ಚೆಟ್ಟಳ್ಳಿ, ಸೆ. 27: ಚೆಟ್ಟಳ್ಳಿ ಸಹಕಾರ ಸಂಘವು ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ಮಾದರಿಯ ಸಹಕಾರ ಸಂಘವಾಗಿದೆ. ಅಭಿವೃದ್ಧಿ ಪಥದಲ್ಲಿ ಸಾಗುವದರ ಜೊತೆಗೆ ಯಾವದೇ ರೀತಿಯ ಸಾಲ ಪಡೆಯದೇ ರೈತರು ನೀಡಿರುವ ದೇಣಿಗೆ, ಮಂತ್ರಿಗಳ ಹಾಗೂ ಶಾಸಕರ ನಿಧಿಯಿಂದಲೇ ನರೇಂದ್ರ ಮೋದಿ ರೈತ ಸಹಕಾರ ಭವನ ನಿರ್ಮಿಸಲು ಸಾಧ್ಯವಾಗಿದೆಂದು ಸಂಘದ ನರೇಂದ್ರ ಮೋದಿ ರೈತ ಸಹಕಾರ ಭವನ ಸಭಾಂಗಣದಲ್ಲಿ ನಡೆದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದರು.
ಈ ವರ್ಷ ಸಂಘಕ್ಕೆ ರೂ. 20 ಲಕ್ಷ ನಿವ್ವಳ ಲಾಭಾಂಶ ಬಂದಿದ್ದು, ಸರಕಾರದಿಂದ ಬರಲು ಬಾಕಿ ಇರುವ ರೂ. 16 ಲಕ್ಷ ಬಂದಿದ್ದರೆ ಒಟ್ಟು ರೂ. 36 ಲಕ್ಷ ಲಾಭಾಂಶ ಬರಲು ಸಾಧ್ಯವಾಗುತಿತ್ತೆಂದರು. ಕಳೆದ ಮಹಾಸಭೆಯಲ್ಲಿ ರೈತರಿಗೆ ನೀಡಿದ ಭರವಸೆಯಂತೆ ಕೊಡಗಿನಲ್ಲಾದ ಅತಿವೃಷ್ಟಿ, ಚುನಾವಣೆಯ ನಡುವೆಯೂ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದೇವೆ ಎಂದರು. ಸಂಘದ ಮುಖ್ಯ ಕಟ್ಟಡದ ಮೇಲಂತಸ್ಥಿನಲ್ಲಿ 3 ವ್ಯಾಪಾರ ಮಳಿಗೆ ಹಾಗೂ 3 ವಸತಿಗೃಹ ನಿರ್ಮಿಸುವ ಬಗ್ಗೆ ತಿಳಿಸಿದರು. ಹಲವು ರೈತರ ಆರ್‍ಟಿಸಿ ಜಂಟಿಯಾಗಿದ್ದು, ಈ ನಿಟ್ಟಿನಲ್ಲಿ ನಮೂನೆ 3 ಹಾಗೂ ರಿಜಿಸ್ಟ್ ಮಾಡಿ ಸಾಲ ನೀಡುತಿದ್ದೇವೆ. ರೈತರ ಜಾಮೀನಿನ ಮೇರೆಗೆ ವಾಹನ ಸಾಲ ನೀಡಿದ್ದೇವೆ ಎಂದರು.
ಸಂಘದ ಜಾಗ ಸಂಘದ ಹೆಸರಿಗೆ ಆಗದಿದ್ದರೂ ಸಂಘದ ಉಪ ಸಮಿತಿ ರಚನೆ ಮಾಡಿದೆ ವಿಶೇಷ ಮಹಾಸಭೆ ಕರೆಯದೆ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ರತ್ತು ಚಂಗಪ್ಪ ಪ್ರಶ್ನಿಸಿದಕ್ಕೆ ಜಾಗವನ್ನು ಮಾರಾಟ ಮಾಡುವಾಗ ನೋಂದಣಿ ಮಾಡಿರುವ ದಾಖಲೆ ಇದೆ. ಜಾಗ ನೀಡಿದವರು ಸಂಘದ ಹೆಸರಿಗೆ ಮಾಡಿಕೊಡದಿ ರುವದರಿಂದ ಆಗಿನ ಆಡಳಿತ ಮಂಡಳಿ ದಾಖಲೆ ಮಾಡಿಕೊಳ್ಳದ ರಿಂದ ಪ್ರಸ್ತುತ ಆಡಳಿತ ಮಂಡಳಿ ದಾಖಲೆ ನಿರ್ಮಿಸುವ ಪರಿಸ್ಥಿತಿ ಯಾಗಿದೆ ಎಂದು ಮಣಿ ಉತ್ತಪ್ಪ ಏರು ಧ್ವನಿಯಿಂದ ಹೇಳುತ್ತಿದ್ದಂತೆ ಮುಳ್ಳಂಡ ತಿಮ್ಮಯ್ಯ ಅವರು ಹಲವು ವರ್ಷ ಗಳಿಂದ ಆಡಳಿತ ಮಂಡಳಿಯಲ್ಲಿದ್ದೀರ ನೀವೇನು ಮಾಡುತ್ತಿದ್ದೀರ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದಾಗ ಜಾಗ ನೀಡಿದವರ ಕುಟುಂಬದ ಸದಸ್ಯರು ರೊಚ್ಚಿಗೆದ್ದರು. ಇದರಿಂದ ಕೆಲ ಸಮಯ ಸಭೆ ಗೊಂದಲದ ಗೂಡಾಯಿತು.
ಆಂತರಿಕ ಲೆಕ್ಕಪರಿಶೋಧಕರನ್ನು ನೇಮಕ ಮಾಡಿಯೂ ಆಡಿಟ್ ವರದಿಯಲ್ಲಿ ಲೆಕ್ಕಪತ್ರದ ಬಗ್ಗೆ ಕೆಲವೊಂದು ನ್ಯೂನತೆ ಇರುವ ಬಗ್ಗೆ ದಾಖಲಿಸಿರುವದು ಕಂಡುಬಂದ ಬಗ್ಗೆ ರತ್ತು ಚಂಗಪ್ಪ ಪ್ರಶ್ನಿಸಿದಾಗ, ಆಂತರಿಕ ಲೆಕ್ಕ ಪರಿಶೋಧಕರೇ ಜವಾಬ್ದಾರ ರಾಗುತ್ತಾರೆಂದು ನ್ಯೂನತೆಗಳನ್ನು ಸರಿಪಡಿಸಿಕೊಂಡಿದ್ದೇವೆಂದು ಅಧ್ಯಕ್ಷರು ಸವiಜಾಹಿಸಿಕೆ ನೀಡಿದರು. ವರದಿಯಲ್ಲಿ ಕಟ್ಟಡ ಬಾಡಿಗೆ ಹಣ ಕಡಿಮೆ ವಸೂಲಿಯಾದ ಬಗ್ಗೆ ತಿಳಿಸಿದ್ದು, ಸಂಘದ ಕಟ್ಟಡವನ್ನು ರೈತರ ಹಣದಿಂದಲೇ ನಿರ್ಮಿಸಿದ್ದು ಲಾಭಕ್ಕಿಂತ ರೈತರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ರೈತರ ಕಾರ್ಯಕ್ರಮಕ್ಕೆ ರಿಯಾಯಿತಿ ದರದಲ್ಲಿ ನೀಡಿದೇವೆಂದು ಅಧ್ಯಕ್ಷರು ತಿಳಿಸಿದರು.
ಸಂಘದ ಹಿಂದಿನ ಜಾಗದ ವ್ಯಾಜ್ಯದಲ್ಲಿ ಪಂಚಾಯಿತಿಪರ ತೀರ್ಮಾನವಾದರೂ ಸಂಘದ ಸದಸ್ಯರು ಗಳ ಅನುಮತಿ ಪಡೆಯದೆ ಹೈಕೋರ್ಟ್‍ನಲ್ಲಿ ದಾವೆ ಹೂಡಿರುವದು ಎಷ್ಟು ಸರಿ? ಎಂದು ಪೊರಿಮಂಡ ದಿನಮಣಿ ಪೂವಯ್ಯ ಪ್ರಶ್ನಿಸಿದರು. ಜಾಗ ಪಂಚಾಯಿತಿ ಆಸ್ತಿಯಲ್ಲ, ಖಾಸಗಿ ಸ್ವತ್ತು ರೈತರಿಗೆ ಅನುಕೂಲವಾಗುವಂತೆ ಹೋರಾಟ ಮಾಡಿದ್ದೇವೆ. ಮುಂದೆಯೂ ಸಂಘಕ್ಕೆ ಪಡೆದೇ ಪಡೆಯುತ್ತೇವೆಂದು ಮಣಿ ಉತ್ತಪ್ಪ ತಿಳಿಸಿದರು.
ಸಂಘದ ಕಾರ್ಯಚಟುವಟಿಕೆ ಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಆಡಳಿತ ಮಂಡಳಿಯ ನಿರ್ದೇಶಕರಾದ ಹೆಚ್.ಎಸ್. ತಿಮ್ಮಪ್ಪಯ್ಯ ಹಾಗೂ ಕೆ.ಎಂ. ಅಚ್ಚಪ್ಪ ಗೈರು ಹಾಜರಿಯ ಬಗ್ಗೆ ಸದಸ್ಯರು ಪ್ರಶ್ನಿಸಿದರು. ಹಲವು ಕಾರಣದಿಂದ ಇವರು ರಾಜೀನಾಮೆ ನೀಡಿದ್ದಾರೆ. ಈ ಸ್ಥಾನಕ್ಕೆ ನಿರ್ದೇಶಕರ ಆಯ್ಕೆ ಮಾಡುವದಾಗಿ ತಿಳಿಸಿದ್ದರೂ ಸಂಘದಲ್ಲಿ ಕಾರ್ಯನಿರ್ವಹಿಸುತಿದ್ದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರು ಕರ್ತವ್ಯ ಲೋಪವೆಸಗಿದ್ದರಿಂದ ಅಮಾನತ್ತಿನಲ್ಲಿಡಲಾಗಿದೆ. ತನಿಖೆ ನಂತರ ಮುಂದಿನ ಕ್ರಮ ಕೈಗೊಂಡು ಮುಖ್ಯ ಕಾರ್ಯನಿರ್ವಹಣಾಧಿ ಕಾರಿಯನ್ನು ಹೊಸದಾಗಿ ನೇಮಕ ಮಾಡಲಾಗುವದೆಂದು ಅಧ್ಯಕ್ಷರು ತಿಳಿಸಿದರು.
ಸನ್ಮಾನ: ರಾಷ್ಟ್ರೀಯ ರ್ಯಾಲಿಪಟು ಕೊಂಗೇಟಿರ ಬೋಪಯ್ಯ, ಸಮಾಜ ಸೇವೆ ಹಾಗೂ ನಿಸರ್ಗ ಚಿಕಿತ್ಸೆಯ ಸೇವೆಗೆ ಗೌರವ ಡಾಕ್ಟರೇಟ್ ಪಡೆದ ಮುಳ್ಳಂಡ ಕಾವೇರಪ್ಪ ಅವರಿಗೆ ಒಡಿಕತ್ತಿ ನೀಡಿ ಗೌರವಿಸಲಾಯಿತು. 7 ರಿಂದ ಪದವಿ ತರಗತಿಯಲ್ಲಿ ಅತೀ ಹೆಚ್ಚು ಅಂಕಪಡೆದ ಸದಸ್ಯರ ಮಕ್ಕಳಿಗೆ ಬಹುಮಾನ ನೀಡಲಾಯಿತು.
ಸಂಘದಲ್ಲಿ ಮೃತಪಟ್ಟ ಸದಸ್ಯರಿಗೆ ಸಭೆಯಲ್ಲಿ ಗೌರವ ಸೂಚಿಸಲಾಯಿತು. ಸಂಘದ ವರದಿ, ಲೆಕ್ಕಪತ್ರ, ಬಡ್ಜೆಟ್‍ಗಿಂತ ಹೆಚ್ಚಿಗೆ ಖರ್ಚಾಗಿ ರುವದಕ್ಕೆ ಅಂಗೀಕಾರ, ಮುಂದಿನ ಯೋಜನೆ ಅನುಮೋದನೆÉ, ಲಾಭ ವಿಲೇವಾರಿ ಮಾಡಲಾಯಿತು. ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದೆ ಸಂಕಷ್ಟಕ್ಕೆ ತಲಪಿದ್ದು, ಕೊಡಗಿಗೆ ಬರುತ್ತಿರುವ ಅಕ್ರಮ ಕರಿಮೆಣಸು ಆಮದನ್ನು ತಡೆಯುವದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸಂಘದ ಮೂಲಕ ಒತ್ತಡ ಹೇರುವದು ಹಾಗೂ ಇತರ ಜಿಲ್ಲೆಗಳಲ್ಲಿ ನೀಡುತ್ತಿರುವ ರೈತರಿಗೆ ಉಚಿತ ವಿದ್ಯುತನ್ನು ಕೊಡಗಿನ ರೈತರಿಗೆ ಆಗುತ್ತಿರುವ ಮಲತಾಯಿ ಧೋರಣೆಯ ಬಗ್ಗೆ ಒತ್ತಾಯಿಸ ಬೇಕೆಂದು ಎ.ಸಿ. ರಾಘವಯ್ಯ ಒತ್ತಾಯಿಸಿದರು.
ರೈತರ ದೇಣಿಗೆ ಹಾಗೂ ಸಹಕಾರದಿಂದ ಸಂಘದ ಅಭಿವೃದ್ಧಿ ಸಾಧ್ಯವೆಂದು ಅಧ್ಯಕ ಭಾಷಣದಲ್ಲಿ ಮಣಿ ಉತ್ತಪ್ಪ ಹೇಳಿದರು. ನಿರ್ದೇಶಕ ಪೇರಿಯನ ಪೂಣಚ್ಚ ವಂದಿಸಿ, ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯಗೊಂಡಿತು.
ಯಾಕೆ ಕಚ್ಚಾಡುತ್ತೀರಿ...ರೌಡಿಸಂ ನಡಿಯಲ್ಲ..
ಸಂಘದ ಜಾಗದ ವಿಚಾರ ಮಾತಿಗೆ ಮಾತು ಬೆಳೆದು ಬಾರಿ ಚರ್ಚೆಗೆ ಕಾರಣವಾಗುತ್ತಿದ್ದಂತೆ ಮಣಿ ಉತ್ತಪ್ಪ ಅವರು ಮಾತಿನ ನಡುವೆ ನಾಯಿಗಳಂತೆ ಯಾಕೆ ಕಚ್ಚಾಡುತ್ತೀರಿ ಎಂದ ಕೂಡಲೇ ಸನ್ನಿ ಅಯ್ಯಪ್ಪ, ಅಂಜನ್, ರತ್ತು ಚಂಗಪ್ಪ, ಆನಂದ್ ಸಿಟ್ಟಿಗೆದ್ದು ನಮ್ಮನ್ನು ನಾಯಿಗಳಿಗೆ ಹೋಲಿಕೆ ಮಾಡಿರುವದು ಖಂಡನೀಯ ಎಂದರು. ಹಲವು ಸದಸ್ಯರು ಧ್ವನಿಗೂಡಿಸಿದರೆ. ಮತ್ತೆ ಕೆಲವರು ಸಮಾಧಾನಪಡಿಸುವ ದೃಶ್ಯ ಕಂಡು ಬಂತು. ಮತ್ತೆ ಕೆಲವು ವಿಚಾರಗಳು ಬಾರಿ ಚರ್ಚೆಗೆ ಕಾರಣವಾದಂತೆ ಮಣಿ ಉತ್ತಪ್ಪ ರೌಡಿಸಂ... ನಡೆಯಲ್ಲ ಎಂದು ಬಿಟ್ಟರು. ಪುನಃ ಸಭೆ ಗದ್ದಲವಾಯಿತು. ಸಂಘ ಯಾರ ಕುಟುಂಬದ ಸೊತ್ತಲ್ಲ, ಯಾರ ವಂಶಪಾರಂಪರ್ಯದ ಅಧಿಕಾರ ನಡೆಯಲ್ಲವೆಂದಾಗ ಸಂಘದ ಚರ್ಚೆ ಬಿಟ್ಟು ವೈಯಕ್ತಿಕ ವಿಚಾರಗಳಿಗೆ ವೇದಿಕೆಯಾಯಿತು. ಸಭೆಯಲ್ಲಿದ್ದ ಉಳಿದ ಸದಸ್ಯರು ಮೂಕಪ್ರೇಕ್ಷಕರಾಗಿದ್ದರು.
- ಕರುಣ್ ಕಾಳಯ್ಯ/ಪಪ್ಪು ತಿಮ್ಮಯ್ಯ