ಕರಿಕೆ, ಸೆ. 27: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 8 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬೇಕಲ್ ಶರಣ್ಕುಮಾರ್ ಹೇಳಿದರು.
ಸಂಘದ ಸಭಾಂಗಣದಲ್ಲಿ ನಡೆದ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ 1951 ಸದಸ್ಯರಿದ್ದು, ರೂ. 112.79 ಲಕ್ಷ ಪಾಲು ಬಂಡವಾಳ ಹೊಂದಿರುತ್ತದೆ. ಸದಸ್ಯರ ಆರ್ಥಿಕ ಹಿತದೃಷ್ಟಿಯಿಂದ ವಿವಿಧ ಸಾಲ ಸೌಲಭ್ಯಗಳಾದ ಅಲ್ಪಾವಧಿ ಬೆಳೆಸಾಲ, ಜಾಮೀನು ಸಾಲ, ಪಿಗ್ಮಿ ಠೇವಣಿ ಸಾಲ, ಗೃಹೋಪಯೋಗಿ ವಸ್ತು ಖರೀದಿ ಸಾಲ, ವಾಹನ ಸಾಲ, ಹೈನುಗಾರಿಕೆ ಸಾಲ, ಚಿನ್ನಾಭರಣ ಸಾಲ, ಸ್ವಸಹಾಯ ಗುಂಪು ಹಾಗೂ ಜಂಟಿ ಬಾದ್ಯತಾ ಗುಂಪು ಸಾಲ ಹೀಗೆ ವಿವಿಧ ಬಗೆಯ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಸಂಘದ ಸದಸ್ಯರಲ್ಲಿ ಉಳಿತಾಯ ಮನೋಭಾವನೆ ಬೆಳೆಸಲು ಅನುಕೂಲವಾಗುವಂತೆ ಈಗಾಗಲೇ ಸಂಘದಿಂದ ಸದಸ್ಯರಿಗೆ ಉಳಿತಾಯ ಪೆಟ್ಟಿಗೆಯನ್ನು ವಿತರಿಸಲಾಗಿದ್ದು, ಉಳಿತಾಯ ಪೆಟ್ಟಿಗೆಯಲ್ಲಿ ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ಸದಸ್ಯರಿಗೆ ಸಂಘದ ವತಿಯಿಂದ ಪ್ರೋತ್ಸಾಹ ಧನವನ್ನು ನೀಡಲಾಗುವದು ಎಂದರು. ಸಭೆಯಲ್ಲಿ ಹಾಜರಿದ್ದ ಸದಸ್ಯರು ಜಾಮೀನು ಸಾಲದ ಬಡ್ಡಿ ದರವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದರು.
ಪ್ರತಿ ವರ್ಷದಂತೆ ಈ ವರ್ಷ ಕೂಡ ಪಿಯುಸಿ, ಎಸ್ಎಸ್ಎಲ್ಸಿ ಹಾಗೂ ಏಳನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಹೊಸಮನೆ ಮೀನಾಕ್ಷಿ, ನಿರ್ದೇಶಕರುಗಳಾದ ಕಟ್ಟಕೋಡಿ ರಘುರಾಮ, ಹೊಸಮನೆ ಹರೀಶ್, ರೆಲ್ಸನ್, ಗಂಗಾಧರ, ಅಭೀಷ್ ಗೋಕುಲ್, ಕುಞಂಣ್ಣ, ಕಟ್ಟಕೋಡಿ ಗುಣಶೀಲ, ಕೋಡಿ ಭಾರ್ಗವ ಜಯಪ್ರಕಾಶ್, ಹೊದ್ದೆಟ್ಟಿ ಮಿತ್ರಕುಮಾರ, ಡಿಸಿಸಿ ಬ್ಯಾಂಕ್ ಚೇರಂಬಾಣೆಯ ಶಾಖಾ ವ್ಯವಸ್ಥಾಪಕಿ ರತ್ನ, ಕೊ.ಜಿ.ಸ.ಕೇಂ. ಬ್ಯಾಂಕ್ ಪ್ರತಿನಿಧಿ ವಿ.ಜಿ. ಹರೀಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಸಿ. ಗಂಗಾಧರ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು.