ಸಿದ್ದಾಪುರ, ಸೆ. 28: ವೀರಾಜಪೇಟೆ ತಾಲೂಕಿನ ಹಾಡಿಗಳು ಸೇರಿದಂತೆ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ವಿವಿಧ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಚೆನ್ನಯ್ಯನ ಕೋಟೆ ಗ್ರಾಮಪಂಚಾಯಿತಿ ವ್ಯಾಪ್ತಿಗೊಳಪಡುವ ಚೊಟ್ಟೆಪಾರೆ ಹಾಡಿಯಲ್ಲಿ ಹಾಡಿಯ ನಿವಾಸಿಗಳು ಜಿಲ್ಲಾಧಿಕಾರಿಗಳ ಉತ್ತೇಜನದ ಮೇರೆಗೆ ತಾವು ವಾಸಿಸುವ ಕಾಡಿನೊಳಗೆ ಭತ್ತ ಕೃಷಿಯನ್ನು ಮಾಡಿದ್ದರು ಈ ಹಿನ್ನೆಲೆಯಲ್ಲಿ ಹಾಡಿಯ ನಿವಾಸಿಗಳು 30 ಎಕರೆ ಭತ್ತದ ಕೃಷಿಯನ್ನು ಉತ್ತಮ ರೀತಿಯಲ್ಲಿ ಮಾಡಿರುವದನ್ನು ಜಿಲ್ಲಾಧಿಕಾರಿ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು. ಹಾಡಿಯ ನಿವಾಸಿಗಳು ಕಾಡಿನೊಳಗೆ ವನ್ಯಪ್ರಾಣಿಗಳ ಹಾವಳಿ ಇದ್ದರೂ ಕೂಡ ಭತ್ತದ ಕೃಷಿಯನ್ನು ಮಾಡಿರುವ ಬಗ್ಗೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗದ್ದೆ ಕೃಷಿಗಳನ್ನು ಪರಿಶೀಲನೆ ನಡೆಸಿದರು. ಇದಕ್ಕೂ ಮೊದಲು ಗೋಣಿಕೊಪ್ಪಲಿನ ಅರುವತ್ತೊಕ್ಲು ಬಳಿ ಕಸವಿಲೇವಾರಿಗೆ ಸಂಬಂಧಿಸಿದಂತೆ ಹಳ್ಳಿಗಟ್ಟುವಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ ಬಗ್ಗೆ ಮಾಹಿತಿ ಪಡೆದುಕೊಂಡರು ಹಾಗೂ ಗೋಣಿಕೊಪ್ಪಲಿನ ಸೀತಾ ಕಾಲೋನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಂದ ಗ್ರಾಮದಲ್ಲಿ ಆದಿವಾಸಿ ಗಳಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಚರ್ಚೆ ನಡೆಸಿದರು. ನಂತರ ವೀರಾಜಪೇಟೆಯ ಜೂನಿಯರ್ ಕಾಲೇಜಿಗೆ ಭೇಟಿನೀಡಿ ಕಾಲೇಜಿಗೆ ನೂತನ ಕಟ್ಟಡ ನಿರ್ಮಿಸುವ ಬಗ್ಗೆ ಚರ್ಚಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ ಜಿಲ್ಲಾ ಐಟಿಡಿಪಿ ಅಧಿಕಾರಿ ಶಿವಕುಮಾರ್ ಹಾಗೂ ಇನ್ನಿತರರು ಹಾಜರಿದ್ದರು.