಸಮಿತಿ ಸದಸ್ಯ ಡಾ. ಶಿವಪ್ಪ ಪ್ರವಚನ ನೀಡಿದರು.
ಸಲಹಾ ಸಮಿತಿ ಸದಸ್ಯರಾದ ಡಾ. ಚಂದ್ರಶೇಖರ, ಕಾಕಮಾಡ ಚಂಗಪ್ಪ, ಚೆರಿಯಪಂಡ ಉಮೇಶ್ ಉತ್ತಪ್ಪ, ಕೊಂಗಂಡ ಜಪ್ಪು ಸುಬ್ಬಯ್ಯ, ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಆಶ್ರಮದ ಸ್ವಾಮೀಜಿಗಳಾದ ಪರಹಿತನಂದಾಜೀ ಮಹರಾಜ್ ವಂದಿಸಿದರು. ಡಾ.ಶಿವಕುಮಾರ್ ನಿರೂಪಿಸಿದರು.
-ಚಿತ್ರ-ಸುದ್ದಿ : ಹೆಚ್.ಕೆ.ಜಗದೀಶ್.